Advertisement

ಕನ್ನಡಿಗರು ಮಹಾರಾಷ್ಟ್ರ, ತ.ನಾಡು ನೋಡಿ ಪಾಠ ಕಲಿಯಲಿ

07:16 AM Jan 15, 2019 | |

ಮೈಸೂರು: ಭಾರತದ ಪ್ರತಿಭೆಯ ಕಣ್ಣು ಸಂಗೀತ. ಜಗತ್ತಿನಲ್ಲಿ ಭಾರತ ಮಿಂಚುವುದು ಕಲೆ, ಸಂಗೀತ, ನೃತ್ಯದಿಂದ. ಆದರೆ, ನಮ್ಮಲ್ಲಿ ಐಐಟಿ, ಐಐಎಂ ಪಠ್ಯಕ್ರಮಕ್ಕೆ ಸಿಗುವ ಪ್ರೋತ್ಸಾಹ ಸಂಗೀತಕ್ಕೆ ಸಿಗುತ್ತಿಲ್ಲ ಎಂದು ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ವಿಷಾದಿಸಿದರು. ಕಲಾಮಂದಿರದ ಕಿಂದರಿಜೋಗಿ ಆವರಣದಲ್ಲಿ ಸೋಮವಾರ 2018ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

Advertisement

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಆಸ್ಥಾನದಲ್ಲಿ ಸಂಗೀತ ಕಲಾವಿದರಿಗೆ ಗೌರವ ಧನ ನೀಡಿ ಪ್ರೋತ್ಸಾಹಿಸುತ್ತಿದ್ದರಿಂದ ಮೈಸೂರು ಕಲೆಗಳ ಬೀಡಾಯಿತು. ಆದರೀಗ ಮೈಸೂರಿನ ಜನತೆಗೆ ಸಂಗೀತದ ನೆನಪು ಹಾರಿ ಹೋಗುತ್ತಿದೆ.

ಹುಬ್ಬಳ್ಳಿ – ಧಾರವಾಡದವರು ಕಲಿಯುವ ಸಂಗೀತವನ್ನು ಮೈಸೂರಿನವರು ಯಾಕೆ ಕಲಿಯುತ್ತಿಲ್ಲ ಎಂಬುದು ದುಃಖದ ವಿಷಯ. ಮಹಾರಾಷ್ಟ್ರ, ತಮಿಳುನಾಡಿನ ಜನತೆ ಅಲ್ಲಿನ ಸಂಗೀತಗಾರರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕನ್ನಡಿಗರು ನೋಡಿ ಕಲಿಯಬೇಕು. ಕಲಾವಿದರಿಗೆ 500 ರೂ. ಕೊಟ್ಟರೆ ಸಾಕು ಎಂಬ ಮಾತುಗಳು ಕೇಳಿ ಬರುತ್ತವೆ ಅದಕ್ಕೆ ನಾನೇನು ಹೇಳಲಿ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿನಂದನಾ ನುಡಿಗಳನ್ನಾಡಿದ ನಿವೃತ್ತ ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌, ಪಂಡಿತ್‌ ರಾಜೀವ್‌ ತಾರಾನಾಥ್‌ ಅವರನ್ನು ರಾಜೀನಾಮೆ ರಾಜೀವ ಅಂತಲೂ ಕರೆಯುತ್ತಾರೆ. ಸರೋದ್‌ ವಾದನದಲ್ಲಿ ಪರಿಣಿತಿ ಸಾಧಿಸಲು ಅವರು ಸುಮಾರು 18 ಕೆಲಸಗಳಿಗೆ ರಾಜೀನಾಮೆ ನೀಡಿದ್ದಾರೆ. ಎಂಟು ಭಾಷೆಗಳನ್ನು ಮಾತನಾಡಬಲ್ಲ, ಆಸ್ಟ್ರೇಲಿಯಾದ ಒಪೆರಾ ಹೌಸ್‌ನಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟ ಮೊದಲ ಭಾರತೀಯ ಎಂಬ ಹಿರಿಮೆಗೂ ಅವರು ಭಾಜನರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪ್ರಶಸ್ತಿ ಪ್ರದಾನ ಮಾಡಿದರು. ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌. ಚನ್ನಪ್ಪ ಹಾಜರಿದ್ದರು.

Advertisement

ದಸರಾ ವೇಳೆ ವಿದೇಶ ಪ್ರವಾಸ: ಪ್ರತಿವರ್ಷ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದ ದಿನ ಅರಮನೆ ಮುಂಭಾಗದ ವೇದಿಕೆಯಲ್ಲಿ ಖ್ಯಾತ ಸಂಗೀತಗಾರರಿಗೆ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡುವುದು ವಾಡಿಕೆ. ಈ ಬಾರಿ ಸರ್ಕಾರ ಮೈಸೂರಿನವರೇ ಆದ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರನ್ನು ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆದರೆ, ದಸರಾ ಸಂದರ್ಭದಲ್ಲಿ ರಾಜೀವ್‌ ತಾರಾನಾಥ್‌ ಅವರು ವಿದೇಶ ಪ್ರವಾಸದಲ್ಲಿದ್ದುದರಿಂದ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ.

86ರಲ್ಲೂ ಸತತ 8 ಗಂಟೆ ಸರೋದ್‌ ನುಡಿಸಬಲ್ಲೆ: ನನ್ನ ಗುರು ಅಲಿ ಅಕರ್‌ ಖಾನ್‌ ಮತ್ತು ನನ್ನ ತಂದೆ ನನ್ನ ದೇವರು, ನನ್ನ ಬೆರಳುಗಳೇ ನನ್ನ ಸಂಗೀತ. ಖಾನ್‌ ಕಲಿಸಿಕೊಟ್ಟ ಸರೋದ್‌ ನುಡಿಸುವಾಗ ನನ್ನನ್ನೇ ನಾನು ಮರೆಯುತ್ತೇನೆ. ನನ್ನ 86ನೇ ವಯಸ್ಸಿನಲ್ಲೂ ಎರಡು ವಿರಾಮ ನೀಡಿದರೆ ಸತತ ಎಂಟು ಗಂಟೆಗಳ ಕಾಲ ಸರೋದ್‌ ನುಡಿಸಬಲ್ಲೆ. ರಾತ್ರಿ ಆರಂಭಿಸಿದರೆ ಬೆಳಗಿನ ತನಕ ನುಡಿಸಬಲ್ಲೆ. ಮಲಗಿರುವವರನ್ನು ಎಬ್ಬಿಸಬಲ್ಲೆ ಎಂದು ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next