Advertisement

ಮಠಗಳು ಜಾತಿ ಬೇರು ಸಡಿಲಗೊಳಿಸಲಿ

09:42 AM Feb 11, 2019 | |

ಹೊಸದುರ್ಗ: ಜಾತಿ ವ್ಯವಸ್ಥೆಯಿಂದ ಸಾಮಾಜಿಕ ಆರ್ಥಿಕ ಅಸಮಾನತೆ ಉಂಟಾಗುತ್ತಿದೆ. ನಾಡಿನಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶಗಳು ಸಿಗಬೇಕು. ಆದರೆ ದೇಶದ ಸಂಪತ್ತು ಕೆಲವರ ಬಳಿ ಕೇಂದ್ರೀಕೃತವಾಗಿದ್ದು, ಸಂಪತ್ತಿನ ಸಮ ಹಂಚಿಕೆ ಆದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಪೀಠದಲ್ಲಿ ಭಾನುವಾರ ನಡೆದ ಅಖೀಲ ಭಾರತ ಭಗೀರಥ ಜಯಂತ್ಯುತ್ಸವ ಹಾಗೂ ಡಾ| ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಪಟ್ಟಾಭಿಷೇಕದ 19ನೇ ವಾರ್ಷಿಕ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಮತದಾನ ಮಾಡುವುದಷ್ಟೇ ಸ್ವಾತಂತ್ರ್ಯವಲ್ಲ. ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯದ ಜತೆಗೆ ಪ್ರತಿಯೊಬ್ಬರಿಗೂ ಸಮಾನತೆ ದೊರಕಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ ಎಂದರು.

ಸಾಧು-ಸಂತರ ನಾಡಾಗಿರುವ ರಾಜ್ಯದಲ್ಲಿ ಬಸವಾದಿ ಶರಣರು ವರ್ಗರಹಿತ ಸಮಾಜ ನಿರ್ಮಾಣ ಮಾಡಲು ಸಾಮಾಜಿಕ ಕ್ರಾಂತಿ ಮಾಡಿದ್ದರು. ಆದರೆ ಸಮಾಜದಲ್ಲಿ ಜಾತಿ ರಹಿತ ವ್ಯವಸ್ಥೆ ಇನ್ನೂ ಮುಂದುವರೆದಿರುವುದು ವಿಷಾದನೀಯ. ಜಾತಿ ವ್ಯವಸ್ಥೆಯ ಬೇರುಗಳನ್ನು ಸಡಿಲಗೊಳಿಸಲು ಮಠಗಳು ಮುಂದಾಗಬೇಕು ಎಂದು ತಿಳಿಸಿದರು.

ಚಾಮರಾಜನಗರ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯದವರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಪ್ರಯತ್ನ ಮಾಡದೆ ಗೆಲ್ಲಲು ಹೇಗೆ ಸಾಧ್ಯವಾಗುತ್ತದೆಂದು ಹೇಳಿ ಪುಟ್ಟರಂಗ ಶೆಟ್ಟಿಗೆ ಟಿಕೆಟ್ ಕೊಟ್ಟಿದ್ದೆ. ಮೂರು ಬಾರಿ ಗೆಲ್ಲುವ ಮೂಲಕ ಅವರು ಹ್ಯಾಟ್ರಿಕ್‌ ಹೀರೋ ಆಗಿದ್ದಾರೆ ಎಂದರು.

Advertisement

ಉಪ್ಪಾರರಿಗೆ ಕಾಂಗ್ರೆಸ್‌ ಬಿಟ್ಟರೆ ಬೇರೆ ಯಾವ ಪಕ್ಷವೂ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ಸ್ವತಂತ್ರ ಭಾರತದಲ್ಲಿಯೇ ಉಪ್ಪಾರ ಸಮುದಾಯಕ್ಕೆ ಸೇರಿದವರ್ಯಾರೂ ಮಂತ್ರಿಯಾಗಿರಲಿಲ್ಲ. ನಾನು ಹಠಕ್ಕೆ ಬಿದ್ದು ಉಪ್ಪಾರ ಸಮುದಾಯಕ್ಕೆ ಸೇರಿದ ಪುಟ್ಟರಂಗ ಶೆಟ್ಟಿಯನ್ನು ಸಚಿವನನ್ನಾಗಿ ಮಾಡಿದ್ದೇನೆ. ಆದರೆ ಮಂತ್ರಿಯಾಗಿ ಕೇವಲ ಏಳೇ ತಿಂಗಳಿಗೆ ಅವರ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆರೂವರೆ ಕೋಟಿ ಜನರ ಸರ್ಕಾರ ಇದು. ಇದರಲ್ಲಿ ನಿಮಗೆ ಬರಬೇಕಾದ ಪಾಲು ಕೂಡ ಇರುತ್ತದೆ. ಇದನ್ನು ನೀವು ಕೇಳಿ ಅಥವಾ ಸಮಯ ಬಂದಾಗ ಹೋರಾಟದ ಮೂಲಕವಾದರೂ ಪಡೆದುಕೊಳ್ಳಬೇಕು. ಆಯಾ ಕಾಲದಲ್ಲಿ ಅವರವರ ಮಠಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ನಿಮ್ಮ ಉಪ್ಪಾರ ಮಠಕ್ಕೂ ಧೈರ್ಯವಾಗಿ ಬೇಕಾದಷ್ಟು ಹಣ ನೀಡು. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಿನ್ನ ಜತೆ ನಾನಿರುತ್ತೇನೆ ಎಂದು ಸಚಿವ ಪುಟ್ಟರಂಗ ಶೆಟ್ಟಿಯನ್ನುದ್ದೇಶಿಸಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಕಾಡಾ ಮಾಜಿ ಅಧ್ಯಕ್ಷ ವಿಜಯಪುರದ ಜೆಕ್ಕಪ್ಪ ಯಡವಿ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್‌. ಮೂರ್ತಿ, ತಾಲೂಕು ಅಧ್ಯಕ್ಷ ಮಂಜುನಾಥ್‌, ಆಡಿಟರ್‌ ಮಲ್ಲೇಶಪ್ಪ, ಜಿಪಂ ಸದಸ್ಯರಾದ ಅನಂತ್‌, ವಿಶಾಲಾಕ್ಷಿ , ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮೊದಲಾದವರು ಪಾಲ್ಗೊಂಡಿದ್ದರು.

ಉಪ್ಪಾರ ಸಮಾಜ ಅಭ್ಯುದಯಕ್ಕೆ ಬದ್ಧ
ಉಪ್ಪಾರ ಸಮುದಾಯನ್ನು ಎಸ್‌ಟಿಗೆ ಸೇರಿಸಲು ನನ್ನದೇನೂ ತಕರಾರಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಚರ್ಚಿಸುತ್ತೇನೆ. ಸಮುದಾಯಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ನಾನು ಬದ್ಧ. ನಾನು ಮುಖ್ಯಮಂತ್ರಿಯಾಗಿದ್ದಾಗ ಉಪ್ಪಾರ ಅಭಿವೃದ್ಧಿ ನಿಗಮ, ಭಗೀರಥ ಜಯಂತಿ, ಬಿಸಿಎಂ ರಿಸರ್ವೇಷನ್‌ ಹಾಗೂ ಮುಖಂಡರಿಗೆ ವಿವಿಧ ಸ್ಥಾನಮಾನಗಳನ್ನು ನೀಡುವ ಮೂಲಕ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಿದ್ದೇನೆ. ಆದ್ದರಿಂದ ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಗೆ ಬೆಂಬಲ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next