Advertisement

Udupi: ಬಯಲು ರಂಗ ಮಂದಿರ ಇನ್ನಷ್ಟು ಬೆಳಗಲಿ

04:27 PM Aug 11, 2024 | Team Udayavani |

ಉಡುಪಿ: ನಗರಕ್ಕೊಂದು ಸುಸಜ್ಜಿತ ಬಯಲು ರಂಗ ಮಂದಿರದ ಬೇಡಿಕೆಯಂತೆ ನಿರ್ಮಾಣಗೊಂಡ ಬೀಡಿನಗುಡ್ಡೆ ಬಯಲು ರಂಗ ಮಂದಿರದಲ್ಲಿ ಎಲ್ಲ ಕಾಲದಲ್ಲೂ ಚಟುವಟಿಕೆಗಳಿಗೆ ಅವಕಾಶ ಸಿಗುವಂತೆ ಅಭಿವೃದ್ಧಿಯಾಗಬೇಕು ಎಂಬ ಬೇಡಿಕೆ ಕೇಳಿಬಂದಿದೆ.

Advertisement

ಕ್ರೀಡೆ, ಉತ್ಸವ, ಸಾರ್ವಜನಿಕ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯಡಿ, ರಿಯಾಯತಿ ದರದಲ್ಲಿ ಸಭಾಂಗಣ ಒದಗಿಸುವ ಉದ್ದೇಶದಿಂದ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಹಲವು ವರ್ಷಗಳಿಂದ ಇಲ್ಲಿ ಕಲೆ, ಸಾಸ್ಕೃತಿಕ, ಇನ್ನಿತರ ವಾಣಿಜ್ಯ ಉದ್ದೇಶದ ಮೇಳಗಳು ನಡೆಯುತ್ತಿದೆ.

ಪ್ರತೀ ವರ್ಷ ಜಿಲ್ಲಾಡಳಿತ ಗಣ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ಜತೆಗೆ ಕ್ರಿಕೆಟ್‌, ಕಲಾ ಚಟುವಟಿಕೆಗಳು, ಉತ್ಸವ ಸಹಿತ ಇನ್ನಿತರೆ ಮೇಳಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಆದರೆ, ಇಲ್ಲಿ ಮಳೆಗಾಲದಲ್ಲಿ ನೀರು ನಿಂತು ಹುಲ್ಲು ಬೆಳೆಯುವುದರಿಂದ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಮಳೆಗಾಲದಲ್ಲೂ ಇಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂಬ ಮನವಿ ಇದೆ.

ಅನೈತಿಕ ಚಟುವಟಿಕೆಗೆ ಕಡಿವಾಣ

ಮಳೆಗಾಲದಲ್ಲಿ ಮೈದಾನದ ಒಳಗೆ ಸಂಪೂರ್ಣ ನೀರು ನಿಂತು ಸಾಕಷ್ಟು ಪ್ರಮಾಣದಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದುಕೊಂಡಿವೆ. ಕಾಂಪೌಂಡ್‌ನ‌ ಸುತ್ತಮುತ್ತಲೂ ತ್ಯಾಜ್ಯ ರಾಶಿಯಿಂದ ಕೂಡಿದೆ. ವೇದಿಕೆ ಮೇಲ್ಚಾವಣಿ ಶಿಥಿಲಾವಸ್ಥೆಗೆ ತಲುಪಿದೆ. ಇವುಗಳನ್ನು ನಿರ್ವಹಿಸಬೇಕಾದ ಜವಾಬ್ದಾರಿ ನಗರಸಭೆಯದ್ದು. ಆದರೆ, ನಗರಸಭೆ ಈ ರಂಗಮಂದಿರದ ಭದ್ರತೆ ವಿಷಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾತ್ರಿ ವೇಳೆ ಭದ್ರತಾ ಸಿಬಂದಿ ನಿಯೋಜಿಸಲ್ಪಟ್ಟಿರುವುದರಿಂದ ಮೈದಾನ ಸುತ್ತಮುತ್ತ ಒಳಗೆ ಯಾರಿಗೂ ಪ್ರವೇಶವಿಲ್ಲ. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ.

Advertisement

ಮಳೆ ಬಿಡುವು ಬಳಿಕ ಸ್ವತ್ಛತ ಕಾರ್ಯ

ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ಮಳೆಗಾಲದಲ್ಲಿ ಕಾರ್ಯಕ್ರಮಗಳು, ಚಟುವಟಿಕೆಗಳು ಕಡಿಮೆ ಇರುತ್ತದೆ. ಮಳೆಗಾಲದಲ್ಲಿ ಸ್ವತ್ಛಗೊಳಿಸಿದರೂ ಮತ್ತೆ ಬೆಳೆಯುತ್ತದೆ. ಇದರಿಂದ ನಿರ್ವಹಣೆ ವೆಚ್ಚ ದುಪ್ಪಟ್ಟಾಗುತ್ತದೆ. ಮಳೆ ಬಿಟ್ಟ ಅನಂತರ ಮೈದಾನವನ್ನು ಸಂಪೂರ್ಣ ಸ್ವತ್ಛಗೊಳಿಸುವ ಕೆಲಸವಾಗುತ್ತದೆ. ಗಿಡಗಂಟಿಗಳನ್ನು ತೆರವುಗೊಳಿಸಿ, ಕಾಂಪೌಂಡ್‌ ಸುತ್ತಲೂ ತ್ಯಾಜ್ಯ ಮುಕ್ತವಾಗಿಸಲಾಗುವುದು. ಇಲ್ಲಿಯ ಸೌಕರ್ಯಗಳನ್ನು ಮತ್ತಷ್ಟು ವ್ಯವಸ್ಥಿತವಾಗಿಸಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯುವಂತೆ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುವುದು.

-ರಾಯಪ್ಪ, ಪೌರಾಯುಕ್ತರು

ನಗರಸಭೆಗೆ ಹಸ್ತಾಂತರಿಸಲು ಆಗ್ರಹ

ಬಯಲು ರಂಗಮಂದಿರ ಜಿಲ್ಲಾಡಳಿತಕ್ಕೆ ಒಳಪಟ್ಟಿದ್ದು, ಆದರೆ ನಿರ್ವಹಣೆ ಜವಾಬ್ದಾರಿ ಮಾತ್ರ ನಗರಸಭೆಗೆ ವಹಿಸಲಾಗಿದೆ. ಇಲ್ಲಿನ ಕಾವಲು ಸಿಬಂದಿಗೂ ವೇತನವನ್ನು ನಗರಸಭೆ ಪಾವತಿಸಬೇಕು. ಕ್ರೀಡೆ, ಕಲಾ ಚಟುವಟಿಕೆ, ಉತ್ಸವಕ್ಕೆ ಹೆಚ್ಚು ದರವನ್ನು ವಿಧಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬೇಸರವು ಇದೆ. ಬಯಲು ರಂಗಮಂದಿರವನ್ನು ಸಂಪೂರ್ಣವಾಗಿ ನಗರಸಭೆಗೆ ಬಿಟ್ಟುಕೊಡಬೇಕು ಎಂಬ ಆಗ್ರಹವಿದೆ. ರಂಗಮಂದಿರಕ್ಕೆ ಇನ್ನಷ್ಟು ಕಾಯಕಲ್ಪ ನೀಡುವುದರ ಜತೆಗೆ ಸೂಕ್ತ ಬಸ್‌ ಸೌಕರ್ಯ ಮತ್ತು ಪಾರ್ಕಿಂಗ್‌ ವ್ಯವಸ್ಥೆಯನ್ನು ಅನುಕೂಲವಾಗಿಸಬೇಕಿದೆ ಎಂಬುವುದು ಕೆಲವು ಜನಪ್ರತಿನಿಧಿಗಳ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next