ಮೈಸೂರು: ಸಮಾಜದ ಶೋಷಿತ ಸಮುದಾಯಗಳು ಒಂದಾಗುವ ಮೂಲಕ ದೇಶದ ಅಧಿಕಾರ ಹಿಡಿಯುವ ಮೂಲಕ ಬಹುಜನರ ಹಿತಕಾಯುವ ಹಾಗೂ ಸಂವಿಧಾನ ಉಳಿಸುವ ಸಂಕಲ್ಪ ಮಾಡಬೇಕಿದೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಹೇಳಿದರು. ಬಹುಜನ ಸಮಾಜ ಪಕ್ಷದಿಂದ ದಾದಾ ಸಾಹೇಬ್ ಕಾನ್ಷಿರಾಂ ಅವರ ಪರಿನಿರ್ವಾಣ ದಿನದ ಅಂಗವಾಗಿ ಸೋಮವಾರ ನಗರದ ಗೋವರ್ಧನ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬಹುಜನರ ಸಂಕಲ್ಪ ದಿನ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಹಿಟ್ಲರ್ ಸರ್ಕಾರದಂತೆ ವರ್ತಿಸುತ್ತಿದ್ದು, ಮೋದಿ ಅವರು ತನ್ನ ಸುತ್ತಲೂ ಭಟ್ಟಂಗಿಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಕ್ಕೆ ಬರುವ ಮುನ್ನ ಮಾಡಿದ ಭಾಷಣಕ್ಕೂ, ಈಗಿನ ಮಾತುಗಳ ನಡುವೆ ಭಾರೀ ವ್ಯಾತ್ಯಾಸ ಕಾಣಿಸುತ್ತಿದೆ.
ಇನ್ನೂ ರಾಜ್ಯದಲ್ಲೂ ಸಹ ಸಿಎಂ ಸಿದ್ದರಾಮಯ್ಯ ಅವರು ಮೋದಿ ರೀತಿಯಲ್ಲೇ ಭಾಷಣ ಮಾಡುತ್ತಿದ್ದಾರೆಂದರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕಿದ್ದು, ಈ ಹಿನ್ನೆಲೆಯಲ್ಲಿ ಶೋಷಿತ ವರ್ಗಗಳು ಸಂಘಟಿತರಾಗುವ ಮೂಲಕ ದೇಶ ಹಾಗೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ ಎಂದರು.
ಶೋಷಿತರು ಒಗ್ಗೂಡಬೇಕು: ಪ್ರಸ್ತುತ ಸಂದರ್ಭದಲ್ಲಿ ಸಮಾಜದಲ್ಲಿನ ಶೋಷಿತ ವರ್ಗಗಳು ಒಡೆದು ಹಂಚಿ ಹೋಗಿದ್ದಾರೆ. ಇವರೆಲ್ಲರೂ ಒಗ್ಗೂಡುವವರೆಗೂ ಮೋದಿ ಅವರಂತಹ ಸರ್ವಾಧಿಕಾರಿಗಳು ಅಧಿಕಾರಕ್ಕೆ ಬರಲಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಪುಟ್ಟನಂಜಯ್ಯ, ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜು ನಾಡನಹಳ್ಳಿ, ಜಿಲ್ಲಾ ಸಂಯೋಜಕ ಶಿವಮಹದೇವು, ಯುವ ಮುಖಂಡ ಸೋಸಲೆ ಸಿದ್ದರಾಜು, ಪ್ರತಾಪ್, ಅನಂತನಾಗು ಮತ್ತಿತರರಿದ್ದರು.
ಭೀಮ್ ದಿವಸ್ ಆಚರಿಸುತ್ತಲೇ ಬೆನ್ನಿಗೆ ಚೂರಿ: ಭೀಮ್ ದಿವಸ್ ಆಚರಿಸುತ್ತಲೇ ಸರ್ವಾಧಿಕಾರಿ ಸರ್ಕಾರಗಳು ಬೆನ್ನಿಗೆಚೂರಿ ಹಾಕುವ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಪಕ್ಷಗಳು ಒಂದಾಗಿ ಅಧಿಕಾರ ಹಿಡಿಯಬೇಕು. ಆ ಮೂಲಕ ಕ್ರಿಯಾಶೀಲ ಚಿಂತನೆ ಮಾಡುವ ಸರ್ವಾಧಿಕಾರಿ ಧೋರಣೆ ಹೊಂದಿರುವವರನ್ನು ಅಧಿಕಾರದಿಂದ ದೂರವಿಡಬೇಕಿದೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಹೇಳಿದರು.