ಖಾನಾಪುರ: ಆರೋಗ್ಯ ಮೇಳದಲ್ಲಿ ಸಾಕಷ್ಟು ಮಳಿಗೆ ಹಾಕಲಾಗಿದ್ದು ಹೊಮಿಯೋಪತಿ, ಆಯುರ್ವೇದ ಮತ್ತು ಯೋಗಾ ಸ್ಟಾಲ್ ಒಳಗೊಂಡಂತೆ 14 ಮಳಿಗೆಗಳಿದ್ದು, ಅಗತ್ಯ ಸೌಲಭ್ಯ, ಮಾಹಿತಿ ಒದಗಿಸಲಾಗಿದೆ ಎಂದು ಶಾಸಕಿ ಡಾ| ಅಂಜಲಿ ನಿಂಬಾಳಕರ ಹೇಳಿದರು.
ಅವರು ಸೋಮವಾರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ, ದಿ| ನಟ ಪುನಿತ್ ನೇತ್ರದಾನ ಸ್ಟಾಲ್ ಕೂಡ ಹಾಕಿದ್ದು ಸಾರ್ವಜನಿಕರು ಆರೋಗ್ಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬೇಕು. ಮನುಷ್ಯ ಸತ್ತ ನಂತರ ದೇಹದಾನ, ಅಂಗಾಂಗ ದಾನ ಮಾಡುವದರ ಮೂಲಕ ಬೇರೆಯವರ ಬದುಕಿಗೆ ಪ್ರಯೋಜನವಾಗಬೇಕು. ಆರೋಗ್ಯ ಖಾತೆ ಬಗ್ಗೆ ನನಗೆ ವಿಶೇಷ ಪ್ರೇಮವಿದ್ದು ನನ್ನ ವೃತ್ತಿ ಕೂಡ ಇದಾಗಿದೆ. ಯಾವುದೇ ಸಮಯಕ್ಕೆ ಕರೆದರೂ ಒಬ್ಬ ವೈದ್ಯೆಯಾಗಿ ಸಹಕಾರ ನೀಡಲು ಸದಾ ಸಿದ್ಧ ಎಂದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಆರೋಗ್ಯ ವಿಷಯದಲ್ಲಿ ಬಹಳ ಮುಖ್ಯವಾಗಿದ್ದು ತಾಲೂಕಿನಲ್ಲಿ ಅವರು ಬಹು ದೊಡ್ಡ ಶಕ್ತಿಯಾಗಿದ್ದಾರೆ. ತಾಲೂಕಿನಲ್ಲಿ ಪತ್ರಿಯೊಬ್ಬರು ಉಚಿತವಾಗಿರುವ ಆರೋಗ್ಯ ಕಾರ್ಡ್ ಮಾಡಿಸುವಲ್ಲಿ ನಿರ್ಲಕ್ಷ ತೋರದೆ ತಕ್ಷಣ ಕಾರ್ಡ್ ಹೊಂದಬೇಕು. ತಮ್ಮ ಆರೋಗ್ಯದ ಹಿಂದಿನ ದಾಖಲೆಗಳು ಕೂಡ ಇದರಲ್ಲಿ ಸಂಗ್ರವಾಗಿರುತ್ತದೆ. ಬಿಪಿಎಲ್ ಕಾರ್ಡ ಹೊಂದಿದವರೆಗೆ 5 ಲಕ್ಷ ರೂ. ಮತ್ತು ಎಪಿಎಲ್ ಕಾರ್ಡ ಹೊಂದಿದವರಿಗೆ 1 ಲಕ್ಷ ರೂ.ವರೆಗೆ ಆರೋಗ್ಯ ಸೌಲಭ್ಯ ಇದೆ. ತಾಲೂಕಿನಲ್ಲಿ ಇಗಾಗಲೆ 60 ಹಾಸಿಗೆ ವ್ಯವಸ್ಥೆ ಇದ್ದು 100 ಹಾಸಿಗೆ ಆಸ್ಪತ್ರೆ ಬರುವುದರಿಂದ 160 ಹಾಸಿಗೆ ವ್ಯವಸ್ಥೆ ಸೌಲಭ್ಯ ಸಿಗಲಿದೆ. ಟಿಎಚ್‌ಒ ಡಾ. ಸಂಜು ನಾಂದ್ರೆ ಅವರ ಪರಿಶ್ರಮ ಸಹಕಾರದಿಂದ ಸಾಕಷ್ಟು ಸುಧಾರಣೆ ಮಾಡಲು ಸಾಧ್ಯವಾಗಿದೆ ಎಂದು ಪ್ರಂಶಸಿದರು.
ತಾಲೂಕಿನಲ್ಲಿ ಕೊರೊನಾ ಹಿಡಿತಕ್ಕೆ ತರುವಲ್ಲಿ ತಾಲೂಕಿನ ವೈದ್ಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸಿದ್ದರಲ್ಲದೆ ಆಕ್ಸಿಜನ್ ವಿತರಣೆ ಸಹಿತ ಸಮರ್ಪಕವಾಗಿ ನಿರ್ವಹಿಸಿದ್ದರಿಂದ ಸಾವು ಸಂಖ್ಯೆಗಳು ಅತ್ಯಂತ ಕಡಿಮೆಯಾಗಿತ್ತು. ಕೊವಿಡ್ ಸಂದರ್ಭದಲ್ಲಿ ನಿಧನ ಹೊಂದಿದ 10 ಜನರಿಗೆ ಮಾತ್ರ ಸರ್ಕಾರದ ಅನುದಾನ ದೊರಕಿದ್ದು, ಇನ್ನೂ 50 ಜನ ಪರಿಹಾರಕ್ಕಾಗಿ ದುಂಬಾಲು ಬಿದ್ದಿದ್ದಾರೆ. ನೆರೆ ಹಾವಳಿಯಲ್ಲಿ ಮನೆ ಕಳೆದು ಕೊಂಡವರಿಗೆ 5 ಲಕ್ಷ ರೂಪಾಯಿ ಮತ್ತು 1 ಲಕ್ಷ ರೂ. ಘೋಷಿಸಿದ್ದರು. ಜನರಿಗೆ ಇನ್ನೂ ಅನುದಾನವೇ ಸಿಕ್ಕಿಲ್ಲ ಎಂದು ಟೀಕಿಸಿದರು. ಶಾಸಕರು ಫಲಾನುಭವಿಗಳಿಗೆ ಎಬಿಎಆರ್‌ಕೆ ಕಾರ್ಡ್ ವಿತರಣೆ, ಮಕ್ಕಳಿಗೆ ಕಿಟ್ ವಿತರಣೆ, ಐಎಸಿ ಸಾಮಗ್ರಿ ವಿತರಿಸಿದರು. ಮೇಳದಲ್ಲಿ ಆರೋಗ್ಯ ಚಿಕಿತ್ಸೆ 2216 ಜನ, ಆರೋಗ್ಯ ಕಾರ್ಡ 3212,ಎಬಿಆರ್‌ಕೆ 800 ಜನರು ಪಡೆದು ಕೊಂಡರು. 101 ಜನರು ನೇತ್ರದಾನ ವಾಗ್ಧಾನ ಮಾಡಿದರು.
ಮೇಳದಲ್ಲಿ ಟಿಎಚ್‌ಒ ಡಾ|ಸಂಜು ನಾಂದ್ರೆ, ಹಲಸಿ ವೈದ್ಯಾಧಿಕಾರಿ, ಡಾ| ಮಂಜುನಾಥ ದಳವಾಯಿ,ಡಾ| ಸಂಜಯ್ ಡುಮ್ಮಗೊಳ,ಡಾ| ಪ್ರಭು ಬಿರಾದರ, ಡಾ| ಎಸ್.ವಿ.ಮನ್ಯಾಳ,ಡಸ| ಪವನ ಪೂಜಾರ, ಡಾ.|ಈಶ್ವರ ಗಡಾದ, ಪಪಂ ಸದಸ್ಯೆ ಮೇಘಾ ಕುಂದರಗಿ ಮುಂತಾದವರು ಉಪಸ್ಥಿತರಿದ್ದರು.