ವಿಜಯಪುರ: ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಆನ್ಯಾಯ ಕುರಿತು ಪ್ರತ್ಯೇಕ ರಾಜ್ಯ ಪರಿಹಾರವಲ್ಲ. ಆದರೆ ನಮಗಾಗಿರುವ ಅನ್ಯಾಯ ಕುರಿತು ನಮ್ಮ ಭಾಗದ ಜನಪ್ರತಿನಿ ಧಿಗಳು ಪಕ್ಷಾತೀತವಾಗಿ ಸಾತ್ವಿಕ ಆಕ್ರೋಶ ಹೊರ ಹಾಕಬೇಕಿದೆ ಎಂದು ಮೇಲ್ಮನೆ ಹಿರಿಯ ಸದಸ್ಯ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಒತ್ತಾಯಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಭಾಗಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಈಗಾಗಲೇ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದು ಗಮನ ಸೆಳೆಯುವ ಕೆಲಸ ಮಾಡಿದ್ದೇನೆ ಎಂದರು.
ವಿಶ್ವವಿದ್ಯಾಲಯಕ್ಕೆ ಕುಲಪತಿಗಳು, ಸಿಂಡಿಕೇಟ್ ಸದಸ್ಯರ ನೇಮಕ, ಹೆಚ್ಚುವರಿ ಅಡ್ವೋಕೇಟ್ ಜನರಲ್ ನೇಮಕಾತಿ, ಕೆಪಿಎಸ್‌ಸಿ ನಿರ್ದೇಶಕರ ನೇಮಕ, ಪ್ರಮುಖ ಕಚೇರಿಗಳ ಸ್ಥಳಾಂತರ ಸೇರಿದಂತೆ ಆಡಳಿತ, ಶೈಕ್ಷಣಿಕ-ನ್ಯಾಯಾಂಗ ವ್ಯವಸ್ಥೆಯ ಪ್ರತಿ ಹಂತದಲ್ಲೂ ನಮ್ಮ ಭಾಗದ ಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರೆಯದೇ ನಿರಂತರ ಅನ್ಯಾಯ ನಡೆಯುತ್ತಿದೆ ಎಂದರು.
ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕದಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಂಶೋಧಕರು, ಕಾನೂನು ಪಂಡಿತರು, ಜ್ಞಾನಿ-ವಿಜ್ಞಾನಿಗಳಿದ್ದರೂ ಕುಲಪತಿ ನೇಮಕ ವಿಷಯದಲ್ಲಿ ಪರಿಗಣಿಸುತ್ತಿಲ್ಲ. ಬೆಂಗಳೂರಿನ ಎಂ.ಎಸ್. ಬಿಲ್ಡಿಂಗ್ ಕಚೇರಿಗೆ ಒಂದು ಸುತ್ತು ಹಾಕಿದರೆ ಸಾಕು ಅಲ್ಲಿರುವ ಎಲ್ಲರೂ ದಕ್ಷಿಣ ಕರ್ನಾಟಕ ಭಾಗದವರೇ.
ಅಲ್ಲೆಲ್ಲ ಉತ್ತರ ಕರ್ನಾಟಕ ಭಾಗದ ಕಾರ್ಯದರ್ಶಿ ಮಟ್ಟದ ಅ ಧಿಕಾರಿ ಎಲ್ಲಾದರೂ ಇದ್ದಾರೆಯೇ ಎಂದು ದುರ್ಬೀನು ಹಾಕಿ ಹುಡುಕಬೇಕಾದ ದುಸ್ಥಿತಿ ಆಡಳಿತ ವ್ಯವಸ್ಥೆಯಲ್ಲಿ ಕಣ್ಣಿಗೆ ರಾಚುತ್ತದೆ. ಉತ್ತರ ಕರ್ನಾಟಕದಲ್ಲಿರುವ ವಿವಿ ಗಳಲ್ಲಿ ಬೆಂಗಳೂರಿನವರೇ ಅಡಳಿತ ನಡೆಸುತ್ತಿದ್ದಾರೆಂದು ಆಕ್ರೋಶ ಹೊರ ಹಾಕಿದರು.