Advertisement

ವಿದ್ಯಾರ್ಥಿಗಳಿಗೆ ಗ್ರಾಮೀಣ ಸಾಧಕರು ಆದರ್ಶವಾಗಲಿ

02:52 PM Sep 26, 2020 | Suhan S |

ನಾಗಮಂಗಲ: ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಗಾತ್ರ, ಎತ್ತರ, ತೂಕದಿಂದ ಅಳೆಯದೆ, ಅವರ ಜ್ಞಾನದಿಂದ ಅಳೆಯ ಬೇಕು. ಇಂದಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಭೈರವೈಕ್ಯ ಡಾ.ಬಾಲ ಗಂಗಾಧರನಾಥ ಶ್ರೀಗಳ ಶ್ರೀಗುರು ಸಂಸ್ಮರಣೋತ್ಸವ ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಸನ್ಮಾರ್ಗದಲ್ಲಿ ಸಾಗುವ ಜೊತೆಗೆ ಶಿಕ್ಷಣದತ್ತ ಗಮನಹರಿಸಬೇಕು. ಆ ಮೂಲಕ ಸಾಧಿಸುವ ಛಲದೊಂದಿಗೆ ರಾಷ್ಟ್ರದ ಅತ್ಯುನ್ನತ ಹುದ್ದೆ ಅಲಂಕರಿಸಬೇಕು. ತತ್ಸಂಗದಲ್ಲಿ ಭಾಗವಹಿಸುವುದರಿಂದ ಮನಸ್ಸು ಅರಳುತ್ತದೆ. ಒಳ್ಳೆಯ ಆಲೋಚನೆಗಳುಮೂಡುತ್ತವೆ.ಹೀಗಾಗಿ, ವಿದ್ಯಾರ್ಥಿಗಳು ಒಳ್ಳೆಯ ಆಚಾರ- ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಪೂರಕ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಋಷಿ, ಕೃಷಿ, ಸಂಸ್ಕೃತಿ ಸಮಾಜಕ್ಕೆ ಉತ್ತಮ: ಮೈಸೂರಿನ ಪ್ರೋ.ಕೃಷ್ಣೇಗೌಡ ಮಾತನಾಡಿ, ಎಲ್ಲಾ ಪ್ರಾಣಿ-ಪಕ್ಷಿಗಳು ಪರಿಸರಕ್ಕೆ ಹೊಂದಿಕೊಂಡು ಹೋಗುತ್ತವೆ. ಆದರೆ, ಮನುಷ್ಯ ತನಗೆ ಬೇಕೆಂದಾಗ ಪ್ರಕೃತಿಯಲ್ಲಿನ ವಾತಾವರಣವನ್ನು ಬದಲಿಸಿಕೊಳ್ಳುತ್ತಾನೆ. ಮನುಷ್ಯನ ಇಂತಹ ಬದಲಾವಣೆಯಿಂದ ದೇಶಕ್ಕೆ ಇಂತಹ ಸ್ಥಿತಿ ಬಂದಿದೆ. ಋಷಿ, ಕೃಷಿ, ಸಂಸ್ಕೃತಿ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತವೆ. ಕೃಷಿ ಮೂಲದಿಂದ ಬಂದವರು ದೇಶದ ಅತ್ಯುನ್ನತ ಸ್ಥಾನದಲ್ಲಿದ್ದಾರೆ ಎಂದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಡಾ.ಅಭಿಷೇಕ್‌ ಗೌಡ, ಎಚ್‌.ಎನ್‌.ಮಿಥುನ್‌, ವಿವೇಕ ರೆಡ್ಡಿ, ಸಿ.ಕೆ.ಯೋಗೇಶ್‌, ಎಚ್‌.ವೆಂಕಟಕೃಷ್ಣ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಹುಭಾಷಾ ಗಾಯಕ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಸಂತಾಪ ಸೂಚಿಸಲಾಯಿತು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುರ್ಗದ ಕಬೀರ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಬೆಂಗಳೂರು ಬೆಸ್ಕಾಂ ಜಾಗೃತ ದಳದ ಎಸ್‌ಪಿ ಕುಮಾರ ಸ್ವಾಮಿ ಸೇರಿದಂತೆ ವಿವಿಧ ಶಾಖಾಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next