ವಿಜಯಪುರ: ತೀವ್ರತರ ಹರಡುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಿ ಕಾರ್ಯನಿರ್ವಹಿಸಿದ್ದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಅಫ್ಜಲಪುರ ಟಕ್ಕೆ ಕೇಂದ್ರೀಯ ವಿದ್ಯಾಲಯ ಎದುರು ಲೋಕಹಿತ ಟ್ರಸ್ಟ್ ಹುಬ್ಬಳ್ಳಿ ಸಂಚಾಲಿತ ಡಾ| ಹೆಡಗೆವಾರ್ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿದ ಅವರು ಮಾತನಾಡಿದರು. ವಿಶ್ವ ಹಾಗೂ ಭಾರತದಾದ್ಯಂತ ಕೋವಿಡ್ ತೀವ್ರತರವಾಗಿ ಹಬ್ಬುವ ಮೂಲಕ ಆತಂಕ ಸೃಷ್ಟಿಸಿದೆ. ಅದರಂತೆ ಕಳೆದ ವರ್ಷವೂ ಕೋವಿಡ್ ವಿಶ್ವ ಮತ್ತು ಭಾರತವನ್ನು ತಲ್ಲಣಗೊಳಿಸಿತ್ತು.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ, ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿ ಕಾರ್ಯ ನಿರ್ವಹಿಸಿದ್ದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ನೆರವಾಗಲಿದೆ. ಈ ದಿಸೆಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರಗಳಲ್ಲಿ ಲೋಕಹಿತ ಟ್ರಸ್ಟ್ ಸಂಚಾಲಿತ ಸ್ವಯಂ ಸೇವಕ ಸಂಘದ ವತಿಯಿಂದ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿರುವುದು ಅಭಿನಂದನಾರ್ಹ ಎಂದು ಹೇಳಿದರು. ವಿಜಯಪುರ ನಗರದ ಡಾ| ಹೆಡಗೆವಾರ್ ಹೆಸರಿನಲ್ಲಿ ಕೋವಿಡ್ ಆರೈಕೆ ಕೇಂದ್ರ ಈಗ ಆರಂಭಗೊಂಡಿದ್ದು, ವೈದ್ಯರು, ಸ್ಟಾಫ್ ನರ್ಸ್‌ಗಳು ಹಾಗೂ ಡಿ ಗ್ರೂಪ್ ನೌಕರರು ಸೇವೆಗೆ ಸನ್ನದ್ಧಗೊಂಡಿರುವುದು ಸಂತಸದ ವಿಷಯವಾಗಿದೆ. ಕೊರೊನಾ ನಿಯಂತ್ರಣದಲ್ಲಿ ಸೇವಾ ಮನೋಭಾವ ಹೊಂದಿದವರಿಗೆ ಈ ಸಂದರ್ಭದಲ್ಲಿ ಅವರು ಅಭಿನಂದನೆ ಸಲ್ಲಿಸಿದರು.
ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಿರುವ ಜತೆಗೆ ಜನರು ಕೂಡ ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ವಹಿಸಬೇಕು. ಸ್ವತ್ಛತೆ, ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕೂಡ ಆದ್ಯ ಕರ್ತವ್ಯವೆಂದು ತಿಳಿದು ಕೋವಿಡ್ ನಿಯಂತ್ರಣಕ್ಕೆ ಮುಂದಾಗುವಂತೆ ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಸಂಘ ಸಂಚಾಲಕ ಡಾ| ಸತೀಶ ಜಿಗಜಿನ್ನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಆರ್‌ಎಸ್‌ಎಸ್ ಸಕ್ರಿಯವಾಗಿದೆ. ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಹಾರ, ಔಷಧ ಪೂರೈಸಿದೆ. ಈಗ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದ್ದು, ಇಲ್ಲಿಗೆ ಬರುವ ಜನರ ಆಧಾರದ ಮೇಲೆ ಹೆಚ್ಚಿನ ಪ್ರಾಣವಾಯು ಪೂರೈಕೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.