ಮಹಾನಗರ: ಸಮಾಜ, ಮಠ ಹಾಗೂ ದೇವಸ್ಥಾನಗಳು ಒಟ್ಟು ಸೇರಿ ಕೆಲಸ ಮಾಡಿದರೆ ಕಷ್ಟವಾದುದನ್ನು ಸಾಧಿಸಬಹುದು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹೇಳಿದರು.
ಮಂಗಳೂರಿನ ರಥಬೀದಿಯ ಶ್ರೀ ವಿನಾಯಕ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಕಾರಿ ನಾಮ ಸಂವತ್ಸರದ 15ನೇ ಚಾತುರ್ಮಾಸ್ಯ ವ್ರತಾಚಾರಣೆಯ ಅಂಗವಾಗಿ 2ನೇ ದಿನದ ದೇಗುಲ ಭೇಟಿಯ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು.
ಕಟಪಾಡಿಯಲ್ಲಿ ಮಠ ನಿರ್ಮಾಣದ ಬಗ್ಗೆ ವಿಚಾರ ವಿನಿಮಯ ಮಾಡಿದ ಶ್ರೀಗಳು, ಮಠದ ಬೆಳವಣಿಗೆಯಲ್ಲಿ ಮಂಗಳೂರು ದೇವಸ್ಥಾನದ ಕೊಡುಗೆ ಅಪಾರ ಎಂದರು.
ಮೊದಲು ಮಠ, ಸನ್ನಿಧಿಯನ್ನು ಕೋ- ಆಪರೇಟಿವ್ ಸೊಸೈಟಿ ಆ್ಯಕ್ಟ್ ಅಡಿಯಲ್ಲಿ ಹಾಗೂ ಬಳಿಕ ಅದನ್ನು ಟ್ರಸ್ಟ್ ಅಡಿಯಲ್ಲಿ ತಂದು ಸಂಸ್ಥೆ ಮಾಡಬೇಕು ಎಂಬ ಯೋಜನೆ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಮಠದ ಅಭಿವೃದ್ಧಿ ಆಗಬೇಕು ಎಂಬ ನಿಟ್ಟಿನಲ್ಲಿ ಅಂದು ಇದ್ದಂತಹ ಸಮಿತಿಯನ್ನು ಬರ್ಖಾಸ್ತು ಮಾಡಿ ಹೊಸ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಮಠದ ನಿರ್ಮಾಣಕ್ಕೆ ಶ್ರಮಿಸಿದ ವ್ಯಕ್ತಿಗಳನ್ನು ಅವರು ಸ್ಮರಿಸಿದರು. ರಥಬೀದಿ ಎಂದರೆ ಕೇವಲ ಬೀದಿ ಮಾತ್ರವಾಗಿರದೆ ರಥವನ್ನೂ ಎಳೆಯುವ ಬೀದಿಯಾಗಬೇಕು. ಈ ನಿಟ್ಟಿಯಲ್ಲಿ ಬ್ರಹ್ಮರಥ ಆಗಬೇಕು ಎನ್ನುವ ಅಧ್ಯಕ್ಷರ ಆಶಯವನ್ನು ವಿಶ್ಲೇಷಿಸಿದ ಶ್ರೀಗಳು, ಶೀಘ್ರವಾಗಿ ಅವರ ಆಸೆ ಈಡೇರುವಂತಾಗಲಿ ಎಂದು ಆಶಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್, ಈಗ ‘ಆನೆಗುಂದಿ ಸಮಾಜ ಸೇವಾ ಎಜುಕೇಶನ್ ಟ್ರಸ್ಟ್ (ಎಸ್ಸೆಟ್) ಎನ್ನುವ ಹೆಸರಿನಲ್ಲಿ ನೋಂದಣಿ ಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 1ನೇ ಮೊಕ್ತೇಸರ ಕೇಶವ ಆಚಾರ್ಯ, 2ನೇ ಮೊಕ್ತೇಸರ ಸುಂದರ್ ಆಚಾರ್ಯ, 3ನೇ ಮೊಕ್ತೇಸ ರರಾದ ಲೋಕೇಶ್ ಆಚಾರ್ಯ, ಬೊಳ್ಳೂರು ಸೂರ್ಯ ಕುಮಾರ್, ತ್ರಾಸಿ ಪ್ರಭಾಕರ ಆಚಾರ್ಯ ಹಾಗೂ ಅಲೆವೂರು ಯೋಗೀಶ್ ಆಚಾರ್ಯ ಉಪಸ್ಥಿತರಿದ್ದರು. ಸುಂದರ್ ಆಚಾರ್ಯ ಸ್ವಾಗತಿಸಿದರು. ಚಾತುರ್ಮಾಸ್ಯ ಸಮಿತಿಯ ಗಂಗಾಧರ್ ಆಚಾರ್ಯ ಚಾತುರ್ಮಾಸ್ಯದ ಬಗ್ಗೆ ವಿವರಿಸಿದರು. ವಿನೋದ್ ಸುಜೀರ್ ನಿರೂಪಿಸಿದರು.