ಸೊಲ್ಲಾಪುರ: ವರ್ಷಕ್ಕೊಮ್ಮೆ ಮಹಿಳೆಗೆ ಗೌರವ ನೀಡಿದರೆ ಸಾಲದು. ಪ್ರತಿ ನಿತ್ಯವು ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು. ಮಹಿಳೆಯನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದು ಜಿಜಾವು ಬ್ರಿಗೇಡ್‌ನ ಸುನಂದಾ ರಾಜೇಗಾಂವಕರ್ ಹೇಳಿದರು.
ಅಕ್ಕಲಕೋಟ ಪಟ್ಟಣದ ಅನ್ನಛತ್ರ ಮಂಡಳಿ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಅನ್ನಛತ್ರ ಮಂಡಳಿ ಅಂಗಸಂಸ್ಥೆಯಾದ ಹಿರಕಣಿ ಮಹಿಳಾ ವಿವಿಧೋದ್ದೇಶ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸೀರೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸ್ತ್ರೀ-ಪುರುಷರಿಗೆ ಸಮಾನತೆಯಿದೆ. ಆದರೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಕೀಳಾಗಿ ಕಾಣುತ್ತಾರೆ. ಗಂಡು ಮಗುವಿಗೆ ಜನ್ಮ ನೀಡಿದರೆ ಸ್ವಾಗತಿಸುತ್ತಾರೆ. ಇಂತಹ ಮನಸ್ಥಿತಿ ಬದಲಾಗಬೇಕು ಎಂದರು.
ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ, ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ಮಾರ್ಗದರ್ಶನ, ಅನ್ನಛತ್ರ ಮಂಡಳಿ ಅಂಗಸಂಸ್ಥೆಯಾದ ಹಿರಕಣಿ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ಸಂಸ್ಥಾಪಕಿ ಅಧ್ಯಕ್ಷೆ ಅಲಕಾತಾಯಿ ಭೋಸಲೆ, ಕಾರ್ಯದರ್ಶಿ ಅರ್ಪಿತಾರಾಜೆ ಭೋಸಲೆ ನೇತೃತ್ವದಲ್ಲಿ 300 ಬಡ ಮಹಿಳೆಯರಿಗೆ ಸೀರೆ ವಿತರಿಸುವ ಮೂಲಕ ವಿಶ್ವ ಮಹಿಳಾ ದಿನ ಆಚರಿಸಿದರು.
ಈ ಸಂದರ್ಭದಲ್ಲಿ ಡಾ| ಅಸಾವರಿ ಪೆಡಗಾಂವಕರ್, ಡಾ| ಸಾಯಲಿ ಬಂದಿಛೋಡೆ, ಡಾ| ಗಿರಿಜಾ ರಾಜಿ ಮವಾಲೆ, ಲತಾ ಮೋರೆ, ಮಾಧುರಿ ಬಾಗ್, ವಾಗ್ಧರಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ವಿಮಲ ಪೋಮಾಜಿ, ಹಿರಕಣಿ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ಸಂಸ್ಥಾಪಕಿ ಅಧ್ಯಕ್ಷೆ ಅಲಕಾತಾಯಿ ಭೋಸಲೆ, ಕಾರ್ಯದರ್ಶಿ ಅರ್ಪಿತಾರಾಜೆ ಭೋಸಲೆ, ಉಪಾಧ್ಯಕ್ಷೆ ರತ್ನಮಾಲಾ ಮಚಾಲೆ ವೇದಿಕೆಯಲ್ಲಿದ್ದರು. ಮೊದಲಿಗೆ ರಾಷ್ಟ್ರಮಾತಾ ಜಿಜಾವು, ಸಾವಿತ್ರಿಬಾಯಿ ಫುಲೆ, ಶ್ರೀ ಸ್ವಾಮಿ ಸಮರ್ಥರ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಲ್ಲವಿ ಕದಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ರತ್ನ ಮಾಲಾ ಮಚಾಲೆ ವಂದಿಸಿದರು.
ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳುವ ಮೂಲಕ ತನ್ನ ಸ್ವಂತ ಕಾಲ ಮೇಲೆ ನಿಲ್ಲುವಂತಾಗಬೇಕು. ಇನ್ನೊಬ್ಬರಿಗೆ ಆರ್ಥಿಕ ಸಹಾಯಕ್ಕೆ ಕೈ ಚಾಚುವುದನ್ನು ಬಿಡಬೇಕು. ಮಹಿಳೆಯೂ ಎಲ್ಲ ಕ್ಷೇತ್ರಗಳಲ್ಲಿ ಮುಂದಕ್ಕೆ ಬರಬೇಕು. ಅವಳು ಪುರುಷರ ಸರಿಸಮನಾಗಿ ಬೆಳೆಯಬೇಕು. ಅನೇಕ ಸಾಮಾಜಿಕ ಸುಧಾರಕರು ಮಹಿಳೆಯರ ಪ್ರಗತಿಗೆ ಅಡಿಪಾಯ ಹಾಕಿದ್ದಾರೆ.
-ಅರ್ಪಿತಾರಾಜೆ ಭೋಸಲೆ, ಕಾರ್ಯದರ್ಶಿ, ಹಿರಕಣಿ ಮಹಿಳಾ ವಿವಿಧೋದ್ದೇಶ ಸಂಸ್ಥೆ