Advertisement
ಎಚ್.ವಿ.ರಾಜೀವ್ ಸ್ನೇಹಬಳಗ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜೆಪಿ ನಗರದ ಡಾ.ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದಲ್ಲಿ “ಹಸಿರು ಮೈಸೂರಿಗಾಗಿ ಲಕ್ಷ-ವೃಕ್ಷ ಆಂದೋಲನ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಹಸಿರಿನಿಂದ ಕಂಗೊಳಿಸುತ್ತಿದ್ದ ಮೈಸೂರು ಇಂದು ಕಾಂಕ್ರಿಟ್ ಕಾಡಾಗಿದೆ. ಈ ಹಿಂದೆ ಇಲ್ಲಿ ಮೇ ತಿಂಗಳಲ್ಲೂ ಚಳಿಯಾಗುತ್ತಿತ್ತು. ಈಗ ಡಿಸೆಂಬರ್ ತಿಂಗಳಲ್ಲೂ ಸೆಕೆಯಾಗುವಂತಹ ವಾತಾವರಣ ಸೃಷ್ಟಿಯಾಗಿದೆ. ವೃಕ್ಷಗಳನ್ನು ಕಾಪಾಡುವುದೇ ಒಂದು ಧರ್ಮವಾಗಿದೆ. ಮೈಸೂರಿನ ಹಿಂದಿನ ಅದ್ಭುತ ವಾತಾವರಣ ಮರುಕಳಿಸಲು ನಾವೆಲ್ಲಾ ಹಸಿರು ಮೈಸೂರು ಸಂಕಲ್ಪ ತೊಡಬೇಕು ಎಂದರು.
ಪೋಷಣೆ: ಸುತ್ತೂರು ಮಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಎಲ್ಲರೂ ಮರಗಳನ್ನು ವಿವಿಧ ಉಪಯೋಗಗಳಿಗೆ ಬಳಸುತ್ತಾರೆ. ಆದರೆ, ಮರಗಳು ಒಣಗಿದಾಗ ಅವುಗಳಿಗೆ ನೀರುಣಿಸುವ ಕೆಲಸ ಯಾರೂ ಮಾಡುವುದಿಲ್ಲ. ಈಗಾಗಲೇ ವಿವಿಧ ಕಾರಣಗಳಿಂದ ಕಾಡುಗಳು ನಾಶವಾಗುತ್ತಿವೆ. ಇದರಿಂದ ಪ್ರಕೃತಿ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕಾಡುಗಳ ರಕ್ಷಣೆ ಮತ್ತು ವೃಕ್ಷಗಳನ್ನು ಬೆಳೆಸುವುದು ನಮ್ಮ ಗುರಿಯಾಗಬೇಕು ಎಂದು ಹೇಳಿದರು.
ಹಸಿರು ನಗರ: ಶಾಸಕ ತನ್ವೀರ್ ಸೇಠ್ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ 10 ಸಾವಿರ ಗಿಡಗಳನ್ನು ನೆಡುವ ಆಸೆ ನನಗಿದೆ. ಶೀಘ್ರದಲ್ಲೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಲ್ಲಿ ಸಸಿ ನಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜತೆಗೆ ಎನ್.ಆರ್.ಕ್ಷೇತ್ರದ ಉದ್ಯಾನವನಗಳು, ರುದ್ರಭೂಮಿ, ಶಾಲಾ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ಮೈಸೂರನ್ನು ಹಸಿರು ನಗರವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ರಾಘವನ್, ಶ್ರೀಕಾಂತ್, ಗಂಗಾಧರಯ್ಯ, ಎ.ಸಿ.ಲಕ್ಷ್ಮಣ್, ದಶರಥ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆಯೋಜಿಸಿದ್ದ ಎಚ್.ವಿ.ರಾಜೀವ್ ಅವರು, ಸದ್ಗುರು ಅವರ ಕಾವೇರಿ ಕೂಗು ಆಂದೋಲನ ಬೆಂಬಲಿಸಿ ಒಂದು ಸಾವಿರ ಸಸಿ ನೆಡಲು 42 ಸಾವಿರ ರೂ.ಗಳ ಚೆಕ್ ನೀಡಿದರು.
ಮೇಯರ್ ಪುಷ್ಪಲತಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಧರ್ಮಸ್ಥಳ ಗ್ರಾಮೀಣ ಯೋಜನೆ ಬಿ.ಸಿ. ಟ್ರಸ್ಟ್ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಎಂ.ನಾಗಭೂಷಣ್, ಬಿಜೆಪಿ ಮೈಸೂರು ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಇತರರಿದ್ದರು.
ಒಬ್ಬರು ಒಂದು ಸಸಿ ನೆಡುವ ಸಂಕಲ್ಪ: 30 ವರ್ಷಗಳ ಹಿಂದೆ ಚಾಮುಂಡಿ ಬೆಟ್ಟದಲ್ಲಿ ನಿಂತು ಮೈಸೂರನ್ನು ನೋಡಿದರೆ, ಕೇವಲ ಅರಮನೆ ಮಾತ್ರ ಕಾಣುತ್ತಿತ್ತು. ಉಳಿದ ಎಲ್ಲವೂ ಹಸಿರಿನಿಂದ ಕಂಗೋಳಿಸಿ ಮೈಸೂರು ಒಂದು ಸುಂದರ ತೋಟದಂತೆ ಕಾಣುತ್ತಿತ್ತು. ಈಗ ಹಸಿರೇ ಕಾಣುತ್ತಿಲ್ಲ. ಆದರೂ ನಾವು ಸುಮ್ಮನೆ ಕೂರಬಾರದು. ನಗರದಲ್ಲಿ 13 ಲಕ್ಷ ಜನಸಂಖ್ಯೆ ಇದ್ದು, ಒಬ್ಬರು ಒಂದು ಮರವನ್ನು ನೆಡುವ ಸಂಕಲ್ಪ ಮಾಡಿದರೆ, ಇನ್ನು ಕೆಲವೇ ವರ್ಷಗಳಲ್ಲಿ 13 ಲಕ್ಷ ಮರಗಳನ್ನು ಕಾಣಬಹುದು ಎಂದು ಸದ್ಗುರು ಹೇಳಿದರು.
ಗಿಡದ ಮೇಲೆ ಪೋಷಿಸುವವರ ಹೆಸರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ 30 ವರ್ಷದಿಂದ ನಾವು ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ಪ್ರತಿ ಗಿಡದ ಮೇಲೂ ಅದನ್ನು ಪೋಷಿಸುವವರ ಹೆಸರು ಹಾಕುವ ಕಾರಣ ಸಾರ್ವಜನಿಕರು ಅದನ್ನು ಖಂಡಿತಾ ಕಾಪಾಡುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.