Advertisement

ಆರೋಗ್ಯಪೂರ್ಣ ಸಮಾಜಕ್ಕೆ ಮಾಧ್ಯಮ ಶ್ರಮಿಸಲಿ

02:38 PM Aug 06, 2018 | |

ದಾವಣಗೆರೆ: ಪತ್ರಕರ್ತರು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುವುದು ನಮ್ಮ ಕರ್ತವ್ಯ ಎಂದು ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್‌ ಆಶಿಸಿದ್ದಾರೆ.

Advertisement

ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ವರದಿಗಾರರ ಕೂಟದಿಂದ ಏರ್ಪಡಿಸಿದ್ದ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರು ರಾಜಕಾರಣಿಗಳೊಂದಿಗಿನ ಸಂಬಂಧವನ್ನು ಬಹು ಜಾಣ್ಮೆ, ಚಾಣಾಕ್ಷತೆಯ ಅಂತರ ಕಾಯ್ದುಕೊಳ್ಳುವ ಜೊತೆಗೆ ಅವರೊಡಗಿನ ಒಡನಾಟವನ್ನು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. 

ಒಂದು ಪ್ರದೇಶ, ಪ್ರಾಂತ್ಯ, ರಾಜ್ಯದಲ್ಲಿ ಒಳ್ಳೆಯ ನಾಗರಿಕ ಸೌಲಭ್ಯ ದೊರೆಯುವಂತಾಗುವಲ್ಲಿ ಪತ್ರಕರ್ತರು ಪ್ರಮುಖ ಕಾರಣರಾಗುತ್ತಾರೆ. ಸಮಸ್ಯೆಗಳ ಬಗ್ಗೆ ಪದೆ ಪದೇ ಬರೆಯುವ ಮುಖೇನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿ, ಸಮಸ್ಯೆಗೆ ಪರಿಹಾರ ದೊರೆಯುವಂತೆ ಮಾಡುತ್ತಾರೆ. ಸಮಾಜ ಪತ್ರಕರ್ತರನ್ನ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೋಗಬಹುದು, ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸದೇ ಇರಬಹುದು. ಆದರೂ, ಪತ್ರಕರ್ತರು
ತಮ್ಮ ಕರ್ತವ್ಯವನ್ನ ಬಹು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ಹಿಂದೆಲ್ಲಾ ರೇಡಿಯೋದಲ್ಲಿ ಪ್ರಧಾನಿ ಇಂದಿರಾಗಾಂಧಿ… ಎಂಬುದೇ ಹೆಚ್ಚಾಗಿ ಕೇಳಿ ಬರುತ್ತಿದೆ. ಈಗ ರೇಡಿಯೋ, ಟಿವಿ,
ದಿನಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರದ್ದೇ ಗುಣಗಾನ ಕಂಡು ಬರುತ್ತದೆ. ಯಾರೇ ಆಗಲಿ ಒಳ್ಳೆಯ ಕೆಲಸ ಮಾಡಿದಾಗ ಹೊಗಳಿ ಬರೆಯಬೇಕು. ಆ ರೀತಿಯ ಬರೆಯುವಾಗ ಬಳಸುವ ಪದಗಳ ಬಗ್ಗೆ ಜಾಗ್ರತೆ ವಹಿಸಬೇಕು. ಕನ್ನಡದ ಪದಗಳ ಮರ್ಯಾದೆ ಉಳಿಸುವಂತಿರಬೇಕು. ಈಗ ಅಭಿವೃದ್ಧಿ ಎಂದರೆ ಕಮೀಷನ್‌ ಎಂದಾಗಿದೆ. ಹಾಗಾಗಿಯೇ ಎಚ್ಚರ ವಹಿಸಬೇಕು. ರಾಜಕಾರಣಿಗಳ ಜೊತೆಗಿನ ಸಂಬಂಧ ಪ್ರೀತಿ ಮತ್ತು ದ್ವೇಷದಂತಿರಬೇಕು ಎಂದು ತಿಳಿಸಿದರು.

ಪತ್ರಕರ್ತರು ತಮ್ಮ ಮಕ್ಕಳು ಪತ್ರಕರ್ತರಾಗಬೇಕು ಎಂಬುದು ಯಾರೂ ಬಯಸುವುದಿಲ್ಲ. ಈ ರೀತಿಯ ವಾತಾವರಣ ಎಲ್ಲ ಕ್ಷೇತ್ರದಲ್ಲಿ ಇದೆ. ಪತ್ರಕರ್ತರು ಜಾತಿ, ಧರ್ಮ, ಆಮಿಷ, ಒತ್ತಡವನ್ನೂ ಮೀರಿ ಕೆಲಸ ಮಾಡಬೇಕು. ಈಗಿನ ವಾತಾವರಣ ನೋಡಿದರೆ ಇನ್ನೂ ಹೆಚ್ಚಿನ ಸಂಖ್ಯೆಯ ಪತ್ರಕರ್ತರು ಬೇಕಾಗಿದೆ. 

Advertisement

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವತಂತ್ರವಾಗಿ ಬರೆಯುವಂತಹ ಪತ್ರಕರ್ತರು ಬರುವಂತಾಗಬೇಕು. ಪತ್ರಕರ್ತರು ಪ್ರತಿ ಅಕ್ಷರ, ಪದವನ್ನು ಬಹು ಎಚ್ಚರ, ಜವಾಬ್ದಾರಿಯಿಂದ ಬರೆಯುವ ಮೂಲಕ ಒಳ್ಳೆಯ ಸಮಾಜ
ನಿರ್ಮಾಣಕ್ಕೆ ಕಾರಣೀಭೂತರಾಗಬೇಕು ಎಂದು ತಿಳಿಸಿದರು.

ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಪತ್ರಕರ್ತರು ಸದಾ ಜನರ ಮಧ್ಯೆ ಇದ್ದುಕೊಂಡು ನಿರಂತರವಾಗಿ ಬರೆಯುತ್ತಾ ಇರಬೇಕು. ಯಾವುದೇ ಹಂತದ ಹುದ್ದೆಯಲ್ಲಿದ್ದರೂ ಬರವಣಿಗೆ ಪ್ರಾಥಮಿಕ ಕೆಲಸ ಆಗಿರಬೇಕು. ಈಗಿರುವ ವಾತಾವರಣ ಅವಲೋಕಿಸಿದರೆ ಪತ್ರಕರ್ತರನ್ನ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುನಾಯಿಗಳು… ಎಂದು ಅನ್ನಬಹುದೇ ಎನ್ನುವಂತಿದೆ. ಮಾಧ್ಯಮ ಈಗ ಸಾಕಷ್ಟು ಬದಲಾವಣೆಗೊಂಡಿದೆ. 

ಡಿಜಿಟಲ್‌ ವ್ಯವಸ್ಥೆ ಬರುತ್ತಿರುವ ಕಾರಣಕ್ಕೆ ಮುದ್ರಣ ಮಾಧ್ಯಮದಲ್ಲೂ 24ಹಿ7 ಮಾದರಿ ಕೆಲಸ ಮಾಡಬೇಕಾಗುತ್ತದೆ. ಪ್ರಾಯೋಕತ್ವದ ಆಧಾರದಲ್ಲಿ ಪ್ರಮುಖ ಸುದ್ದಿಗಳು ಹೊರ ಬರುವ ಕಾಲವೇನೂ ದೂರ ಇಲ್ಲ, ಆದರೂ, ಸಾಮಾಜಿಕ ಅನಿಷ್ಟ ಪದ್ಧತಿಗಳ ದೂರ ಮಾಡುವ, ಒಳ್ಳೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತಹ ಪತ್ರಕರ್ತರು ಅಗತ್ಯವಾಗಿ ಬೇಕು ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌ ಮಾತನಾಡಿ, ಮಾಧ್ಯಮದ ದಿಕ್ಕು ಬದಲಾವಣೆ ಆಗುತ್ತಿದೆ. ಬಹು ದೊಡ್ಡ ತಿರುವು ತೆಗೆದುಕೊಳ್ಳಲಿದೆ. ಅಂಗೈಯಲ್ಲಿ ಸುದ್ದಿಗಳು ದೊರೆಯುತ್ತಿವೆ. ಹಾಗಾಗಿ ಪತ್ರಕರ್ತರು ಬದುಕು ಅತಂತ್ರವಾಗುತ್ತಿದೆ. ಆ ನಡುವೆಯೂ ವೃತ್ತಿಪರತೆ ಮೈಗೂಡಿಸಿಕೊಳ್ಳುವ ಮೂಲಕ ಬದುಕನ್ನ ಕಟ್ಟಿಕೊಳ್ಳಬೇಕಿದೆ ಎಂದರು.

ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಎಸ್‌. ಬಡದಾಳ್‌ ಪ್ರಾಸ್ತಾವಿಕ ಮಾತುಗಳಾಡಿದರು. ಜಿಲ್ಲಾ ವರದಿಗಾರರ ಕೂಟದ ಖಜಾಂಚಿ ಎ.ಎಲ್‌. ತಾರಾನಾಥ್‌, ಜಿಲ್ಲಾ ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಬಸವರಾಜ್‌ ದೊಡ್ಮನಿ ಇದ್ದರು. ಸೌಮ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿ.ಕೆ. ಕಾವ್ಯ ಸ್ವಾಗತಿಸಿದರು. ದೇವಿಕಾ ಸುನೀಲ್‌ ನಿರೂಪಿಸಿದರು. ಜಿ.ಎಂ.ಆರ್‌, ಆರಾಧ್ಯ ವಂದಿಸಿದರು.

ಉದಯವಾಣಿ ಪತ್ರಿಕೆ ಮುಖ್ಯ ವರದಿಗಾರ ಎನ್‌.ಆರ್‌.ನಟರಾಜ್‌, ಸಂಯುಕ್ತ ಕರ್ನಾಟಕ ಪತ್ರಿಕೆ ಉಪ ಸಂಪಾದಕ ಮಂಜುನಾಥ್‌ ಕಾಡಜ್ಜಿ, ಬಿಟಿವಿ ವರದಿಗಾರ ಎಚ್‌.ಎಂ.ರಾಜಶೇಖರ್‌, ಮಲ್ನಾಡು ವಾಣಿ ವರದಿಗಾರ ಐ. ಗುರುಶಾಂತಪ್ಪ ಹಾಗೂ ಪಬ್ಲಿಕ್‌ ಟಿವಿ ಕ್ಯಾಮೆರಾಮ್ಯಾನ್‌ ಎಚ್‌.ಟಿ.ಪರಶರಾಮ್‌ಗೆ 2018ನೇ ಸಾಲಿನ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೂಟದ ಖಜಾಂಚಿ ಎ.ಎಲ್‌. ತಾರಾನಾಥ್‌ ಅವರಿಂದ ಹಳೆಯ ಕ್ಯಾಮೆರಾಗಳ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next