Advertisement

ಸರ್ಕಾರ ರೈತರ ಭೂಮಿಗೆ ಹೆಚ್ಚಿನ ಪರಿಹಾರ ನೀಡಲಿ

03:58 PM May 27, 2022 | Team Udayavani |

ಹಾವೇರಿ: ಸರ್ಕಾರದ ಯೋಜನೆಗಳಿಗೆ ರೈತರು ಉದಾರವಾಗಿ ಜಮೀನು ನೀಡುತ್ತಾರೆ. ಆದರೆ, ಸರ್ಕಾರವೂ ಅಷ್ಟೇ ಉದಾರತೆಯಿಂದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ರೈತ ಮುಖಂಡ, ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಒತ್ತಾಯಿಸಿದರು.

Advertisement

ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಣಿಬೆನ್ನೂರು ದೇವರಗುಡ್ಡ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ಭೂ ಸ್ವಾಧೀನಕ್ಕೆ ಒಪ್ಪಂದದ ದರ ನಿಗದಿಗಾಗಿ ಕರೆಯಲಾಗಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಜನಪರ ನೂರಾರು ಯೋಜನೆಗಳಿಗೆ ರೈತರು ಹಿಂದಿನಿಂದಲೂ ಸಹಕರಿಸುತ್ತ ಬಂದಿದ್ದಾರೆ. ಜೀವನೋಪಾಯಕ್ಕೆ ಇರುವ ಜಮೀನನ್ನು ನೀಡುತ್ತ ಬಂದಿದ್ದಾರೆ. ಅಭಿವೃದ್ಧಿಗಾಗಿ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿದಾಗ ರೈತರ ಜಮೀನನ್ನು ಸ್ವಾಧೀನ ಮಾಡುತ್ತಲೇ ಬಂದಿದೆ. ಇದರಿಂದ ರೈತರ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರ ಸ್ವಾಧೀನ ಮಾಡಿಕೊಂಡ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದರು.

ಸರ್ಕಾರದ ನೂರೆಂಟು ನಿಯಮಗಳು, ಕರಾರು ಇಟ್ಟುಕೊಂಡು ರೈತರ ಭೂಮಿಯನ್ನು ಕಡಿಮೆ ದರಕ್ಕೆ ಸರ್ಕಾರ ಪಡೆಯುತ್ತಿದೆ. ಅವೈಜ್ಞಾನಿಕ ಮಾದರಿ ಕೈಬಿಟ್ಟು ಈಗಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.

ಸುಮಾರು 4 ವರ್ಷಗಳ ನಿರಂತರ ಹೋರಾಟದ ಫಲವಾಗಿ ಈ ಭಾಗಕ್ಕೆ ರೈಲ್ವೆ ಮೇಲ್ಸೇತುವೆ ಮಂಜೂರಾಗಿದೆ. ರೈತರೆಲ್ಲರೂ ಒಮ್ಮನಸ್ಸಿನಿಂದ ಭೂಮಿ ಕೊಡಲು ಮುಂದಾಗಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಸ್ವಾಧೀನಗೊಳ್ಳುವ ರೈತರ ಭೂಮಿಗೆ ಹೆಚ್ಚಿನ ದರ ನಿಗದಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

Advertisement

ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಮಾತನಾಡಿ, ನಾನು ಒಬ್ಬ ರೈತನ ಮಗನಾಗಿ ರೈತರ ಕಷ್ಟ ಅರಿತಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ಹೆಚ್ಚಿನ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಜೂ.6ರಂದು ರಾಣಿಬೆನ್ನೂರು ತಹಶೀಲ್ದಾರ್‌ ಕಚೇರಿಯಲ್ಲಿ ಸಭೆ ಕರೆಯಲಾಗುವುದು ಎಂದರು.

ರಾಣಿಬೆನ್ನೂರು ತಹಶೀಲ್ದಾರ್‌ ಶಂಕರ್‌ ಜಿ.ಎಸ್‌., ಉಪನೋಂದಣಾಧಿಕಾರಿ ವಿಶ್ವನಾಥ, ರೈಲ್ವೆ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ಷಣ್ಮುಖಪ್ಪ, ವೇಣುಗೋಪಾಲ, ಲೋಕೋಪಯೋಗಿ ಇಲಾಖೆಯ ಮಂಜುನಾಥ, ಪ್ರಮುಖರಾದ ಕೃಷ್ಣಪ್ಪ ಬ್ಯಾಡಗಿ, ವೆಂಕಟೇಶ ಕಾಕಿ, ಶ್ರೀಕಾಂತ ಕಾಕಿ, ಬಸವರಾಜ ಹೊನ್ನಾಳಿ, ಲಿಂಗಾರಾಜ ಹೊನ್ನಾಳಿ, ಬಸವರಾಜ ನರಸಗೊಂಡರ, ನಿಂಗಪ್ಪ ಹೊನ್ನಾಳಿ, ಹೊನ್ನಪ್ಪ ಹೊಳೆಯಮ್ಮನವರ, ರಾಜು ಹೊಳೆಯಮ್ಮನವರ, ಶಿವಪ್ಪ ನಾಗೇನಹಳ್ಳಿ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next