Advertisement

ಮಾಧ್ಯಮಗಳಿಂದ ನಿಜ ವಿಚಾರ ಹೊರ ಬರಲಿ

10:07 AM Feb 22, 2020 | mahesh |

ಉಡುಪಿ: ಜನರಿಗೆ ಅನ್ಯಾಯವಾದಾಗ ಅದನ್ನು ಮಾಧ್ಯಮಗಳು ಧೈರ್ಯದಿಂದ ತಿಳಿಸಬೇಕು. ನೈಜ ವಿಷಯಗಳು ಮಾಧ್ಯಮಗಳಿಂದ ಜನರಿಗೆ ತಿಳಿಯುವಂತಾಗಬೇಕು. ಜನರು ಈಗ ಸ್ವತಂತ್ರವಾಗಿ ವಿಷಯಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲ ತಾಣಗಳ ಮೊರೆ ಹೋಗುತ್ತಿದ್ದಾರೆ ಎಂದು ಪತ್ರಕರ್ತೆ ಶ್ವೇತಾ ಕೊಠಾರಿ ಹೇಳಿದರು.

Advertisement

ಮಣಿಪಾಲದ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ (ಎಂಐಸಿ) ಸಭಾಂಗಣದಲ್ಲಿ ವಾರ್ಷಿಕ ಉತ್ಸವವಾದ “ಆರ್ಟಿಕಲ್‌ 19’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯಾಯವನ್ನು ಬಹಿರಂಗ ಪಡಿಸುವ ಸಂದರ್ಭ ವಿಶೇಷ ಸುದ್ದಿ ಗಳನ್ನು ಬಿತ್ತರಿಸಲು ಮೇಲಧಿಕಾರಿಗಳು ಒಪ್ಪದೆ ಇದ್ದ ಕಹಿ ಅನುಭವದಿಂದ ನಾನು ಟಿವಿ ಕ್ಷೇತ್ರದಿಂದ ಹೊರಬಂದೆ. ಯಾವ ಅಧಿಕಾರಸ್ಥರು ತಪ್ಪೆಸಗಿದ್ದಾರೋ ಅವರನ್ನು ಎಚ್ಚರಿಸುವ ಕೆಲಸ ಮಾಧ್ಯಮದಿಂದ ಆಗಬೇಕಾಗಿದೆ. ರಾಜಕೀಯ ಭ್ರಷ್ಟಾಚಾರವನ್ನು ಹೊರಹಾಕಲು ಕೆಲವೊಮ್ಮೆ ನಮ್ಮದೇ ಮೇಲಧಿಕಾರಸ್ಥರು ಒಪ್ಪದೆ ಇರುವ ಸ್ಥಿತಿ ಇದೆ ಎಂದು ಕೊಠಾರಿ ಹೇಳಿದರು.

ನಾಲ್ಕನೇ ಆಧಾರ ಸ್ತಂಭ ಮೌನವೇಕೆ?
ಇಂದು ಕೆಲವು ವರ್ಗದ ಮಾಧ್ಯಮಗಳು ಕೆಲವು ವಿಷಯಗಳ ಮಾಹಿತಿಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಈ ಮೂಲಕ ಜನರಿಗೆ ತಪ್ಪು ಸಂದೇಶಗಳನ್ನು ನೀಡುತ್ತಿವೆ. ನಾವು ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಆಡಳಿತ ವರ್ಗಕ್ಕೆ ಉತ್ತರದಾಯಿತ್ವವನ್ನು ತಿಳಿ ಹೇಳಬೇಕಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂಬ ಮಾನ್ಯತೆ ಹೊಂದಿದ ಮಾಧ್ಯಮಗಳು ಏಕೆ ಸುಮ್ಮನಿವೆ? ಪ್ರಧಾನ ಮಾಧ್ಯಮಗಳು ಇದರಲ್ಲಿ ಹಿಂದೆ ಇವೆ. ಹೀಗಾಗಿ ಡಿಜಿಟಲ್‌ ಮಾಧ್ಯಮ ಹುಟ್ಟಿಕೊಂಡಿದೆ ಎಂದು ಕೊಠಾರಿ ಹೇಳಿದರು. ಡಿಜಿಟಲ್‌ ಮಾಧ್ಯಮದಲ್ಲಿ ಮುಂದೆ ಸಾಕಷ್ಟು ಅವಕಾಶಗಳಿವೆ. ಭವಿಷ್ಯದ ವೃತ್ತಿಪರರನ್ನು ಈ ಕ್ಷೇತ್ರ ತರಬೇತಿಗೊಳಿಸುತ್ತದೆ. ಆದರೆ ಸ್ವತಂತ್ರ ಸತ್ಯಶೋಧಕರು, ದಕ್ಷರು, ವಿಶ್ವಾಸಾರ್ಹರು ಬೇಕು ಎಂದು ಕೊಠಾರಿ ಹೇಳಿದರು.

ಎಂಐಸಿ ವಿದ್ಯಾರ್ಥಿಗಳಿಗೆ ಮಾಧ್ಯಮ ಮತ್ತು ಮನೋರಂಜನೆ ಕ್ಷೇತ್ರದಲ್ಲಿ ನೈಪುಣ್ಯ, ತಾಂತ್ರಿಕ ಕೌಶಲವನ್ನು ಗಳಿಸಲು ಆರ್ಟಿಕಲ್‌ 19 ಉತ್ಸವ ವೇದಿಕೆಯಾಗಿದೆ. ಮಾಧ್ಯಮ ರಂಗದ ಶ್ರೇಷ್ಠ ಸಾಧಕರೊಂದಿಗೆ ಸಂವಹನ ನಡೆಸುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ಸ್ವಾಗತ ಭಾಷಣದಲ್ಲಿ ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ಹೇಳಿದರು.

ವಿದ್ಯಾರ್ಥಿ ಆಯುಷ್‌ ಪ್ರಸ್ತಾವನೆಗೈದರು. ಉಪನ್ಯಾಸಕ ವರ್ಗದ ಸಂಚಾಲಕಿ ಶ್ರುತಿ ವಿ. ಶೆಟ್ಟಿ ಉಪಸ್ಥಿತರಿದ್ದರು. ತಾನಿಯಾ ಮುಖೋಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಭಾರತದ ಸಂವಿಧಾನ ನೀಡಿದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

Advertisement

ಎಂಐಸಿ ಮುಂಚೂಣಿ ಹೆಸರು
ಮಾಧ್ಯಮ ಕ್ಷೇತ್ರದಲ್ಲಿ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ (ಎಂಐಸಿ) ಸಂಸ್ಥೆಗೆ ಪ್ರಮುಖವಾದ ಸ್ಥಾನವಿದೆ. ಹಾಗಾಗಿ ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ.
– ಶ್ವೇತಾ ಕೊಠಾರಿ

Advertisement

Udayavani is now on Telegram. Click here to join our channel and stay updated with the latest news.

Next