Advertisement
ದೇಶವು ಸ್ವತಂತ್ರವಾದ ಅನಂತರ 1952ರಲ್ಲಿ ಚುನಾವಣೆಗಳು ಆರಂಭವಾದವು. 1957 ರಿಂದ 1967ರ ವರೆಗೂ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಒಂದೇ ಬಾರಿ ಚುನಾವಣೆಗಳು ನಡೆದಿವೆ. 1967ರ ಅನಂತರ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಪ್ರಾದೇಶಿಕ ಪಕ್ಷಗಳ ಉದಯವಾದವು. ವಿಧಾನಸಭೆಗೆ ಸ್ಪಷ್ಟವಾದ ಬಹುಮತ ಬರದೆ, ಕೆಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರಕಾರಗಳು ರಚನೆಯಾದ ಹಿನ್ನೆಲೆಯಲ್ಲಿ ಹಾಗೂ 1969ರ ಅನಂತರದ ದೇಶ ರಾಜಕಾರಣದಲ್ಲಿನ ವೈಚಾರಿಕ ಸಂಘರ್ಷದ ಪರಿಣಾಮ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಇಬ್ಭಾಗವಾಯಿತು. ಇವೆಲ್ಲದರ ಒಟ್ಟಾರೆ ಪರಿಣಾಮದಿಂದ ಕೆಲವು ರಾಜ್ಯಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಾಗಿ, ಕೆಲವು ರಾಜ್ಯಗಳಲ್ಲಿ ಬೇರೆ ಬೇರೆ ಆಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.
1967ರಲ್ಲಿ ಅಕಾಲಿದಳ, ಕೇರಳ, ಪಶ್ಚಿಮ ಬಂಗಾಲದಲ್ಲಿ ಕಮ್ಯೂನಿಸ್ಟ್ ಪಕ್ಷವು ಪ್ರಬಲವಾಯಿತು. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು ಜನ್ಮತಾಳಿದವು. 1976ರ ಅನಂತರ ಎಐಡಿಎಂಕೆ ಪಕ್ಷ ಆರಂಭವಾಯಿತು. 1980ರಲ್ಲಿ ಭಾರತೀಯ ಜನತಾ ಪಕ್ಷ ಉದಯಿಸಿತು. 1983ರ ಅನಂತರ ಜನತಾ ಪರಿವಾರ ಇಬ್ಭಾಗವಾಗಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಒಡಿಶಾದಲ್ಲಿ ಬಿಜೆಡಿ, ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ, ಹರಿಯಾಣದಲ್ಲಿ ಲೋಕದಳ ಪಕ್ಷಗಳು ಇವುಗಳಲ್ಲಿ ಪ್ರಮುಖವಾದವು. ಚುನಾವಣ ಹಿನ್ನೆಲೆಗಳು
ಭಾರತ ದೇಶದಲ್ಲಿ ಬಹುತೇಕ ಚುನಾವಣೆಗಳು ಭಾವನಾತ್ಮಕ ಸಂದರ್ಭದಲ್ಲಿಯೇ ನಡೆದಿವೆ. 1952ರಿಂದ 67ರ ವರೆಗೂ ಸ್ವಾತಂತ್ಯ† ಹೋರಾಟದ ಹಿನ್ನೆಲೆಯಲ್ಲಿ ಉತ್ತಮ ಸಂವಿಧಾನದ ಕೊಡುಗೆ ಸದ್ಭಾವನೆಯಿಂದಲೇ ದೇಶದ ಜನತೆ ಸುಭದ್ರ ಸರಕಾರವಾಗಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ನೆಹರೂ ಸರಕಾರಕ್ಕೆ ಬೆಂಬಲ ನೀಡಿದ್ದರು. ಇಂದಿರಾ ಗಾಂಧಿಯ ಹತ್ಯೆಯ ಅನುಕಂಪ, 1989ರಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ವಿ.ಪಿ. ಸಿಂಗ್ ಸರಕಾರ ಅಧಿಕಾರಕ್ಕೆ ಬಂದಿತ್ತು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ಅನುಕಂಪ, 1996 ರಿಂದ 1999ರ ವರೆಗೂ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತು. ದೇವೇಗೌಡರು ತಮಗೆ ಸಿಕ್ಕ ಅವಕಾಶದಲ್ಲಿ ಯಶಸ್ವಿಯೆನಿಸಿಕೊಂಡಿದ್ದರು. ವಾಜಪೇಯಿ 1 ಮತದಲ್ಲಿ ವಿಶ್ವಾಸಮತ ಸೋತಿದ್ದ ಅನುಕಂಪದಲ್ಲಿ ಮತ್ತೆ ಅಧಿಕಾರಕ್ಕೆ ಬಂದರು. ವಾಜಪೇಯಿ ಸಮ್ಮಿಶ್ರ ಸರಕಾರವನ್ನು ಚೆನ್ನಾಗಿಯೇ ನಿಭಾಯಿಸಿದ್ದರು. 2004ರ ಅನಂತರ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಮಾನ ಮನಸ್ಕ ಪಕ್ಷಗಳ ಯುಪಿಎ 10 ವರ್ಷಗಳ ಕಾಲ ಅಧಿಕಾರ ನಡೆಸಿತು. 2009ರಲ್ಲಿ ಗುಣಾತ್ಮಕ ಅಭಿವೃದ್ಧಿಗಾಗಿ ಮತ್ತೇ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಆಡಳಿತಾತ್ಮಕವಾಗಿ ಪ್ರಗತಿಪರ ಕಾರ್ಯ ಕ್ರಮಗಳಿಗಷ್ಟೇ ಆದ್ಯತೆ ನೀಡಿ ರಾಜಕೀಯ ನಾಯಕತ್ವಕ್ಕೆ ಒತ್ತು ನೀಡಿರಲಿಲ್ಲ. ಇದರ ಪರಿಣಾಮದಿಂದಲೇ ಮತ್ತೆ 2014 ಮತ್ತು 2019ರಲ್ಲಿ ಭಾವನಾತ್ಮಕ ವಿಚಾರಗಳಿಂದಲೇ ಬಿಜೆಪಿಯ ನರೇಂದ್ರ ಮೋದಿ ಪ್ರಧಾನಿಯಾದರು.
Related Articles
ಎಪ್ಪತ್ತು ವರ್ಷಗಳ ಆಡಳಿತದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿ, ಪ್ರಗತಿ ಹೊಂದುತ್ತಿರುವ ದೇಶವಾಗಿ ಮಾರ್ಪಟ್ಟಿತು. ಭಾರತದ ಸಂವಿಧಾನ ಜನಪರ, ಮಾನವೀಯ ಮೌಲ್ಯಗಳನ್ನೊಳಗೊಂಡ ದೇಶದ ಸಮಗ್ರತೆಯ ಬುನಾದಿ ಹಾಕಿಕೊಟ್ಟಿತು. ಭಾರತದ ನೆಲದ ಮಣ್ಣಿನ ಗುಣಕ್ಕೆ ಸಂವಿಧಾನ ಹೊಂದಿಕೊಂಡಿರುವುದರಿಂದ, ಸಂವಿಧಾನದ ಬದಲಾವಣೆಯನ್ನು ದೇಶದ ಜನ ಬಯಸುತ್ತಿಲ್ಲ, ಬದಲಾವಣೆಗೆ ಅವಕಾಶವೂ ಇಲ್ಲ. ಆದರೂ ಕಾಲಕ್ಕೆ ತಕ್ಕಂತೆ ತಿದ್ದುಪಡಿಗೆ ಅವಕಾಶವಿದೆ. ಬಲಿಷ್ಠ ಭಾರತ ನಿರ್ಮಾಣ ಮಾಡುವ ಉದ್ದೇಶ, ಇಚ್ಛಾಶಕ್ತಿ ನಮ್ಮದಾದರೆ ಬಹುತ್ವ ಭಾರತದ ನಿಲುವು, ಗುಣಗಳನ್ನು ಒಪ್ಪಲೇಬೇಕಾಗುತ್ತದೆ. ಈ ಸದುದ್ದೇಶದ ಹಿನ್ನೆಲೆಯಲ್ಲಿ ಒಂದು ದೇಶ ಒಂದು ಚುನಾವಣೆಯ ಚರ್ಚೆಯಾಗಿ ಕಾನೂನಾಗಿ ಜಾರಿಯಾಗಬೇಕಾಗುತ್ತದೆ.
Advertisement
ದೇಶದ 70 ವರ್ಷಗಳ ಆಡಳಿತದ ಹಿನ್ನೆಲೆಯಲ್ಲಿ ಸಂವಿಧಾನದ ಬಹುತ್ವ ಭಾರತ ಕಲ್ಪನೆಯಲ್ಲಿ ಒಂದು ದೇಶ ಒಂದು ಚುನಾ ವಣೆಯ ಚರ್ಚೆ ಆಗಬೇಕಿದೆ. ಲೋಕಸಭೆ ಮತ್ತು ವಿಧಾನಸಭೆಗೆ ಮಾತ್ರವೇ ಮಿತಿಗೊಳಿಸದೆ ಗ್ರಾ.ಪಂ., ತಾ.ಪಂ., ಜಿ.ಪಂ., ಪ.ಪಂ., ಪುರಸಭೆ, ನಗರಸಭೆ, ನಗರಪಾಲಿಕೆಗಳಿಗೂ ಒಂದೇ ಬಾರಿ ಚುನಾವಣೆ ನಡೆಯಬೇಕಾಗುತ್ತದೆ. ದೇಶದಲ್ಲಿ ಚುನಾವಣ ಸುಧಾರಣೆ ಮುಖ್ಯವಾಗಿ ಆಗಬೇಕಾಗುತ್ತದೆ. ಆಗದೇ ಹೋದರೆ ಪ್ರಜಾಪ್ರಭುತ್ವ ಗಂಡಾಂತರಕ್ಕೆ ಸಿಲುಕುವ ಅಪಾಯವಿದೆ. ಚುನಾವಣ ಆಯೋಗವು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದು ದುಂದುವೆಚ್ಚಕ್ಕೆ ಕಾರಣವಾ ಗಿದೆ. ಯಾವುದೇ ಕಾರಣಕ್ಕೂ ವಿಧಾನಸಭೆ, ಲೋಕಸಭೆ ಐದು ವರ್ಷಗಳೊಳಗೆ ವಜಾಗೊಳ್ಳಬಾರದು. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮೇಲೆ ಆಪಾದನೆ ಬಂದರೆ ಪರ್ಯಾಯ ವ್ಯವಸ್ಥೆ, ಪರ್ಯಾಯ ನಾಯಕತ್ವ ಆಯ್ಕೆ ಮೂಲಕ ಸರಕಾರವನ್ನು ಉಳಿಸಿಕೊಳ್ಳಬೇಕಾಗುತ್ತದೆ.
ಪ್ರತೀ ಚುನಾವಣೆಗೊಂದು ಮತಪಟ್ಟಿ ತಯಾರಿಕೆ ಸಮಯ ವ್ಯರ್ಥ ಹಾಗೂ ಹಣ ಪೋಲಾಗುವಂತಾಗಿದೆ. ಪದೇ ಪದೆ ಚುನಾವಣೆ ನಡೆಯುತ್ತಿದ್ದರೆ ಜನಪ್ರತಿನಿಧಿಗಳು ಆಡಳಿತಕ್ಕಿಂತಲೂ ಪ್ರಚಾರದ ಕಡೆ ಗಮನಹರಿಸುವುದರಿಂದ ಆಡಳಿತ, ಅಭಿವೃದ್ಧಿ ಕುಂಠಿತವಾಗುತ್ತದೆ. ಉಪಚುನಾವಣೆಗಳ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಉಪ ಚುನಾವಣೆ ಸಂದರ್ಭಗಳಲ್ಲಿ ಇಡೀ ಸರಕಾರ ಚುನಾವಣ ಪ್ರಚಾರಕ್ಕಿಳಿಯು ವುದರಿಂದ ಆಡಳಿತ ಕುಸಿಯುತ್ತದೆ. ಐದು ವರ್ಷಗಳಲ್ಲಿ ವಿವಿಧ ಚುನಾವಣೆಗಳು ನಡೆಯುತ್ತಿರುವುದರಿಂದ ಒಂದು ವರ್ಷ ಕಾಲ ನೀತಿಸಂಹಿತೆಗೊಳಪಡುತ್ತದೆ. ಇದು ಅಭಿವೃದ್ಧಿಗೆ ಕುತ್ತಾಗುತ್ತದೆ.
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಸ್ಪಷ್ಟವಾಗಿ ಕಠಿನ ಗೊಳಿಸಬೇಕಾಗುತ್ತದೆ. ಚಾಪೆ ಕೆಳಗೆ ತೂರಿ ಬಂದು ರಂಗೋಲಿ ಕೆಳಗೆ ತೂರಿ ಅಧಿಕಾರ ಪಡೆದುಕೊಳ್ಳಲು ಅವಕಾಶ ಇರಬಾರದು. ಒಂದು ದೇಶ ಒಂದು ಚುನಾವಣೆಗೂ ಮುನ್ನ ದೇಶವು ವಿವಿಧ ವಿಚಾರಗಳ ಮೇಲೆ ಸ್ಪಷ್ಟ ನಿರ್ಣಯಗಳನ್ನು ತೆಗೆದುಕೊಳ್ಳ ಬೇಕಾ ಗುತ್ತದೆ. ಪ್ರತೀ ರಾಜ್ಯಕ್ಕೂ ಪ್ರತ್ಯೇಕ ಪರಂಪರೆ ಇರುವುದರಿಂದ ರಾಷ್ಟ್ರಧ್ವಜದ ಜತೆಗೆ ರಾಜ್ಯ ಧ್ವಜಗಳ ಬಳಕೆಗೂ ಅವಕಾಶ ಕಲ್ಪಿಸಬೇಕು. ಭಾಷೆ ವಿಚಾರದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಯನ್ನಾಗಿ ಬಿಂಬಿಸದೆ ಕರ್ನಾಟಕ ಅಧಿಕೃತ ಭಾಷೆ ಕನ್ನಡ ಎಂಬಂತೆ ಕೇಂದ್ರ ಸರಕಾರದ ಅಧಿಕೃತ ಭಾಷೆಯನ್ನಾಗಿ ಹಿಂದಿ ಯನ್ನು ಗುರುತಿಸಬೇಕು. ಜತೆಗೆ ಇಂಗ್ಲಿಷ್‌ಗೂ ಆದ್ಯತೆ ನೀಡಬೇಕು. ನದಿಗಳ ಜೋಡಣೆಯಾಗಿ ಜಲಸಂಪನ್ಮೂಲ ಸಮನಾಗಿ ಹಂಚಿಕೆಯಾಗಬೇಕು. ಮಹಿಳಾ ಮೀಸಲಾತಿ, ಒಬಿಸಿ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿಲುವು ಬೇಕು. ಪ್ರತೀ 15 ವರ್ಷಗಳಿಗೊಮ್ಮೆ ಕ್ಷೇತ್ರಗಳ ಪುನರ್‌ವಿಂಗಡಣೆೆಯಾಗ ಬೇಕಾಗುತ್ತದೆ.
ಚರ್ಚೆ ಸಂಸತ್ತಿನಿಂದ ಆರಂಭವಾಗಲಿಈ ಚರ್ಚೆ ಮೊದಲು ಸಂಸತ್ತಿನಲ್ಲಿ ಆಗಬೇಕು. ಯಾವ ಪರಿಕಲ್ಪನೆಯಲ್ಲಿ ಒಂದು ಚುನಾವಣೆ ನಡೆಸಬೇಕೆಂಬುದನ್ನು ಸ್ಪಷ್ಟಪಡಿಸ ಬೇಕು. ಏಕೆಂದರೆ ಇದರ ನಡೆ ಒಂದು ಪಕ್ಷ ಒಂದು ನಾಯಕತ್ವ ಆಗುವ ಅಪಾಯವಿದೆ. ಇದನ್ನು ಮೊದಲು ನಿವಾರಣೆ ಮಾಡ ಬೇಕು. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆ ನಡೆದು ಸ್ಪಷ್ಟ ವಾದ ನಿರ್ಣಯ ಕೈಗೊಂಡ ಅನಂತರ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ, ಮಾಧ್ಯಮಗಳಲ್ಲಿ ಚರ್ಚೆಗೊಳಪಡಬೇಕು, ಪತ್ರಿಕೆಗಳಲ್ಲಿ ಲೇಖನ ಮಾಲೆ ಆರಂಭವಾಗಬೇಕು, ಅಲ್ಲಿನ ಸಲಹೆಗಳನ್ನು ತಜ್ಞರ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಬಹುತ್ವ ಭಾರತವೇ ಬಲಿಷ್ಠ ಭಾರತದ ಸಂವಿಧಾನದ ಆಶಯದಲ್ಲಿ ಒಂದು ದೇಶ ಒಂದು ಚುನಾವಣೆಯ ಕಾನೂನು ಜಾರಿಗೆ ತರಬೇಕಾಗುತ್ತದೆ. – ವಿ.ಆರ್.ಸುದರ್ಶನ್ ಮಾಜಿ ಸಭಾಪತಿ, ರಾಜ್ಯ ವಿಧಾನಪರಿಷತ್