ವಾಡಿ: ಹೈದ್ರಾಬಾದ ಫಲಕನಾಮಾ ಪ್ಯಾಸೆಂಜರ್ ರೈಲನ್ನು ವಾಡಿ ನಿಲ್ದಾಣದಲ್ಲೇ ತಡೆಯದೇ ಅದನ್ನು ಕಲಬುರಗಿ ವರೆಗೂ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ದಲಿತ ಸೇನೆ ಮುಖಂಡರು ರೈಲ್ವೆ ಡಿಆರ್‌ಎಂಗೆ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರಿಗಾಗಿ ಒದಗಿಸಲಾದ ವಿವಿಧ ಸೌಕರ್ಯಗಳ ಪರಿಸ್ಥಿತಿ ಅವಲೋಕಿಸಿದ ಸೆಂಟ್ರಲ್ ರೈಲ್ವೆ ಮಹಾ ನಿರ್ದೇಶಕರನ್ನು ಭೇಟಿ ಮಾಡಿದ ದಲಿತ ಮುಖಂಡರು, ವಿವಿಧ ಬೇಡಿಕೆಗಳ ಮನವಿಪತ್ರ ಸಲ್ಲಿಸಿ ಮಾತುಕತೆ ನಡೆಸಿದರು.
ಪ್ರತಿನಿತ್ಯ ಹೈದ್ರಾಬಾದ್‌ದಿಂದ ವಾಡಿ ಜಂಕ್ಷನ್ ನಿಲ್ದಾಣದ ವರೆಗೆ ಫಲಕನಾಮಾ ಪ್ಯಾಸೆಂಜರ್ ರೈಲು ಸಂಚರಿಸುತ್ತಿದೆ. ಬೆಳಗ್ಗೆ 11 ಗಂಟೆಗೆ ವಾಡಿ ನಿಲ್ದಾಣ ತಲುಪುವ ಈ ರೈಲನ್ನು ಅನಗತ್ಯವಾಗಿ ಮುಂದೆ ಚಲಿಸದಂತೆ ತಡೆಯಲಾಗಿದೆ. ವಾಡಿ ನಿಲ್ದಾಣದಿಂದಲೇ ಮತ್ತೆ ಹೈದ್ರಾಬಾದ್‌ನತ್ತ ಹೊರಡುತ್ತಿದೆ. ಇದರಿಂದ ಈ ಭಾಗದ ಸಾಮಾನ್ಯ ಪ್ರಯಾಣಿಕರಿಗೆ ಜಿಲ್ಲಾ ಕೇಂದ್ರದ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದಾರೆ.
ಕಲಬುರಗಿ ನಗರಕ್ಕೆ ಪ್ರಯಾಣ ಬೆಳೆಸುವ ಶಾಲೆ-ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು, ಪ್ರಯಾಣಿಕರು, ಆಸ್ಪತ್ರೆಗೆ ಹೋಗುವ ರೋಗಿಗಳು ಹೀಗೆ ದಿನಕ್ಕೆ ಸಾವಿರಾರು ಜನ ವಾಡಿ-ಕಲಬುರಗಿ ಮಧ್ಯೆ ಹೋಗಿ ಬರುವ ಕಾಯಂ ಪ್ರಯಾಣಿಕರಿದ್ದಾರೆ. ಲಾಕ್‌ಡೌನ್ ಜಾರಿಗೂ ಮುನ್ನ ಫಲಕನಾಮಾ ರೈಲು ಕಲಬುರಗಿ ವರೆಗೆ ಓಡುತ್ತಿತ್ತು. ಕೊರೊನಾ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ರೈಲು ಸಂಚಾರ ತಡೆಯಲಾಗಿದೆ. ಈಗ ಕೋವಿಡ್ ಕರಾಳ ಛಾಯೆ ಕಡಿಮೆಯಾಗಿದ್ದು, ಪ್ಯಾಸೆಂಜರ್ ರೈಲುಗಳು ಮತ್ತು ಎಕ್ಸ್‌ಪ್ರೆಸ್ ರೈಲುಗಳು ಹಳಿ ಹಿಡಿದಿವೆ. ಆದರೆ ಫಲಕನಾಮಾ ಪ್ಯಾಸೆಂಜರ್ ರೈಲು ಮಾತ್ರ ಕಲಬುರಗಿ ವರೆಗೆ ಚಲಿಸುತ್ತಿಲ್ಲ. ಈ ರೈಲು ಕೂಡಲೇ ಕಲಬುರಗಿ ವರೆಗೆ ಚಲಿಸುವಂತೆ ಕ್ರಮಕೈಗೊಂಡು ಜನರಿಗೆ ಅನುಕೂಲ ಒದಗಿಸಬೇಕು ಎಂದು ಅಂಬೇಡ್ಕರ್ ದಲಿತ ಸೇನೆ ತಾಲೂಕು ಅಧ್ಯಕ್ಷ ರಾಜು ಕೊಲ್ಲೂರ ಮನವಿ ಮಾಡಿದ್ದಾರೆ. ಮುಖಂಡರಾದ ಹಾಜಪ್ಪ ಲಾಡ್ಲಾಪುರ, ರಾಜು ಗಟ್ಟು ಇದ್ದರು.