ಹುಣಸೂರು: ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಗುರಿ ಇಟ್ಟುಕೊಳ್ಳಬೇಕು. ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಮೈಸೂರು ಮಹಾರಾಣಿ ಕಾಲೇಜಿನ ಭೂಗೋಳ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಎನ್.ಹೇಮಚಂದ್ರ ಸಲಹೆ ನೀಡಿದರು.
ತಾಲೂಕಿನ ಮರದೂರು ಲಾಸಲೆಟ್ ವಿದ್ಯಾನಿಕೇತನ ಸಂಸ್ಥೆಯಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಮಾಣಪತ್ರ ವಿತರಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಮಹೋನ್ನತ ನಾಗರಿಕ ಸೇವೆಯ ಹುದ್ದೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಹಾಗೂ ಮಾಹಿತಿ ಕೊರತೆ ಇದೆ.
ಇತ್ತೀಚೆಗೆ ಮನೊಗೊಬ್ಬ ಎಂಜಿನಿಯರ್, ಬೀದಿಗೊಬ್ಬ ಡಾಕ್ಟರ್ ಇರುವುದು ಸಾಮಾನ್ಯವಾಗಿದೆ. ಆದರೆ ತಾಲೂಕಿಗೊಬ್ಬ ಐಎಎಸ್, ಐಪಿಎಸ್, ಐಎಫ್‌ಎಸ್ ಹುದ್ದೆ ಪಡೆಯುತ್ತಿಲ್ಲ. ವಿದ್ಯಾರ್ಥಿಗಳು ನಾಗರೀಕ ಸೇವೆ ಪರೀಕ್ಷೆ ಬರೆದು ಅತ್ಯುನ್ನತ ಸ್ಥಾನ ಪಡೆದು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ವಿದ್ಯಾರ್ಥಿಗಳಲ್ಲಿ ಸೃಜನಶಿಲತೆ ಕಡಿಮೆಯಾಗಿ, ಸ್ವಂತಿಕೆ ಇಲ್ಲವಾಗಿ ವಿದ್ಯಾರ್ಜನೆ ಶಕ್ತಿ ಕುಂಠಿತವಾಗುತ್ತಿದೆ ಎಂದು ವಿಷಾದಿಸಿದ ಡಾ. ಪಿ.ಎನ್.ಹೇಮಚಂದ್ರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿ ಮಾಡಿದಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಥೆ ನಿರ್ದೇಶಕ ಫಾ.ಜೋಬಿಟ್ ತೊಟ್ಟುಮಕರ, ಪ್ರಾಂತ್ಯಾಧಿಕಾರಿ ಫಾ.ಸಜೀವ್, ಪ್ರಾಚಾರ್ಯ ರವಿ ವಿ.ದೀಪಕ್, ಮುಖ್ಯಶಿಕ್ಷಕಿ ಸಿಸ್ಟರ್ ಕರುಣಾ ಇತರರಿದ್ದರು.