ಚಿಕ್ಕಬಳ್ಳಾಪುರ: ಸಿನಿಮಾ ಹಾಗೂ ಧಾರವಾಹಿಗಳಗಿಂತ ಕಿರುಚಿತ್ರಗಳು ಹೆಚ್ಚು ಜನರ ಮೇಲೆ ಪ್ರಭಾವ ಬೀರಲಿದ್ದು, ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಕಿರುಚಿತ್ರಗಳು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಸಂದೇಶ ಹೊಂದಿರಲಿ ಎಂದು ನಗರದ ಡಾ.ಶ್ರೀ ಜಚನಿ ಕಾಲೇಜಿನ ಆಡಳಿತಾಧಿಕಾರಿ ಶಿವಜ್ಯೋತಿ ತಿಳಿಸಿದರು.
ನಗರದ ಡಾ.ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಚಿತ್ರ ನಿರ್ದೇಶಕ, ಯುವ ಲೇಖಕ ರಾಜಹಂಸ ಅವರ “ನೋಡ್ ಬೇಡ’ ಕಿರುಚಿತ್ರದ ಟ್ರೆ„ಲರ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಚಿತ್ರೋದ್ಯಮ ಸಾಮಾಜಿಕ ಕಳಕಳಿ ಮರೆತು ಕೇವಲ ದುಡ್ಡು ಮಾಡಲು ಸಿನಿಮಾ ನಿರ್ಮಿಸಲಾಗುತ್ತಿದೆ. ಹೆಣ್ಣು ಮಕ್ಕಳ ಮೈಮಾಟ ತೋರಿಸಿ ಹಣಗಳಿಕೆ ಮಾಡುವ ಸಂಸ್ಕೃತಿಯನ್ನು ಚಿತ್ರೋದ್ಯಮ ಕೈ ಬಿಡಬೇಕಾಗಿದೆ. ದೇಶ ಎದುರಿಸುತ್ತಿರುವ ವಾಸ್ತವಿಕ ಸಂಗತಿ, ಸಮಸ್ಯೆ ಸವಾಲುಗಳನ್ನು ಬಿಂಬಿಸುವ ರೀತಿಯಲ್ಲಿ ಕಿರು ಚಿತ್ರ ಹಾಗೂ ಚಲನಚಿತ್ರಗಳು ಮೂಡಿಬರಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಹಿರಿಯ ರಂಗಕರ್ಮಿ, ನಿರ್ದೇಶಕ ದೇವನಹಳ್ಳಿ ದೇವರಾಜ್ ಮಾತನಾಡಿ, ಕಿರುಚಿತ್ರಗಳ ನಿರ್ಮಾಣ ದೊಡ್ಡ ಸವಾಲಿನ ಕೆಲಸ. ಗ್ರಾಮೀಣ ಪ್ರತಿಭೆಗಳಿಗೆ ಪೋ›ತ್ಸಾಹ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜಹಂಸ ದೂರದ ಬೀದರ್‌ನಿಂದ ಬಂದು ಚಿಕ್ಕಬಳ್ಳಾಪುರದಲ್ಲಿ ದುಡಿಮೆಯೊಂದಿಗೆ ಸಾಹಿತ್ಯ, ಕಲೆ, ಸಿನಿಮಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು.
ನೋಡ್ ಬೇಡ ಚಿತ್ರದ ನಾಯಕ ನಟ, ನಿರ್ದೇಶಕ ರಾಜಹಂಸ ಮಾತನಾಡಿ, ಕೇವಲ 25 ನಿಮಿಷದ ನೋಡ್‌ಬೇಡ ಚಿತ್ರದಲ್ಲಿ 28 ಮಂದಿ ಕಲಾವಿದರು ನಟಿಸಿದ್ದಾರೆಂದರು. ಈ ವೇಳೆ ಡಾ.ಜಚನಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವೆಂಕಟರವಣ, ಸಾಹಿತಿ ಎಂ.ಎಲ್.ನರಸಿಂಹಮೂರ್ತಿ, ಛಾಯಾಗ್ರಾಹಕ ಸಂಗಮೇಶ್, ಸಂಗೀತ ನಿರ್ದೇಶಕ ಅನಿಲ್ ಚಿನ್ನು, ಐಬಿ ಗ್ರೂಪ್ ವ್ಯವಸ್ಥಾಪಕ ರಾಜೇಶ್ ಕಣ್ಣನ್, ಡಾ.ದೇವನಹಳ್ಳಿ ದೇವರಾಜ್, ನಟ ನಾರಾಯಣ್ ಬೈರಪ್ಪ ಇತರರಿದ್ದರು.