Advertisement

ಸರ್ಕಾರವೇ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲಿ

04:49 AM Jun 27, 2020 | Lakshmi GovindaRaj |

ಮೈಸೂರು: ರಾಜ್ಯ ಸರ್ಕಾರ ಕೋವಿಡ್‌ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ರದ್ದುಗೊಳಿಸಿ ಉಚಿತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ್ತರು ಪ್ರತಿಭಟನೆ  ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪ್ರತಿಭಟನಾಕಾರರು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ 19 ಸೋಂಕು ಚಿಕಿತ್ಸೆಗೆ ದರ ನಿಗದಿ ಜನ ವಿರೋಧಿಯಾಗಿದೆ.

Advertisement

ಕೋವಿಡ್‌-19  ಸಾಂಕ್ರಾಮಿಕ ರೋಗ. ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಪಡಿಸುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿ. ಈ ಜವಾಬ್ದಾರಿಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ಕೈ ತೊಳೆದು ಕೊಳ್ಳಲು ರಾಜ್ಯ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.  ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೇ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸಾಮಾನ್ಯರು ದುಬಾರಿ ದರ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ.

ಈ ಸ್ಥಿತಿಯಲ್ಲಿ ಕೋವಿಡ್‌-19 ರೋಗ  ಸಾಮಾನ್ಯರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ಇಂತಹ ಗಂಭೀರ ಸ್ಥಿತಿಯಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ಸಿಬ್ಬಂದಿ, ಔಷಧ ಸೇರಿದಂತೆ ಎಲ್ಲ ಸೌಲಭ್ಯ  ಒದಗಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಕೂಡಲೇ ಈ ತೀರ್ಮಾನವನ್ನು ರದ್ದುಗೊಳಿಸಿ ಕೋವಿಡ್‌ 19 ಸೋಂಕಿತರೆಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು.

ಅಗತ್ಯ ಬಿದ್ದರೆ ಖಾಸಗಿ  ಆಸ್ಪತ್ರೆಗಳನ್ನು ಸರ್ಕಾರದ ವಶಕ್ಕೆ ಪಡೆದು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸವರಾಜು  ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next