Advertisement
ರಾಜ್ಯಾದ್ಯಂತ ಮಳೆಯಿಂದ ಆಪಾರ ಪ್ರಮಾಣದ ಬೆಳೆ ನಷ್ಟ, ಜಾನುವಾರು ಸಾವು ಉಂಟಾಗಿದ್ದು, ಗ್ರಾಮೀಣ ಭಾಗದ ಜನರಂತೂ ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ನಿರಂತರ ಪ್ರವಾಹದಿಂದ ಪೆಟ್ಟಿನ ಮೇಲೆ ಪೆಟ್ಟು ಎಂಬಂತೆ ಸಮಸ್ಯೆಗೆ ಸಿಲುಕುವಂತಾಗುತ್ತಿದೆ.
Related Articles
Advertisement
ಮನೆ ಹಾನಿಗೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿರುವುದು ಸ್ವಾಗತಾರ್ಹ. ಜತೆಗೆ ಹಿಂಗಾರು ಮಳೆಯಿಂದ ಉಂಟಾಗಿರುವ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಿಸಲು ತಿಳಿಸಿದ್ದಾರೆ.
ಈ ನಡುವೆ, 2022-23ನೇ ಸಾಲಿನಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 191.50 ಕೋಟಿ ರೂ. ಬಿಡುಗಡೆಯಾಗಿರುವುದರಿಂದ ಅಧಿಕಾರಿಗಳು ಪರಿಹಾರ ಕಾರ್ಯ ಚುರುಕುಗೊಳಿಸಲು ಸಹಾಯವಾಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಹಾರ ಮತ್ತು ಪುನರ್‌ವಸತಿ, ಮೂಲಸೌಕರ್ಯ ಹಾನಿಯ ದುರಸ್ತಿ ಬಗ್ಗೆ ಹೆಚ್ಚು ಗಮನಹರಿಸಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ಗಮನನೀಡಬೇಕು. ಪ್ರವಾಹ ಸಂತ್ರಸ್ತ್ರರ ಪರಿಹಾರ, ತುರ್ತು ಕಾಮಗಾರಿ, ಬೆಳೆ ಪರಿಹಾರ ವಿಚಾರದಲ್ಲಿ ಪಕ್ಷಾತೀತವಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷ ಜತೆಗೂಡಿಯೇ ಕೆಲಸ ಮಾಡಬೇಕು.
ಮುಂದಿನ ಚುನಾವಣೆ ಹಿನ್ನೆಲೆ ಹಾಗೂ ಪಕ್ಷ ಸಂಘಟನೆಗಾಗಿ ಎಲ್ಲ ಪಕ್ಷಗಳೂ ಯಾತ್ರೆ, ಸಮಾವೇಶ ನಡೆಸುತ್ತಿವೆಯಾದರೂ ಇದರ ನಡುವೆಯೂ ಮಳೆ ಹಾನಿಯ ಬಗ್ಗೆ ಹಾಗೂ ಸಂತ್ರಸ್ತರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ.