ದಾವಣಗೆರೆ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಪ್ರಥಮ ದಿನವೇ ಘೋಷಿಸಿರುವ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ಕಾರ್ಯಕ್ರಮದ ಪ್ರಯೋಜನ ಭೂಮಿಯನ್ನೇ ನಂಬಿ ಜೀವನ ನಡೆಸುವಂತಹ ನಿಜವಾದ ರೈತ ಮಕ್ಕಳಿಗೆ ದೊರೆಯುವಂತಾಗಬೇಕು ಎಂಬ ಒತ್ತಾಯ ರೈತಾಪಿ ವರ್ಗದಿಂದ ಕೇಳಿ ಬಂದಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ಕಾರ್ಯಕ್ರಮ ಘೋಷಣೆ ಮಾಡಿರುವುದು ಅವರು ರೈತರ ಮಕ್ಕಳ ಬಗ್ಗೆ ಹೊಂದಿರುವ ಕಾಳಜಿಯ ಪ್ರತೀಕ. ಕಾರ್ಯಕ್ರಮ ನಿಜಕ್ಕೂ ಸ್ವಾಗತಾರ್ಹ. ಆದರೆ, ರೈತಾಪಿ ವರ್ಗದ ಹೆಸರಲ್ಲಿ ಉಳ್ಳವಂತಹವರ ಪಾಲಾಗಬಾರದು ಎಂಬ ಕಳಕಳಿಯನ್ನ ರೈತರು, ಮುಖಂಡರು ವ್ಯಕ್ತಪಡಿಸಿದ್ದಾರೆ.
ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಸರ್ಕಾರ ಶಿಷ್ಯವೇತನ ನೀಡಲು ಮುಂದಾಗಿರುವುದು ಒಳ್ಳೆಯ ಚಿಂತನೆ. ಆದರೆ, ಶಿಷ್ಯವೇತನ ನೀಡಲು ದೊಡ್ಡ ಮತ್ತು ಸಣ್ಣ ಹಿಡುವಳಿದಾರರು ಎಂಬ ತಾರತಮ್ಯ ಮಾಡುವುದು ಬೇಡ. ರೈತರು ಎಂದರೆ ಎಲ್ಲರೂ ಒಂದೇ. ಹಾಗಾಗಿ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವನ್ನೇ ನೀಡದೆ ಎಲ್ಲ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸುತ್ತಾರೆ.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ರೈತರು ಸಹ ತಮ್ಮ ಮಕ್ಕಳು ಉನ್ನತ ಶಿಕ್ಷಣವಂತರಾಗಬೇಕು ಎಂದು ಕಷ್ಟನಷ್ಟಗಳ ನಡುವೆಯೇ ಮಕ್ಕಳಿಗೆ ಶಿಕ್ಷಣ ಕೊಡಿಸುವುದ ಕಾಣಬಹುದು. ಸರ್ಕಾರ ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಶಿಷ್ಯವೇತನ ನೀಡುವುದು ಬೇಡ. ನಿಜವಾಗಿಯೂ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವುದಾದರೆ ಸರ್ಕಾರವೇ ನಿಗದಿಪಡಿಸುವಂತಹ ಸಂಪೂರ್ಣ ಶುಲ್ಕ ಪಾವತಿಸುವಂತಾಗಬೇಕು ಎಂಬುದು ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯ.
ಉನ್ನತ ಶಿಕ್ಷಣ ಹಂತದಲ್ಲಿ ಸರ್ಕಾರವೇ ನಿಗದಿಪಡಿಸಿರುವಂತಹ ಶುಲ್ಕ 50 ಸಾವಿರ, ಲಕ್ಷ ಇರುತ್ತದೆ. ಸರ್ಕಾರ ಶಿಷ್ಯವೇತನದ ಹೆಸರಲ್ಲಿ 5, 10 ಸಾವಿರ ಕೊಟ್ಟರೆ ಯಾವುದಕ್ಕೂ ಸಾಲುವುದಿಲ್ಲ. ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗಿದೆ ಎಂದು ಬೆನ್ನು ಚಪ್ಪರಿಸಿಕೊಳ್ಳಬಹುದೇ ಹೊರತು ನಿಜವಾಗಿಯೂ ಯಾವ ಪ್ರಯೋಜನ ಆಗುವುದೇ ಇಲ್ಲ. ಶಿಷ್ಯವೇತನ ನೀಡುವುದಾದರೆ ರೈತರು ಕಟ್ಟುವಂತಹ ಸಂಪೂರ್ಣ ಶುಲ್ಕ ಮರುಪಾವತಿ ವ್ಯವಸ್ಥೆ ಮಾಡಿದಲ್ಲಿ ನಿಜಕ್ಕೂ ಹೊಸ ಕಾರ್ಯಕ್ರಮ ಘೋಷಣೆ ಮಾಡಿರುವುದು ಸಾರ್ಥಕ ಆಗುತ್ತದೆ ಎನ್ನುತ್ತಾರೆ ಅವರು.
ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಸರ್ಕಾರ ಶಿಷ್ಯವೇತನ ನೀಡುವುದಾಗಿ ಹೊಸ ಸರ್ಕಾರ ಘೋಷಣೆ ಮಾಡಿದೆ. ಅದೇ ಶಿಷ್ಯವೇತನ ಪಡೆಯಲಿಕ್ಕೆ ಇನ್ನಿಲ್ಲದ ಷರತ್ತು ವಿಧಿಸುವಂತಾಗಬಾರದು. ಕಾಲೇಜುಗಳಲ್ಲಿನ ರೈತರ ಮಕ್ಕಳ ದಾಖಲಾತಿ ಆಧಾರದಲ್ಲೇ ಶಿಷ್ಯವೇತನ ನೀಡುವಂತಾಗಬೇಕು. ಶಿಷ್ಯವೇತನದ ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇರಬೇಕು.
ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟು ರೈತರು, ಮಕ್ಕಳು ಶಿಷ್ಯವೇತನಕ್ಕೆ ಅಲೆದಾಟ ನಡೆಸುವಂತೆ ಆಗಬಾರದು. ದೊಡ್ಡ, ಸಣ್ಣ ಹಿಡುವಳಿದಾರರು ಎಂದು ಭೇದಭಾವ ಮಾಡಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಶಿಷ್ಯವೇತನ ನೀಡುವುದಕ್ಕಿಂತಲೂ ಸಂಪೂರ್ಣ ಶುಲ್ಕವನ್ನೇ ಸರ್ಕಾರವೇ ಭರಿಸುವಂತಾದರೆ ನಿಜಕ್ಕೂ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಅಭಿಪ್ರಾಯಪಡುತ್ತಾರೆ.
-ರಾ. ರವಿಬಾಬು