Advertisement
ನಗರದಲ್ಲಿ ಪ್ರಮುಖವಾಗಿ ಆಗಬೇಕಾದದ್ದು ರಸ್ತೆಗಳ ಅಭಿವೃದ್ಧಿ. ಒಳ ರಸ್ತೆಗಳು ಮಾತ್ರವಲ್ಲ ಮುಖ್ಯ ರಸ್ತೆಗಳು ಕೂಡ ಹೊಂಡಗುಂಡಿಯಿಂದ ಕೂಡಿವೆ. ನಂತೂರು ಸರ್ಕಲ್ ಬಳಿಯ ರಸ್ತೆಯ ಸ್ಥಿತಿ ಹೇಳ ತೀರದಾಗಿದೆ. ಸರ್ಕಲ್ ಸುತ್ತಲೂ ತುಂಬಿದ ಹೊಂಡ-ಗುಂಡಿಗಳಿಂದಾಗಿ ವಾಹನ ಸಂಚಾರವೇ ದುಸ್ಸಾಹಸವೆಂಬಂತಾಗಿದೆ. ನಂತೂರಿನಿಂದ ಬಿಕರ್ನಕಟ್ಟೆಗೆ ತೆರಳುವ ರಸ್ತೆಯಲ್ಲಿ ಸರ್ಕಲ್ ಮುಂದೆ ರಸ್ತೆ ಎದ್ದು ಹೋಗಿ ಸಂಚಾರ ದುಸ್ತರವಾಗಿದೆ. ಇನ್ನು ಬಿಕರ್ನಕಟ್ಟೆಯಿಂದ ಕುಲಶೇಖರದವರೆಗಿನ ಮುಖ್ಯರಸ್ತೆ ದೇವರಿಗೇ ಪ್ರೀತಿ. ಇದು ಕಿರಿದಾದ ರಸ್ತೆಯಾಗಿರುವುದರಿಂದ ಎರಡೂ ಬದಿಯಲ್ಲಿ ವಾಹನಗಳು ಸಂಚರಿಸುವುದು ತೀರಾ ಸಮಸ್ಯೆಯಾಗಿ ಪರಿಣಮಿಸಿದೆ. ಎದುರಿನಿಂದ ಬರುವ ವಾಹನಗಳಿಗೆ ಸೈಡ್ ಕೊಡಲು ಹೋದಾಗ ಸ್ವಲ್ಪ ಎಚ್ಚರ ತಪ್ಪಿದರೂ ಕೆಳಗಿನ ಗುಂಡಿಗೆ ಬೀಳುವ ಸಾಧ್ಯತೆ ಇದೆ. ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆ ನರಕ ಮಯವಾಗಿ ಪರಿಣಮಿಸಿದೆ.
ಇನ್ನು ಕೆಲವು ಮುಖ್ಯ ರಸ್ತೆಗಳು ಸಂಚಾರಕ್ಕೆ ಸರಿಯಾಗಿದ್ದರೂ, ರಸ್ತೆಗಳಲ್ಲಿರುವ ಉಬ್ಬು-ತಬ್ಬುಗಳು ಗಮನಕ್ಕೆ ಬಾರದೇ ಅಪಾಯಗಳಾಗುವ ಸಂಭವವಿದೆ. ಉರ್ವಸ್ಟೋರ್‌ನಿಂದ ಲೇಡಿಹಿಲ್‌ಗೆ ಬರುವ ಮಾರ್ಗದಲ್ಲಿ ಉರ್ವಸ್ಟೋರ್ ಬಸ್ ಸ್ಟಾಂಡ್ ಬಳಿ ಕಾಂಕ್ರೀಟ್ ರಸ್ತೆ ಎತ್ತರ ತಗ್ಗು ಇದ್ದು ದ್ವಿಚಕ್ರ ವಾಹನ ಸವಾರರು ತಿಳಿಯದೇ ತೊಂದರೆ ಅನುಭವಿಸುವಂತಾಗಿದೆ. ಇದೇ ರಸ್ತೆಯಲ್ಲಿ ಚಿಲಿಂಬಿ ಬಳಿಯೂ ಇದೇ ರೀತಿ ಎತ್ತರ ತಗ್ಗು ಇದ್ದು, ಒಮ್ಮೆಗೆ ಅಧಿಕ ಜಂಪ್ ಆದ ಅನುಭವವಾಗುತ್ತದೆ. ಮುಂದೆ ಎಂ.ಜಿ. ರಸ್ತೆಯಲ್ಲಿಯಲ್ಲಿಯೂ ಇದೇ ರೀತಿಯಲ್ಲಿ ರಸ್ತೆ ಎತ್ತರ ತಗ್ಗು ಇದೆ. ಇಲ್ಲಿ ಒಮ್ಮೆ ರಿಪೇರಿ ಮಾಡಿಸಲಾಗಿತ್ತಾದರೂ ಮತ್ತೆ ಅದೇ ರೀತಿ ಎತ್ತರ ತಗ್ಗು ಇದ್ದು ಸಮಸ್ಯೆ ಉಂಟಾಗುತ್ತಿದೆ.
Related Articles
Advertisement
- ಡಿಬಿ