ಬೆಳಗಾವಿ: ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮ ನಿರಂತರ ಪ್ರಕ್ರಿಯೆಯಾಗಿರಬೇಕು. ಕೇವಲ ಮಳೆಗಾಲದ ಸಮಯದಲ್ಲಿ ಮಾಡುವ ಕೆಲಸಕ್ಕೆ ಸೀಮಿತವಾಗಬಾರದು ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಗಿರೀಶ್ ಹೊಸೂರ ಹೇಳಿದರು.
ಜು.1ರಿಂದ ದೇಶಾದ್ಯಂತ ಈ ಜಲಶಕ್ತಿ ಅಭಿಯಾನ ಜಾರಿಯಾಗಿದೆ. ಅಂತರ್ಜಲ ಕೊರತೆ, ನೀರಿನ ಅಭಾವದ ಆಧಾರದ ಮೇಲೆ 1590 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಅಥಣಿ, ಸವದತ್ತಿ ಹಾಗೂ ರಾಮದುರ್ಗ ಬ್ಲಾಕ್‌ಗಳನ್ನು ಇದರಲ್ಲಿ ಆಯ್ಕೆ ಮಾಡಲಾಗಿದೆ. ಈ ಮೂರೂ ಬ್ಲಾಕ್‌ಗಳಲ್ಲಿ ಜಲಶಕ್ತಿ ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಅವರು ಹೇಳಿದರು.
ಅಭಿಯಾನದ ಅನುಷ್ಠಾನಕ್ಕಾಗಿ ಜಿಲ್ಲೆಗೆ ಕೇಂದ್ರ ಸರ್ಕಾರ ನಿಯೋಜಿಸಿರುವ ಮೂವರು ಅಧಿಕಾರಿಗಳ ತಂಡವು ಇದರ ನೇತೃತ್ವ ವಹಿಸಲಿದೆ. ಜಲಶಕ್ತಿ ಸಚಿವಾಲಯದ ನೇತೃತ್ವದಲ್ಲಿ ಏಳು ಸಚಿವಾಲಯಗಳ ಸಹಭಾಗಿತ್ವದಲ್ಲಿ ಅಭಿಯಾನ ನಡೆಯಲಿದೆ. ನರೇಗಾ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಲಸಂರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ಥಳೀಯವಾಗಿ ಉತ್ತಮ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಭಿಯಾನದ ಯಶಸ್ಸಿಗೆ ಶ್ರಮಿಸಲಾಗುವುದು. ಈ ಅಭಿಯಾನದ ಅನುಷ್ಠಾನದ ಪ್ರತಿ ಹಂತವನ್ನು ರಾಷ್ಟ್ರಮಟ್ಟದಲ್ಲಿಯೇ ನಿಗಾ ವಹಿಸಲಾಗುತ್ತದೆ. ಇದಲ್ಲದೇ ಪ್ರತಿ ಬ್ಲಾಕ್‌ಗಳಲ್ಲಿನ ಸಾಧನೆಯನ್ನು ಗುರುತಿಸಿ, ಪುರಸ್ಕರಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದರು.
Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗುರುತಿಸಲಾಗಿರುವ ಮೂರು ಬ್ಲಾಕ್‌ಗಳಲ್ಲಿ ಜಲಸಂರಕ್ಷಣೆ, ಮಳೆನೀರು ಕೊಯ್ಲು, ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ ಮತ್ತು ನದಿಗಳನ್ನು ರಕ್ಷಿಸುವುದು, ಜಲಮರುಪೂರಣ ಮತ್ತು ನೀರು ಮರುಬಳಕೆ ಮತ್ತು ಅರಣ್ಯೀಕರಣ ಜಲಶಕ್ತಿ ಅಭಿಯಾನದ ಪ್ರಮುಖ ಆದ್ಯತೆಯಾಗಿದೆ ಎಂದರು.
Related Articles
Advertisement
ಡಿಸಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ನೀರಿನ ಅತಿಯಾದ ಬಳಕೆ, ಕುಡಿಯುವ ನೀರಿನ ಕೊರತೆ ಹಾಗೂ ಜಲಮೂಲಗಳ ನಾಶದಿಂದ ತಲಾವಾರು ನೀರಿನ ಲಭ್ಯತೆ ಅತ್ಯಂತ ಕಡಿಮೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದೊಮ್ಮೆ ಕುಡಿಯುವ ನೀರು, ಬೆಳೆಗಳಿಗೆ ನೀರಿನ ಕೊರತೆ ಮತ್ತು ಪರಿಸರ ನಾಶ ಆಗಬಹುದು. ಇದಕ್ಕೇ ಈಗಲೇ ಜಾಗೃತಗೊಳ್ಳುವುದು ಅಗತ್ಯವಾಗಿದೆ ಎಂದರು.
ಜಲಸಂರಕ್ಷಣೆ ನಿಟ್ಟಿನಲ್ಲಿ ಪ್ರತಿ ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ಸಿಸಿ ನೀಡುವಾಗ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿರುವ ಬಗ್ಗೆ ಪರಿಶೀಲಿಸಬೇಕು. ಕಟ್ಟಡ ಪರವಾನಗಿ ನೀಡುವುದಕ್ಕೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಬೈಲಾದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದ 53 ತಾಲೂಕುಗಳಲ್ಲಿ ಜಲಮೂಲ ಕ್ಷೀಣವಾಗಿದೆ. ಅದನ್ನು ಪಾರಂಪರಿಕ ರೀತಿಯಲ್ಲಿ ಪುನಶ್ಚೇತನ ಗೊಳಿಸುವುದು ಅಭಿಯಾನ ಮೂಲ ಉದ್ದೇಶ. ಬೆಳಗಾವಿ ಜಿಲ್ಲೆಯಲ್ಲಿ ಅಥಣಿ, ರಾಮದುರ್ಗ ಹಾಗೂ ಸವದತ್ತಿ ತಾಲೂಕಿನಲ್ಲಿ ಜಲಶಕ್ತಿ ಅಭಿಯಾನ ಅನುಷ್ಠಾನಕ್ಕೆ ಕೇಂದ್ರದ ಮೂವರು ಅಧಿಕಾರಿಗಳ ತಂಡವನ್ನು ಕೇಂದ್ರ ಸರ್ಕಾರವು ನಿಯೋಜಿಸಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಗಿರೀಶ್ ಹೊಸೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರವಿ ಹಾಗೂ ನಾಯ್ಡು ಅವರು ಅಭಿಯಾನದ ನೇತೃತ್ವ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಲಮೂಲಗಳ ಸಂರಕ್ಷಣೆಗಾಗಿ ಜಿಲ್ಲೆಯಲ್ಲಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿ ಹಾಗೂ ನದಿ, ನಾಲಾಗಳ ಪುನಶ್ಚೇತನಕ್ಕೆ ಜಿಲ್ಲಾ ಪಂಚಾಯತ ವತಿಯಿಂದ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ ವಿವರಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಅವರು ಬೆಳಗಾವಿ ಜಿಲ್ಲೆಯ ಮಳೆ-ಬೆಳೆ, ಹವಾಮಾನ, ಜಲ ಸಂರಕ್ಷಣಾ ಕೆಲಸಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕೃಷಿಹೊಂಡ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಕೃಷಿಹೊಂಡಗಳನ್ನು ನಿರ್ಮಿಸಲಾಗಿದ್ದು, ಬೇಸಿಗೆಯಲ್ಲಿ ಸ್ಪ್ರಿಂಕ್ಲರ್ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.
ಪ್ಯಾಸ್ ಫೌಂಡೇಶನ್ ಚೇರಮನ್ ಡಾ.ಮಾಧವ ಪ್ರಭು ಅಭಿಯಾನದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮಾತನಾಡಿ, ಹಾಳುಬಾವಿಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.
ಅರಣ್ಯ ಉಪ ಸಂರಕ್ಷಣಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಎಚ್.ಬಿ. ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಉಪಸ್ಥಿತರಿದ್ದರು.
ಜಲಶಕ್ತಿ ಅಭಿಯಾನ: ಮಾಹಿತಿಗೆ ಸೂಚನೆ
ಜಲಸಂರಕ್ಷಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜಲಶಕ್ತಿ ಅಭಿಯಾನವನ್ನು ಜು.1 ರಂದು ಪ್ರಾರಂಭಿಸಲಾಗಿದೆ. ಈ ಯೋಜನೆಗೆ ಅನುಗುಣವಾಗಿ ನಿರ್ವಹಿಸಬೇಕಾದ ಕಾರ್ಯಕ್ರಮ ಕುರಿತು ಬೆಳಗಾವಿಯ ನೆಹರು ಯುವ ಕೇಂದ್ರದಲ್ಲಿ ನೋಂದಣಿಯಾದ ಯುವಕ ಸಂಘಗಳು ಕಾರ್ಯನಿರ್ವಸಬೇಕಾಗಿದೆ. ಬಾವಿಗಳಲ್ಲಿ ಇದ್ದ ಕೆಸರು, ಕಲ್ಲುಗಳನ್ನು ತೆಗೆಯುವುದು, ಸ್ವಚ್ಛಗೊಳಿಸುವುದು. ಅಥವಾ ಹೊಸ ಬಾವಿಗಳನ್ನು ನಿರ್ಮಾಣ ಮಾಡುವುದು, ಜಲ ಸಂರಕ್ಷಣೆಗಳ ಬಗ್ಗೆ ಜಾಗೃತಿ ಜಾಥಾ ಮತ್ತು ಬೀದಿನಾಟಕ ಮುಖಾಂತರ ಜಾಗೃತಿ ಮೂಡಿಸುವುದು, ಪಾರಂಪರಿಕ ಕೆರೆಗಳ ಹೊಳು ತೆಗೆಯುವುದು, ಮಳೆ ಬರಲು ಗಿಡಗಳನ್ನು ಹಚ್ಚುವುದು ಹಾಗೂ ಅವುಗಳ ಸಂರಕ್ಷಣೆ ಮಾಡುವುದು, ಹಳ್ಳ, ಕೊಳ್ಳಗಳಿಗೆ ಚೆಕ್‌ಡ್ಯಾಮ ನಿರ್ಮಾಣ ಮಾಡಿ ನೀರು ಸಂರಕ್ಷಣೆ ಮಾಡುವುದು ಈ ಅಭಿಯಾನದ ಉದ್ದೇಶ. ಈ ಹಿನ್ನೆಲೆಯಲ್ಲಿ ಯುವಕ ಅಥವಾ ಯುವತಿ ಮಂಡಳಗಳು ತಮ್ಮ ಗ್ರಾಮದಲ್ಲಿ ಜು. 1ರಿಂದ ನ. 30ರವರೆಗೆ ಜಲಶಕ್ತಿ ಅಭಿಯಾನದ ಕಾರ್ಯ ಕೈಗೊಂಡು (ಕಾಮಗಾರಿಗೆ ಮೊದಲಿದ್ದ ಸ್ಥಳ ನಂತರ ಸ್ಥಳದ ಬದಲಾವಣೆಯ ಫೂಟೋಗಳು ಹಾಗೂ ವರದಿಗಳನ್ನು ಪ್ರತಿವಾರ ಕಚೇರಿಗೆ ಸಲ್ಲಿಸಬೇಕು) ಗ್ರಾಮ ಪಂಚಾಯತ, ತಾಲೂಕಾ ಮಟ್ಟದ ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸಿ ಈ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ಬೆಳಗಾವಿ ನೆಹರು ಯುವ ಕೇಂದ್ರ ಉಪನಿರ್ದೇಶಕ ಡಿ.ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.