Advertisement

ಸರಕಾರ ಏಕಗಂಟಿನಲ್ಲಿ ಪರಿಹಾರ ನೀಡಲಿ: ಡಾ|ಶ್ಯಾನುಭಾಗ್‌

12:25 AM Oct 27, 2019 | mahesh |

ನೆಲ್ಯಾಡಿ: ಸರಕಾರಿ ಇಲಾಖೆಗಳ ಕೃಪಾಪೋಷಿತ ಎಂಡೋಸಲ್ಫಾನ್‌ ಮಾರಿಯಿಂದಾಗಿ ಕ್ಯಾನ್ಸರ್‌, ಹೃದ್ರೋಗದಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ಎಂಡೋ ಸಂತ್ರಸ್ತರಿಗೆ ಮಾಸಾಶನ ನೀಡುವ ಬದಲು ಏಕಗಂಟಿನಲ್ಲಿ ಪರಿಹಾರ ಮೊತ್ತ ನೀಡುವ ಕೆಲಸ ಆಗಬೇಕು. ಈ ಬಗ್ಗೆ ಎಂಡೋ ವಿರೋಧಿ ಹೋರಾಟ ಸಮಿತಿಯವರು ಸೂಕ್ತ ತೀರ್ಮಾನ ಕೈಗೊಂಡಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ಉಡುಪಿ ಮಾನವ ಹಕ್ಕುಗಳ ಹಿತರಕ್ಷಣ ಪ್ರತಿಷ್ಠಾನದ ಸಂಚಾಲಕ
ಡಾ| ರವೀಂದ್ರನಾಥ ಶ್ಯಾನುಭಾಗ್‌ ಹೇಳಿದರು.

Advertisement

1980ಕ್ಕಿಂತ ಮೊದಲು ಜನಿಸಿದವರು ಎಂಡೋ ಸಂತ್ರಸ್ತರಾಗಲು ಸಾಧ್ಯವಿಲ್ಲ ಎಂದು ವರದಿ ಹೇಳುತ್ತದೆ. ಆದರೆ 1980ಕ್ಕೆ ಮೊದಲು ಹುಟ್ಟಿದವರಿಗೂ ಎಂಡೋಸಲ್ಫಾನ್‌ ದುಷ್ಪರಿಣಾಮದಿಂದಾಗಿ ಈಗ ಕ್ಯಾನ್ಸರ್‌, ಅಂಗವೈಕಲ್ಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ ಡಾ| ಶ್ಯಾನುಭಾಗರು ಎಂಡೋ ದುಷ್ಪರಿಣಾಮ ಇನ್ನೂ 20 ವರ್ಷ ಇರಲಿದೆ. ಆದ್ದರಿಂದ ಗರ್ಭಿಣಿಯರು ಅಗತ್ಯವಾಗಿ ಮೂರು ಸಲ ಸ್ಕ್ಯಾನಿಂಗ್‌ ಮಾಡಿಸಿ ಮುಂಜಾಗ್ರತೆ ತೆಗದುಕೊಳ್ಳಬೇಕು. ಇವರಿಗೆ ಉಚಿತ ಸ್ಕ್ಯಾನಿಂಗ್‌ಗೆ ಸರಕಾರ ವ್ಯವಸ್ಥೆ ಮಾಡಬೇಕು ಎಂದರು.

ಸರಕಾರವೇ ಒಪ್ಪಿಕೊಂಡ ತಪ್ಪು
ಎಂಡೋ ದುರಂತದ ಬಗ್ಗೆ ಕೋರ್ಟ್‌, ಸರಕಾರವೇ ಒಪ್ಪಿಕೊಂಡಿದೆ. ಇದು ಸರಕಾರವೇ ಮಾಡಿದ ತಪ್ಪು. ಆದ್ದರಿಂದ ಎಂಡೋ ಸಂತ್ರಸ್ತರು ಇನ್ನೂ ಮನವಿ ಸಲ್ಲಿಸುವುದರಲ್ಲಿ ಅರ್ಥವಿಲ್ಲ. ಮಾಸಾಶನ ಸಿಕ್ಕಿಲ್ಲ, ಬಸ್‌ ಪಾಸ್‌ ಸಿಕ್ಕಿಲ್ಲ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಪ್ರತಿ ತಿಂಗಳ 10ನೇ ತಾರೀಕಿನೊಳಗೆ ಗಮನಕ್ಕೆ ತನ್ನಿ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಸ್ತಾವಿಸುತ್ತೇವೆ. ಅಲ್ಲಿಯೂ ಅವಕಾಶ ಸಿಗದೆ ಇದ್ದಲ್ಲಿ ಹೈಕೋರ್ಟ್‌ಗೂ ದೂರು ಸಲ್ಲಿಸಲು ಅವಕಾಶವಿದೆ. 2005ರಲ್ಲಿ ಮಾಹಿತಿ ಹಕ್ಕಿನಲ್ಲಿ ದೊರೆತ ಮಾಹಿತಿಯಂತೆ ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಒಟ್ಟು 12 ತಾಲೂಕುಗಳಲ್ಲಿ ಎಂಡೋ ದುಷ್ಪರಿಣಾಮವಾಗಿದೆ. ಎಂಡೋಸಲ್ಫಾನ್‌ ದುಷ್ಪರಿಣಾಮದ ಬಗ್ಗೆ ಸುಮಾರು 16 ವರ್ಷಸಂಶೋಧನೆ ನಡೆಸಿ ಸುಪ್ರೀಂಕೋರ್ಟ್‌ಗೆ ಹೋಗಿ
ದ್ದೇವೆ ಎಂದು ಡಾ| ಶ್ಯಾನುಭಾಗ್‌ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬಳಕೆದಾರರ ವೇದಿಕೆಯ ಸಂಚಾಲಕ ಡಾ|ನಿತ್ಯಾನಂದ ಪೈ ಮಾತನಾಡಿ, ಆಹಾರಧಾನ್ಯ, ತರಕಾರಿಗಳಿಗೆ ಕೀಟನಾಶಕಗಳ ಬಳಕೆಯಿಂದಾಗಿ ಮುಂದಿನ 10-20 ವರ್ಷಗಳಲ್ಲಿ ಎಂಡೋಸಲ್ಫಾನ್‌ಗಿಂತಲೂ ಹೆಚ್ಚಿನ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ಈ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು ಎಂದರು. ಮಾಹಿತಿ ಹಕ್ಕು ಹೋರಾಟಗಾರ ಸಂಜೀವ ಕಬಕ ಅವರು ಮಾಹಿತಿ ನೀಡಿದರು. ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆ. ಸ್ವಾಗತಿಸಿದರು. ಯೋಗೀಶ್‌ ಅಲಂಬಿಲ ವಂದಿಸಿದರು. ಜನಾರ್ದನ ಗೌಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next