Advertisement

ಮನೆ ಆ್ಯಂಗಲ್‌ ಹೀಗಿರಲಿ

12:48 PM Jun 04, 2019 | Suhan S |

ಮನೆ ಕಟ್ಟುವಾಗ ಪ್ರತಿಯೊಂದು ಕೆಲಸವು ಹಂತಹಂತವಾಗಿ ಸಾಗಬೇಕಾಗುತ್ತದೆ. ಒಂದೆರಡು ಲಿಂಟಲ್‌ಗ‌ಳು ನಿಂತರೂ ಗೋಡೆಗಳನ್ನು ಸೂರಿನ ಮಟ್ಟಕ್ಕೆ ಕಟ್ಟಲು ಆಗದೆ ಕೆಲಸ ನಿಲ್ಲಬಹುದು. ಹೀಗಾಗುವುದನ್ನು ತಡೆಯಲು ನಾವು “ದಿಢೀರ್‌ ಲಿಂಟಲ್‌’ ಗಳನ್ನು ತಯಾರು ಮಾಡಿಕೊಂಡು, ಕೆಲಸ ಸುಸೂತ್ರವಾಗಿ ನಡೆಯುವಂತೆ ಮಾಡಬಹುದು.

Advertisement

ಉಕ್ಕು ಕಾಂಕ್ರಿಟ್‌ಗಿಂತ ಸುಮಾರು ಮೂವತ್ತು ಪಟ್ಟು ಬಲಶಾಲಿಯಾಗಿರುತ್ತದೆ. ಅಂದರೆ, ಮೂವತ್ತು ಇಂಚು ದಪ್ಪದ ಕಾಂಕ್ರಿಟ್‌ ಬೇಕಾಗಿರುವ ಸ್ಥಳದಲ್ಲಿ ಕೇವಲ ಒಂದು ಇಂಚು ದಪ್ಪದ ಸ್ಟೀಲ್‌ ಆ್ಯಂಗಲ್‌ ಸಾಕಾಗಬಹುದು. ಆದರೆ, ಉಕ್ಕು ಕಾಂಕ್ರಿಟ್‌ಗಿಂತ ದುಬಾರಿ ಎಂಬ ಕಾರಣಕ್ಕೆ ನಮ್ಮಲ್ಲಿ ಈ ಹಿಂದೆ ಸ್ಟೀಲ್‌ ಆ್ಯಂಗಲ್‌ ಹಾಗೂ ಇತರೆ ಆಕಾರಗಳ ಬಳಕೆ ಕಡಿಮೆ ಇತ್ತು. ಇತ್ತೀಚಿನ ದಿನಗಳಲ್ಲಿ ಉಕ್ಕಿನ ಬೆಲೆ ಹೆಚ್ಚಿಗೆ ಆಗದಿದ್ದರೂ ಕಾಂಕ್ರಿಟ್‌ ಹಾಗೂ ಅದಕ್ಕೆ ಬಳಸಲಾಗುವ ಮರಳು, ಕೂಲಿ, ಸಿಮೆಂಟ್‌ ಬೆಲೆ ದುಬಾರಿ ಆಗುತ್ತಿರುವುದರಿಂದ, ಸ್ಟೀಲ್‌ ಸೆಕ್ಷನ್‌ – ಆಕಾರಗಳ ಬಳಕೆ ಮನೆ ಕಟ್ಟುವಿಕೆಯಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ. ಕಾಂಕ್ರಿಟ್‌ ತಯಾರಾದಾಗ ನೀರಿನಂತೆ ಹರಿಯುವುದರಿಂದ ಅದನ್ನು ಬೇಕಾದ ಆಕಾರಕ್ಕೆ ತರಲು ಸೆಂಟ್ರಿಂಗ್‌/ಮೌಲ್ಡ್‌ ಬೇಕಾಗುತ್ತದೆ. ಜೊತೆಗೆ, ಅದು ದಿಢೀರ್‌ ಎಂದು ಗಟ್ಟಿಗೊಳ್ಳುವುದೂ ಇಲ್ಲ. ಸುಮಾರು ಹತ್ತಾರು ದಿನಗಳ ಕ್ಯೂರಿಂಗ್‌ ಬಳಿಕವಷ್ಟೇ ಅದು ಕಲ್ಲಿನಂತೆ ಗಟ್ಟಿ ಆಗುವುದು. ಆದರೆ, ಸ್ಟೀಲ್‌ ತಯಾರಾದ ಕೂಡಲೆ ಗಟ್ಟಿಮುಟ್ಟಾಗಿಯೇ ಇರುವುದರಿಂದ, ಅದರ ಬಳಕೆಯನ್ನು ತಕ್ಷಣವೇ ಮಾಡಲು ಸಾಧ್ಯವಾಗುತ್ತದೆ. ನಾನಾ ಕಾರಣಗಳಿಗಾಗಿ ಉಕ್ಕಿನ ವಿವಿಧ ಆಕಾರಗಳ ಸೆಕ್ಷನ್‌ಗಳನ್ನು, ಸ್ವಲ್ಪ ದುಬಾರಿ ಎಂದೆನಿಸಿದರೂ ದಿಢೀರ್‌ ಎಂದು ಒಂದೆರಡು ಹಂತಗಳನ್ನಾದರೂ ದಾಟಿ, ಮನೆ ಕಟ್ಟುವಿಕೆಯನ್ನು ಶೀಘ್ರಗೊಳಿಸಲು ಬಳಸಲಾಗುತ್ತದೆ.

ಲಿಂಟಲ್‌ ಬದಲು ಆ್ಯಂಗಲ್‌ ಬಳಸಿ
ಮನೆಯನ್ನು ಹಂತ ಹಂತವಾಗಿ ಕಟ್ಟುವಾಗ ಗೋಡೆಗಳು ಸುಮಾರು ಏಳು ಅಡಿ, ಅಂದರೆ ಕಿಟಕಿ ಬಾಗಿಲುಗಳ ಮೇಲುಮಟ್ಟದ ಎತ್ತರ ಬಂದಾಗ, ಅವುಗಳ ಮೇಲೆ ಅಡ್ಡಡ್ಡಲಾಗಿ ಸಣ್ಣ ಬೀಮ್‌ಗಳನ್ನು, ಅಂದರೆ- ಲಿಂಟಲ್‌ ಎಂಬ ಕಾಂಕ್ರಿಟ್‌ ತೊಲೆಗಳನ್ನು ಹಾಕಿ, ಅದರ ಮೇಲೆ ಇಟ್ಟಿಗೆ ಇಲ್ಲವೇ ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳನ್ನು ಕಟ್ಟಲಾಗುತ್ತದೆ. ಎಲ್ಲವೂ ಪೂರ್ವ ನಿಯೋಜಿತದಂತೆಯೇ. ಆದರೆ, ಇಡೀ ಮನೆ ಲಿಂಟಲ್‌ ಮಟ್ಟದ ಸೆಂಟ್ರಿಂಗ್‌ ಬಿಗಿದು, ಕಾಂಕ್ರಿಟ್‌ ಹಾಕಲು ಸೂಕ್ತ ಅಚ್ಚನ್ನು ನಿರ್ಮಿಸಿ ಅದರಲ್ಲಿ ಕಂಬಿಕಟ್ಟಿ, ಒಂದೇ ಬಾರಿಗೆ ಕಾಂಕ್ರಿಟ್‌ ಸುರಿಯಬಹುದು. ಆದರೆ, ಅನೇಕ ಬಾರಿ ನಮಗೆ ಎಲ್ಲ ಲಿಂಟಲ್‌ಗ‌ಳೂ ಒಂದೇ ಮಟ್ಟದಲ್ಲಿ ಬರುವುದಿಲ್ಲ. ಒಂದೇ ಏಟಿಗೆ ಮನೆಯನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ತೊಡಕಾಗಬಹುದು. ಉದಾಹರಣೆಗೆ, ಮೆಟ್ಟಿಲು ಕೋಣೆಯ ಕಿಟಕಿಯ ಮಟ್ಟ, ಇತರೆ ಕಿಟಕಿಗಳ ಮಟ್ಟಕ್ಕಿಂತ ಎತ್ತರ ವಾದರೂ ಇರಬಹುದು ಇಲ್ಲವೇ ಕಡಿಮೆಯೂ ಇರಬಹುದು. ಈ ಒಂದು ಇಲ್ಲವೇ ಎರಡು ಕಿಟಕಿಗಳಿಗೆ ಲಿಂಟಲ್‌ ಸೆಂಟ್ರಿಂಗ್‌ ಹಾಕಲು ಕುಶಲ ಕರ್ಮಿಗಳನ್ನು ಒಪ್ಪಿಸುವುದು ಕಷ್ಟ. ಒಂದೆರಡು ಲಿಂಟಲ್‌ ಕಟ್ಟಲು ದೂರದಿಂದ ಬರುವುದು ಅವರಿಗೆ ಕಷ್ಟ ಆಗುವುದರ ಜೊತೆಗೆ, ಅರ್ಧ ದಿನ ಪ್ರಯಾಣದಲ್ಲೇ ಕಳೆದು ಹೋಗುತ್ತದೆ. ಹಾಗಾಗಿ, ಈ ಕುಶಲ ಕರ್ಮಿಗಳು ಚಿಕ್ಕ ಕೆಲಸ ವರ್ಕ್‌ಔಟ್‌ ಆಗುವುದಿಲ್ಲ’ ಎಂದು ಯೋಚಿಸಿ, “ಈವತ್ತು ಬರುತ್ತೇವೆ- ನಾಳೆ ಬರುತ್ತೇವೆ’ ಎಂದು ಕೆಲಸವನ್ನು ಮುಂದೂಡಲು ಶುರು ಮಾಡುತ್ತಾರೆ.

ಮನೆ ಕಟ್ಟುವಾಗ ಪ್ರತಿಯೊಂದು ಕೆಲಸವು ಹಂತಹಂತವಾಗಿ ಸಾಗಬೇಕಾಗುತ್ತದೆ. ಒಂದೆರಡು ಲಿಂಟಲ್‌ಗ‌ಳು ನಿಂತರೂ ಗೋಡೆಗಳನ್ನು ಸೂರಿನ ಮಟ್ಟಕ್ಕೆ ಕಟ್ಟಲು ಆಗದೆ ಕೆಲಸ ನಿಲ್ಲಬಹುದು. ಹೀಗಾಗುವುದನ್ನು ತಡೆಯಲು ನಾವು “ದಿಢೀರ್‌ ಲಿಂಟಲ್‌’ ಗಳನ್ನು ತಯಾರು ಮಾಡಿಕೊಂಡು, ಕೆಲಸ ಸುಸೂತ್ರವಾಗಿ ನಡೆಯುವಂತೆ ಮಾಡಬಹುದು. ಮೂರು ನಾಲ್ಕು ಅಡಿ ಅಗಲದ ಕಿಟಕಿ ಬಾಗಿಲುಗಳ ಮೇಲೆ ಬರುವ ಸಣ್ಣ ಲಿಂಟಲ್‌ಗ‌ಳನ್ನು ಎರಡು ಇಂಚು ಆ್ಯಂಗಲ್‌ ಬಳಸಿ ಸುಲಭದಲ್ಲಿ ಮಾಡಬಹುದು. ನಮಗೆ ಬೇಕಾಗಿರುವಷ್ಟು ಉದ್ದದ, ಅಂದರೆ-ನಾಲ್ಕು ಅಡಿ ಅಗಲದ ಲಿಂಟಲ್‌ ಬೇಕಿದ್ದರೆ, ಅದು ಎರಡೂ ಕಡೆ ಕೂರಲು ಕಡೇ ಪಕ್ಷ ಒಂಭತ್ತು- ಒಂಭತ್ತು ಇಂಚು ಹೆಚ್ಚುವರಿಯಾಗಿ ಸೇರಿಸಿ, ಸುಮಾರು ಐದೂವರೆ ಅಡಿ ಉದ್ದದ ಆ್ಯಂಗಲ್‌ಗ‌ಳನ್ನು ಉಪಯೋಗಿಸಬೇಕಾಗುತ್ತದೆ. ಇವುಗಳು ಗೋಡೆಯ ಎರಡೂ ಕಡೆ ಕೂರಲು ಹಾಗೂ ಅಂತರ ಕಾಯ್ದುಕೊಳ್ಳಲು ಆರು-ಆರು ಇಂಚು ದೂರದಲ್ಲಿ ಅಡ್ಡ ರಾಡುಗಳನ್ನು ವರ್ಕ್‌ಶಾಪ್‌ನಲ್ಲಿ ವೆಲ್ಡ್‌ ಮಾಡಿಸಿದರೆ ದಿಢೀರ್‌ ಲಿಂಟಲ್‌ ತಯಾರು.

ದಿಢೀರ್‌ ತೊಲೆಗಳ ಅಗತ್ಯ
ಮನೆ ಕಟ್ಟುವಾಗ ಅನಿವಾರ್ಯವಾಗಿ “ಹೀಗಿದ್ದರೆ ಚೆನ್ನಾಗಿತ್ತು- ಹಾಗಿದ್ದರೆ ಚೆನ್ನಾಗಿತ್ತು’ ಎಂದು ಒಂದಷ್ಟು ಬದಲಾವಣೆಗಳು ಆಗುವುದು ಅನಿವಾರ್ಯ. ಕೆಲವೊಮ್ಮೆ, ಐದು ಆರು ಅಡಿ ಉದ್ದದ ಗೋಡೆಗಳನ್ನು ತೆಗೆಯಲು ನಿರ್ಧರಿಸಿದರೆ, ಆಗ ಸೂರಿನ ಕೆಳಗೆ ಒಂದು ಸಣ್ಣ ತೊಲೆ – ಬೀಮ್‌ ಬರುವುದು ಅನಿವಾರ್ಯ ಆಗುತ್ತದೆ. ಒಂದೆರಡು ಲಿಂಟಲ್‌ ಕಟ್ಟಿಸಲು ಹರಸಾಹಸ ಪಡಬೇಕಾಗಿರುವಾಗ ಒಂದೆರಡು ಭೀಮ್‌ ಕಟ್ಟಿಸಲು ಮತ್ತೂ ಹೆಚ್ಚು ಸಾಹಸ ಪಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ನಾವು ದಿಢೀರ್‌ ತೊಲೆಗಳ ಮೊರೆ ಹೋಗಬಹುದು. ಉಕ್ಕಿನ ನಾನಾ ವಿಧದ ಆಕಾರಗಳು – ಇಂಗ್ಲೀಷ್‌ ಎಲ್‌ ಅಕ್ಷರದ ಆಕಾರದಿಂದ ಹಿಡಿದು, ಐ ಸೆಕ್ಷನ್‌, ಟಿ ಸೆಕ್ಷನ್‌, ಎಚ್‌ ಸೆಕ್ಷನ್‌ ಇತ್ಯಾದಿ ಸಿಗುತ್ತದೆ. ಇವುಗಳನ್ನು ಬಳಸಿ ನಾವು ಹತ್ತಾರು ಅಡಿ ಬೀಮ್‌ಗಳನ್ನೂ ಕೂಡ ಸುಲಭದಲ್ಲಿ ತಯಾರು ಮಾಡಿಕೊಳ್ಳಬಹುದು. ಇವುಗಳಿಗೆ ಕ್ಯೂರಿಂಗ್‌ ಟೈಮ್‌ ಇರುವುದಿಲ್ಲ. ಉಕ್ಕಿನ ಭೀಮ್‌ಗಳನ್ನು ಕೂರಿಸಿದ ಮರುದಿನವೇ ಅವುಗಳ ಮೇಲೆ ಭಾರ ಹೇರಬಹುದು. ಆದರೆ, ಈ ಭಾರ ಗೊಡೆಗಳ ಮೇಲೆ ಒಂದೇ ಕಡೆ ಬೀಳದಂತೆ ಸೂಕ್ತ ಪೀಠಗಳನ್ನು ನೀಡಬೇಕಾಗುತ್ತದೆ. ಭಾರ ಆಧರಿಸಿ, ಭೀಮ್‌ ಕೂರಿಸುವ ಮೊದಲು ಒಂದೆರಡು ಅಡಿ ಉದ್ದದ ಅಡ್ಡ ಆಧಾರಗಳನ್ನು ನೀಡಬೇಕಾಗುತ್ತದೆ. ಇವು ಉಕ್ಕಿನ ಪ್ಲೇಟ್‌ ಇಲ್ಲವೆ ಆ್ಯಂಗಲ್‌ ರೂಪದಲ್ಲಿ ಇರಬಹುದು. ಈ ಬೇಸ್‌ ಪ್ಲೇಟ್‌ಗಳು ಉಕ್ಕಿನ ತೊಲೆಗಳಿಂದ ಬರುವ ಭಾರವನ್ನು ಆಧಾರವಾಗಿರುವ ಕೆಳಗಿನ ಗೋಡೆಗಳ ಮೇಲೆ ಸಮವಾಗಿ ಹಂಚಲು ಸಹಾಯಕಾರಿ ಆಗಿರುತ್ತವೆ.

Advertisement

“ಅಗತ್ಯವೇ ಅವಿಷ್ಕಾರದ ತಾಯಿ’ ಎಂದು ಹೇಳುತ್ತಾರೆ. ಕೆಲಸ ನಿಧಾನ ಆದರೆ, ಮನೆ ಕಟ್ಟುವವರಿಗೆ ಒತ್ತಡಗಳು ಶುರುವಾಗುತ್ತವೆ. ಅಂಥ ಸಂದರ್ಭಗಳಲ್ಲಿ ಉಕ್ಕಿನ ಶಕ್ತಿಯನ್ನು ಬಳಸಿಕೊಂಡು ದಿಢೀರ್‌ ಎಂದು ಶೀಘ್ರವಾಗಿ ಮುಂದುವರೆಯುವಂತೆ ಮಾಡಬಹುದು.

ಆ್ಯಂಗಲ್‌ ಲಿಂಟಲ್‌ ಬಳಸುವ ವಿಧಾನ
ಈ ಲಿಂಟಲ್‌ಗ‌ಳೂ ಕೂಡ ಕಾಂಕ್ರಿಟ್‌ನಂತೆಯೇ ಗೋಡೆಯ ಒಂದು ಭಾಗ ಆಗಬೇಕಾಗಿ ಇರುವುದರಿಂದ, ಸಿಮೆಂಟ್‌ ಗಾರೆಯ ಮಿಶ್ರಣದಲ್ಲಿ ಕೂರಿಸಬೇಕು. ಮಾಮೂಲಿ ಇಟ್ಟಿಗೆ ಇಲ್ಲವೇ ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳನ್ನು ಕಟ್ಟಲು ಒಂದು ಪಾಲು ಸಿಮೆಂಟಿಗೆ ಆರು ಪಾಲು ಮರಳನ್ನು ಮಿಶ್ರಣ ಮಾಡಲಾಗುತ್ತದೆ. ಆದರೆ, ಈ ಲಿಂಟಲ್‌, ಉಕ್ಕಿನ ಆ್ಯಂಗಲ್‌ ಹಾಗೂ ಸರಳುಗಳಿಂದ ಮಾಡಿರುವುದರಿಂದ ಆರ್‌ಸಿ ಸಿಗೆ ಹಾಕುವ ಮಿಶ್ರಣ ಅಂದರೆ ಒಂದು ಪಾಲು ಸಿಮೆಂಟಿಗೆ ಎರಡು ಪಾಲು ಮರಳನ್ನು ಹಾಕಿ ತಯಾರಿಸಿದ ಗಾರೆಯನ್ನು ಬಳಸಬೇಕಾಗುತ್ತದೆ. ಈ ಮಿಶ್ರಣಕ್ಕೆ ನೀರುನಿರೋಧಕ ಗುಣ ಇರುವುದರಿಂದ, ಉಕ್ಕು ಸುಲಭದಲ್ಲಿ ತುಕ್ಕು ಹಿಡಿಯುವುದಿಲ್ಲ. ಜೊತೆಗೆ, ಸಾಮಾನ್ಯವಾಗಿ ಉಕ್ಕಿಗೆ ಇಟ್ಟಿಗೆ ನೇರವಾಗಿ ತಗುಲ ಬಾರದು. ಇಟ್ಟಿಗೆಯಲ್ಲಿ ಒಂದಷ್ಟು ನೀರಿನ ಅಂಶ ಇರುವುದರಿಂದ, ಅದರ ನೇರ ಸಂಪರ್ಕ ಬರುವ ಉಕ್ಕಿಗೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಆರ್‌ಸಿಸಿ ಕಾಂಕ್ರಿಟ್‌ನಲ್ಲಿ ಬಳಸುವ ಉಕ್ಕಿನ ಸರಳುಗಳಿಗೆ ಮುಕ್ಕಾಲು ಇಂಚು “ಕವರಿಂಗ್‌’ ಅಂದರೆ ಕಡೇ ಪಕ್ಷ ಮುಕ್ಕಾಲು ಇಂಚಿನಷ್ಟು ದಪ್ಪದ ಕಾಂಕ್ರಿಟ್‌ ಲೇಪನವನ್ನು ನೀಡಬೇಕಾಗುತ್ತದೆ. ಇದೇ ರೀತಿಯಲ್ಲಿ ಆ್ಯಂಗಲ್‌ ಲಿಂಟಲ್‌ಗ‌ಳಿಗೆ ಕವರಿಂಗ್‌ ಕೊಡಲು ಮರೆಯದಿರಿ.

ಹೆಚ್ಚಿನ ಮಾಹಿತಿಗೆ- 98441 32826

ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next