ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್)ನ ಚುನಾವಣ ಪ್ರಕ್ರಿಯೆ ಮುಗಿದಿದ್ದು, ಮಾಜಿ ಆಟಗಾರ ಕಲ್ಯಾಣ್ ಚೌಬೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಎಐಎಫ್ಎಫ್ ಗೆ ಫುಟ್ಬಾಲ್ ಆಟಗಾರರೊಬ್ಬರು ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಉಪಾಧ್ಯಕ್ಷ ಸ್ಥಾನ ಕರ್ನಾಟಕದ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಅವರಿಗೆ ಒಲಿದಿದೆ. ಕಿಪಾ ಅಜಯ್ ಅವರು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಬಹು ಹಿಂದಿನಿಂದಲೂ ಭಾರತದ ಕ್ರೀಡಾ ಸಂಸ್ಥೆಗಳು ರಾಜಕಾರಣಿಗಳ ಹಿಡಿತದಿಂದ ಹೊರಗಿರಬೇಕು ಎಂಬ ಆಗ್ರಹಗಳು ಕೇಳಿಬರುತ್ತಲೇ ಇವೆ. ಆದರೂ ಈ ನಿಟ್ಟಿನಲ್ಲಿ ಯಶ ಕಾಣಲಾಗಿಲ್ಲ. ಈ ಹಿಂದೆ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ರಾಜಕಾರಣಿಗಳ ಹಿಡಿತದಲ್ಲೇ ಇತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಕೆಲವು ನಿಯಮಗಳನ್ನು ಜಾರಿ ಮಾಡಿತ್ತು. ಆ ಬಳಿಕ ರಾಜಕಾರಣಿಗಳ ಪ್ರಾತಿನಿಧ್ಯ ಕೊಂಚ ಕಡಿಮೆಯಾಗಿದೆ. ಹಾಗೆಂದು ರಾಜಕಾರಣಿಗಳ ಮಧ್ಯಸ್ಥಿಕೆ ಸಂಪೂರ್ಣವಾಗಿ ಹೋಗಿಲ್ಲ.
ಎಐಎಫ್ಎಫ್ ವಿಚಾರದಲ್ಲಿಯೂ ಹಾಗೆಯೇ ಆಗಿದೆ. ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ಈ ಹಿಂದೆ ಎಐಎಫ್ಎಫ್ ನ ಅಧ್ಯಕ್ಷ ರಾಗಿದ್ದರು. ಅಲ್ಲದೆ ಅಧಿಕಾರಾವಧಿ ಮುಗಿದಿದ್ದರೂ ಕೊರೊನಾ ಕಾರಣ ದಿಂದ ಚುನಾವಣೆಯನ್ನೂ ನಡೆಸಿರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಮೂವರು ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದ್ದರಿಂದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯು ಅಖೀಲ ಭಾರತ ಫುಟ್ಬಾಲ್ ಫೆಡರೇಶನ್‌ನ ಮಾನ್ಯತೆಯನ್ನೇ ರದ್ದು ಮಾಡಿತ್ತು. ಈ ಬೆಳವಣಿಗೆಗಳು ಆದ ಮೇಲೆ ಚುನಾವಣೆ ನಡೆದು ಹೊಸ ಅಧ್ಯಕ್ಷರು ಸೇರಿ ದಂತೆ ಇಡೀ ಆಡಳಿತ ಮಂಡಳಿ ಆಯ್ಕೆಯಾಗಿದೆ. ಅತ್ತ ಫಿಫಾ ಕೂಡ ಎಐಎಫ್ಎಫ್ ಮೇಲೆ ಹೇರಿದ್ದ ನಿಷೇಧವನ್ನು ವಾಪಸ್ ಪಡೆದಿದೆ.
ಈಗ ಹೊಸದಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಯ ಮೇಲೆ ದೊಡ್ಡ ಭಾರವೇ ಇದೆ. ಸದ್ಯದಲ್ಲೇ ಭಾರತ ಅಂಡರ್ 19 ಯುವತಿಯರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಫುಟ್ಬಾಲ್ ವರ್ಲ್ಡ್ ಕಪ್‌ನಂಥ ದೊಡ್ಡ ಮಟ್ಟದ ಪಂದ್ಯಾವಳಿ ಆಯೋಜನೆಗೆ ಇದು ಒಂದು ಮೆಟ್ಟಿಲಾಗಬಹುದು. ಅಂದರೆ ಈಗ ಅತ್ಯಂತ ಗಂಭೀರವಾಗಿ ಕೆಲಸ ಮಾಡಿ ಇಡೀ ಪಂದ್ಯಾವಳಿಯ ಯಶಸ್ಸಿಗೆ ಪಣ ತೊಡಬೇಕು. ಸದ್ಯ ಆಯ್ಕೆಯಾಗಿರುವ ಕಲ್ಯಾಣ್ ಚೌಬೆ ಬಿಜೆಪಿ ನಾಯಕ. ಉಪಾಧ್ಯಕ್ಷ ಎನ್.ಎ. ಹ್ಯಾರಿಸ್ ಕಾಂಗ್ರೆಸ್ ಶಾಸಕ. ಚೌಬೆ ಅವರು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದಿದ್ದರೂ ಮೋಹನ್ ಬಗಾನ್ ಪರವಾಗಿ ಆಡಿದ ಅನುಭವವಿದೆ. ಅಲ್ಲದೆ ಇದೇ ತಂಡದ ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಹೀಗಾಗಿ ಅಧ್ಯಕ್ಷರಾಗಿರುವ ಕಲ್ಯಾಣ್ ಚೌಬೆ ಅವರು ಎಲ್ಲ ರಾಜಕೀಯ ವನ್ನು ಬದಿಗೊತ್ತಿ ಕೇವಲ ತಂಡದ ಹಿತಕ್ಕಾಗಿ ಕೆಲಸ ಮಾಡಬೇಕು. ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಆಸ್ಥೆ ಬೇರೆ ಕ್ರೀಡೆಗಳ ಮೇಲಿಲ್ಲ. ಸಾಧ್ಯವಾದಷ್ಟು ಹೆಚ್ಚು ಯುವಕರನ್ನು ಇತ್ತ ಸೆಳೆಯಲು ಪ್ರಯತ್ನಿಸಬೇಕು. ಭಾರತ ಫುಟ್ಬಾಲ್ ತಂಡವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂಥ ಸಾಮರ್ಥ್ಯ ಬೆಳೆಸಿ ಕೊಳ್ಳಬೇಕು. ಈ ಎಲ್ಲ ಜವಾಬ್ದಾರಿಗಳು ಹೊಸ ಆಡಳಿತ ಮಂಡಳಿಯ ಮೇಲಿವೆ. ಜತೆಗೆ ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿ ಕೊಡದೆ ಕ್ರೀಡಾಸಂಸ್ಥೆಯನ್ನು ಬೆಳೆಸಲಿ ಎಂಬುದೇ ಎಲ್ಲರ ಆಶಯ.