ಸಿಂಧನೂರು: ಏನಾದರೂ ಪ್ರಶ್ನೆ ಕೇಳಿದರೆ ಸಾಕು, ಅವರನ್ನು ಉಚ್ಚಾಟಿಸುವ ಕೆಟ್ಟ ಪದ್ಧತಿ ರೈತ ಸಂಘದಲ್ಲಿದೆ. ಆದರೆ, ಸಂಘದ ಕಾರ್ಯಕರ್ತರಲ್ಲಿ ಉಂಟಾಗಿರುವ ಎರಡು ಅನುಮಾನಗಳಿಗೆ ಸಂಘದ ರಾಜ್ಯಾಧ್ಯಕ್ಷರೇ ಉತ್ತರಿಸಬೇಕು ಎಂದು ರೈತ ಮುಖಂಡ ಅಮಿನ್‌ಪಾಷಾ ದಿದ್ದಗಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾನು ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ. ಹಾಗೆ ನನ್ನ ಹಾಗೆ ಹಲವು ಪದಾಧಿಕಾರಿಗಳಿದ್ದಾರೆ. ಅವರು ಏನಾದರೂ ಪ್ರಶ್ನೆ ಕೇಳಿದರೆ, ಸಂಘದ ರಾಜ್ಯಾಧ್ಯಕ್ಷರ ಬಳಿ ಉತ್ತರವಿಲ್ಲ. ಅವರಲ್ಲಿ ಇರುವುದೇ ಒಂದೇ ಶಬ್ದ ಉಚ್ಚಾಟನೆ. ಇದನ್ನು ನಾವು ಕಳೆದ 42 ವರ್ಷಗಳಿಂದ ಪ್ರೊ| ದಿ| ನಂಜುಂಡಸ್ವಾಮಿ ಅವರ ಕಾಲದಿಂದಲೂ ರೈತ ಸಂಘದಲ್ಲಿದ್ದು, ಇದನ್ನು ಒಪ್ಪುವುದಿಲ್ಲ ಎಂದರು.
ಖಾಸಗಿ ಕಂಪನಿ ಹಾರ್ವೆಸ್ಟರ್‌ಗೆ ಸಂಬಂಧಿಸಿ ಹೋರಾಟ ನಡೆಸಿದಾಗ ಸರಕಾರವೇ ಅದನ್ನು ಬ್ಯಾನ್ ಮಾಡಿತ್ತು. ಆದರೆ, ದಿಢೀರ್ ಮತ್ತೆ ವೈಟ್ ಲಿಸ್ಟ್‌ಗೆ ಬಂದ ಹಿನ್ನೆಲೆ ಏನು?. ರೈತರ ಸಾಲ ಮನ್ನಾ ವಿಷಯದಲ್ಲಿ ಹೋರಾಟ ನಡೆಸಲು ಪ್ರತಿಯೊಬ್ಬ ರೈತರಿಂದ 50 ರೂ. ದೇಣಿಗೆ ಸಂಗ್ರಹಿಸಲಾಗಿತ್ತು. ಸರಕಾರ ಒಪ್ಪದೇ ಹೋದರೆ,ಅವರವಿರುದ್ಧಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ರೈತರಿಗೆ ಸಂಘದಿಂದ ಭರವಸೆ ನೀಡಲಾಗಿತ್ತು. ಆದರೆ, ಸುಪ್ರೀಂಕೋರ್ಟ್‌ಗೆ ಹೋಗಲೇ ಇಲ್ಲ. ಒಂದು ತಾಲೂಕಿನಿಂದ 2 ಲಕ್ಷ ರೂ. ನಿಂದ 3 ಲಕ್ಷ ರೂ. ವರೆಗೆ ಸಂಗ್ರಹ ಮಾಡಿ ಕೊಟ್ಟಿದ್ದು, ಇದಕ್ಕೆ ಉತ್ತರ ಬೇಕು ಎಂದರು.
ಇದನ್ನೂ ಓದಿ: ತೀವ್ರ ವಿರೋಧದ ನಡುವೆ ಕಟ್ಟಡ ತೆರವು
ನಾವು ಕೋಡಿ ಚಂದ್ರಶೇಖರ ಅವರನ್ನು ಸಂಘದ ರಾಜ್ಯಾಧ್ಯಕ್ಷರೆಂದು ಒಪ್ಪುವುದಿಲ್ಲ. ಆದರೆ, ವಿಚಾರ, ಸಿದ್ಧಾಂತವನ್ನು ಸಂಘದ ರಾಜ್ಯಾಧ್ಯಕ್ಷರೆಂದು ಕರೆಯುತ್ತೇವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಸಿಂಧನೂರು ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ದೇವದುರ್ಗ ಘಟಕದ ಅಧ್ಯಕ್ಷ ಶಂಕರಲಿಂಗ, ರಾಯಚೂರು ತಾಲೂಕು ಅಧ್ಯಕ್ಷ ಮಂಜುನಾಥ, ಮಸ್ಕಿಯ ವಿಜಯ ಬಡಿಗೇರ್, ಲಿಂಗಸುಗೂರಿನ ರಮೇಶ ಸಾಹುಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಡೇಸಾಬ್, ಯೂಸೂಫ್‌ಸಾಬ್, ಶಿವನಗೌಡ ತಿಡಿಗೋಳ, ಹನುಮಂತ ದೇವದುರ್ಗ ಸೇರಿದಂತೆ ಇತರರು ಇದ್ದರು.