Advertisement

ಕೆ-ಸೆಟ್‌ ಅಕ್ರಮ ಸಂಬಂಧ ಪಾರದರ್ಶಕವಾಗಿ ತನಿಖೆಯಾಗಲಿ

01:22 AM Dec 27, 2022 | Team Udayavani |

ಇತ್ತೀಚಿನ ದಿನಗಳಲ್ಲಿ ಕರ್ನಾಟಕವು ಪರೀಕ್ಷಾ ಅಕ್ರಮಗಳಿಂದಲೇ ಹೆಚ್ಚು ಕುಖ್ಯಾತಿಗೆ ಒಳಗಾಗುತ್ತಿದೆ. ಪೊಲೀಸ್‌ ನೇಮಕಾತಿ, ಪ್ರಾಧ್ಯಾಪಕರ ನೇಮಕಾತಿ ಸಹಿತ ಹಲವಾರು ಪರೀಕ್ಷಾ ಅಕ್ರಮಗಳು ನಡೆದಿದ್ದು, ದೇಶದ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಈಗ ಈ ಸಾಲಿಗೆ ಉಪನ್ಯಾಸಕರ ಅರ್ಹತೆಗಾಗಿ ಇಲ್ಲೇ ನಡೆಸುವ ಕೆ-ಸೆಟ್‌ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವ ವಾಸನೆ ವ್ಯಕ್ತವಾಗಿದ್ದು, ಈ ಸಂಬಂಧ ತನಿಖೆಗಾಗಿ ರಾಜ್ಯ ಸರಕಾರ ಸಮಿತಿಯೊಂದನ್ನೂ ನೇಮಕ ಮಾಡಿದೆ.

Advertisement

ಮೇಲಿನ ಎಲ್ಲ ವಿಚಾರಗಳನ್ನು ಗಮನಿಸಿದರೆ, ಒಂದು ನೇಮಕಾತಿಯ ವೇಳೆಯ ಬೆಳವಣಿಗೆಗಳು ಮತ್ತು ಅರ್ಹತಾ ಪರೀಕ್ಷೆ ವೇಳೆಯ ಪ್ರಕ್ರಿಯೆಗಳು ಹಣ ಮಾಡಿಕೊಳ್ಳಲು ಅತ್ಯುತ್ತಮ ವೇದಿಕೆಯಂತೆ ಕಂಡು ಬಂದಿವೆ. ಅದರಲ್ಲೂ ಪೊಲೀಸ್‌ ಮತ್ತು ಪ್ರಾಧ್ಯಾಪಕರ ನೇಮಕಾತಿ ವೇಳೆಯಲ್ಲಿ ಲಕ್ಷ ಲಕ್ಷ ಹಣ ಹರಿದಾಡಿರುವುದೂ ಎಲ್ಲರ ಗಮನಕ್ಕೆ ಬಂದಿದೆ. ಇದು ಒಂದು ರೀತಿಯಲ್ಲಿ ಶ್ರಮದಿಂದ ಓದಿ ನೇಮಕವಾಗಬೇಕು ಎಂದುಕೊಂಡವರಿಗೆ ಮೋಸ ಮಾಡಿದಂತಾಗಿದೆ.

ಕೆ-ಸೆಟ್‌ ವಿಚಾರಕ್ಕೆ ಬರುವುದಾದರೆ ಇದೊಂದು ಉಪನ್ಯಾಸಕರಾಗಲು ರಾಜ್ಯಮಟ್ಟದಲ್ಲಿ ನಡೆಯುವ ಅರ್ಹತಾ ಪರೀಕ್ಷೆ. ಅದಷ್ಟೋ ವಿದ್ಯಾರ್ಥಿಗಳು ಕ್ಲಿಷ್ಟವಾದ ನೆಟ್‌ ಪರೀಕ್ಷೆ ಪಾಸು ಮಾಡಲಾಗದೇ ಕೆ-ಸೆಟ್‌ ಪಾಸು ಮಾಡಿಕೊಂಡು ಉಪನ್ಯಾಸಕರಾಗಲು ಅರ್ಹತೆ ಗಳಿಸಿಕೊಳ್ಳುತ್ತಾರೆ. ಆದರೆ 2021ರ ಸಾಲಿನಲ್ಲಿ ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರೇ ಆರೋಪ ಮಾಡಿದ್ದು, ಈ ಸಂಬಂಧ ಯುಜಿಸಿ ಚೇರ್‌ಮನ್‌ ಜಗದೀಶ್‌ ಕುಮಾರ್‌ ಅವರಿಗೇ ದೂರು ನೀಡಿದ್ದಾರೆ. ಅಲ್ಲದೆ ಇವರ ಮನವಿ ಮೇರೆಗೆ ಇತ್ತೀಚೆಗಷ್ಟೇ ರಾಜ್ಯ ಸರಕಾರ ಕೆ-ಸೆಟ್‌ ನಡೆಸುವ ಹೊಣೆಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿದೆ.

ಈ ಬೆಳವಣಿಗೆ ಒಂದು ರೀತಿಯಲ್ಲಿ ಗತಕಾಲದ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇಟ್ಟ ಕಪ್ಪು ಚುಕ್ಕೆಯಂತಾಗಿದೆ. ಖಂಡಿತವಾಗಿಯೂ ಹೇಳುವುದಾದರೆ ರಾಜ್ಯ ಸರಕಾರ ಪಾರದರ್ಶಕವಾಗಿ ತನಿಖೆ ನಡೆಸಿ, ಆರೋಪಿಗಳು ಅದೆಷ್ಟೇ ದೊಡ್ಡವರಾಗಿದ್ದರೂ ಸರಿ ಅವರಿಗೆ ಶಿಕ್ಷೆ ಕೊಡಿಸಲೇಬೇಕಾಗಿದೆ. ಇಲ್ಲದಿದ್ದರೆ ವಿದ್ಯಾರ್ಥಿ ಸಮೂಹ ಇಂಥ ಆಯ್ಕೆ ಅಥವಾ ಅರ್ಹತಾ ಪರೀಕ್ಷೆಗಳ ವಿಚಾರದಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಕೆ-ಸೆಟ್‌ ಅನ್ನೂ ಯುಜಿಸಿಯ ಅಡಿಯಲ್ಲೇ ನಡೆಸಲಾಗುತ್ತಿದ್ದು, 2020ರಿಂದ ವರ್ಷಕ್ಕೆ ಒಮ್ಮೆಯಂತೆ ಮೂರು ಬಾರಿ ಪರೀಕ್ಷೆ ನಡೆಸುವ ಹೊಣೆಯನ್ನು ಮೈಸೂರು ವಿ.ವಿ.ಗೆ ನೀಡಲಾಗಿದೆ. ಒಟ್ಟು 41 ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. 2021ರಲ್ಲಿ ನಡೆದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಮೋಸವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಅವ್ಯವಹಾರಕ್ಕೆ ಸಂಯೋಜಕರು ಮತ್ತು ಇತರ ಸಿಬಂದಿ ಹೊಣೆಗಾರರು ಎಂದೂ ಯುಜಿಸಿಗೆ ದೂರು ಹೋಗಿದೆ.

Advertisement

ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾದ ಈ  ಸಮೂಹವೇ ಅಕ್ರಮದಲ್ಲಿ ಪಾಲ್ಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸ ಮಾಡುವುದು ಸರ್ವಥಾ ಒಪ್ಪುವಂಥದ್ದಲ್ಲ. ಈ ಪ್ರಕರಣಗಳನ್ನು ಸರಕಾರ ಘನಘೋರ ಅಪರಾಧವೆಂದೇ ಪರಿಗಣಿಸಬೇಕು. ಅಷ್ಟೇ ಅಲ್ಲದೆ ಸಿಬಂದಿಗೆ ಶಿಕ್ಷೆ ನೀಡುವುದರ ಜತೆಗೆ ಅಡ್ಡದಾರಿಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವಂಥ ವಿದ್ಯಾರ್ಥಿಗಳ ಮೇಲೂ ಕಠಿನ ಕ್ರಮ ತೆಗೆದುಕೊಳ್ಳಬೇಕಾದದ್ದು ಅಷ್ಟೇ ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next