Advertisement

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

11:07 AM Mar 04, 2024 | Team Udayavani |

ರಾಜ್ಯದ ಆಡಳಿತಕ್ಕೆ ಮತ್ತಷ್ಟು ವೇಗ ನೀಡಲು, ಜನತೆಗೆ ತ್ವರಿತ ಮತ್ತು ಪಾರದರ್ಶಕ ಸೇವೆ ಒದಗಿಸಿಕೊಡುವ ನಿಟ್ಟಿನಲ್ಲಿ ಹಾಗೂ ಸರಕಾರದ ಬೊಕ್ಕಸಕ್ಕೆ ಇನ್ನಷ್ಟು ಹೆಚ್ಚಿನ ಆದಾಯ ತಂದುಕೊಡುವ ಹತ್ತು ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಟಿ.ಎಂ.ವಿಜಯಭಾಸ್ಕರ್‌ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣ ಆಯೋಗ-2 ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಇದು ಆಯೋಗದ 7ನೇ ವರದಿಯಾಗಿದ್ದು, ಇದರಲ್ಲಿ ಸರಕಾರದ 8 ಇಲಾಖೆಗಳಿಗೆ ಸಂಬಂಧಪಟ್ಟಂತೆ ಒಟ್ಟಾರೆ 527 ಶಿಫಾರಸುಗಳನ್ನು ಮಾಡಲಾಗಿದೆ. ಈ ಮೂಲಕ ಆಡಳಿತ ಸುಧಾರಣ ಆಯೋಗ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಲ್ಲಿಸಿರುವ ಏಳು ವರದಿಗಳಲ್ಲಿ, ಸರಕಾರದ 39 ಇಲಾಖೆಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 5,039 ಶಿಫಾರಸುಗಳನ್ನು ಸಲ್ಲಿಸಿದಂತಾಗಿದೆ.

Advertisement

ಸರಕಾರಿ ಸೇವೆಗಳನ್ನು ತ್ವರಿತವಾಗಿ ಜನರಿಗೆ ತಲುಪಿಸುವ ಸಲುವಾಗಿ ವಿಶೇಷ ಶುಲ್ಕ ಸಹಿತ “ತತ್ಕಾಲ್‌’ ವಿಧಾನದ ಅಳವಡಿಕೆ, ಸರಕಾರಿ ನೌಕರರ ಆಸ್ತಿಯ ಕುರಿತಾಗಿನ ಮಾಹಿತಿಗಳು ಸಾರ್ವಜನಿಕರಿಗೆ ಲಭಿಸುವಂತೆ ಮಾಡುವುದು, ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯ ಬದಲಾಗಿ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆಯ ಜಾರಿ, ಎಲ್ಲ ಇಲಾಖೆಗಳಲ್ಲಿ ಪ್ರತೀ ಆರು ತಿಂಗಳುಗಳಿಗೊಮ್ಮೆ ಸೈಬರ್‌ ಸುರಕ್ಷೆಯ ತಪಾಸಣೆ, ಸಕಾಲ ಯೋಜನೆಯಡಿಯಲ್ಲಿ ಸೇವೆ ವಿಳಂಬವಾದಲ್ಲಿ ಅರ್ಜಿದಾರರಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತದಲ್ಲಿ ಹೆಚ್ಚಳ, 4ಜಿ ವಿನಾಯಿತಿಗೆ ಕಡಿವಾಣ, ಯಾವುದೇ ಇಲಾಖೆಯಲ್ಲಿ ನೌಕರರು ದೀರ್ಘ‌ಕಾಲ ಒಂದೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾಮರ್ಥ್ಯವರ್ಧನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಅಂತಹ ನೌಕರರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವುದು, ಇಲಾಖೆಗಳ ನಡುವೆ ಹೊರಗುತ್ತಿಗೆ ನೌಕರರ ಪರಸ್ಪರ ವಿನಿಮಯ, ಬೆರಳಚ್ಚುಗಾರರ ಹುದ್ದೆಗಳನ್ನು ರದ್ದುಪಡಿಸಿ, ಬಹುನುರಿತ ಕೆಲಸಗಾರರು ಎಂಬ ಹೊಸ ಹುದ್ದೆಯ ಸೃಷ್ಟಿ, ಅಬಕಾರಿ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಕಾನೂನು ಉಲ್ಲಂಘನೆ ಪ್ರಕರಣಗಳ ಸಂದರ್ಭದಲ್ಲಿ ವಿಧಿಸಲಾಗುತ್ತಿರುವ ದಂಡದ ಮೊತ್ತ ಹೆಚ್ಚಳ, ನೌಕರರ ಕುಟುಂಬ ಕಲ್ಯಾಣ ನಿಧಿಯ ವಂತಿಗೆ ದರ ಹೆಚ್ಚಳ, ಪ್ರತೀ ವರ್ಷ ಸರಕಾರದ ಎಲ್ಲ ಇಲಾಖೆ, ನಿಗಮ, ಮಂಡಳಿ, ವಿವಿ ಕಚೇರಿಗಳಲ್ಲಿ ಸ್ವತ್ಛತಾ ಅಭಿಯಾನ ಕೈಗೊಳ್ಳುವುದು ಸೇರಿ, ಹತ್ತು ಹಲವು ಶಿಫಾರಸುಗಳನ್ನು ಈ ಬಾರಿಯ ವರದಿಯಲ್ಲಿ ಆಯೋಗ ಮಾಡಿದೆ.

ಸರಕಾರಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಯೋಗ ಮಾಡಿರುವ ಶಿಫಾರಸುಗಳಲ್ಲಿ ಕಾರ್ಯಸಾಧುವಾದ ಮತ್ತು ನಿಜಕ್ಕೂ ಆಡಳಿತ ಮತ್ತು ಜನಸ್ನೇಹಿ ಶಿಫಾರಸುಗಳನ್ನು ತ್ವರಿತ ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕು. ಇದೇ ವೇಳೆ ಆಯೋಗ, ರಾಜ್ಯದಲ್ಲಿ ಸಾಗುವಳಿಯೋಗ್ಯ 21 ಲಕ್ಷ ಹೆಕ್ಟೇರ್‌ ಭೂಮಿ ಪಾಳುಬಿದ್ದಿದ್ದು, ಇದರಿಂದ ವಾರ್ಷಿಕ 8 ಸಾವಿರ ಕೋಟಿ ರೂ. ನಷ್ಟವುಂಟಾಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ತನ್ನ ವರದಿಯಲ್ಲಿ ಉಲ್ಲೇಖೀಸಿದೆ. ಇದರತ್ತ ಸರಕಾರ ಆದ್ಯತೆಯ ಮೇಲೆ ಗಮನ ಹರಿಸಬೇಕಿದ್ದು ಕೃಷಿ ಭೂಮಿ ಸದ್ಬಳಕೆಯಾಗುವಂತೆ ಮತ್ತು ಅತಿಕ್ರಮಣವಾಗದಂತೆ ಕ್ರಮ ಕೈಗೊಳ್ಳಬೇಕು.
ಆಡಳಿತ ಸುಧಾರಣ ಆಯೋಗ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಪ್ರಮುಖ ಶಿಫಾರಸುಗಳನ್ನಾದರೂ ಸರಕಾರ ಹಂತಹಂತವಾಗಿ ಜಾರಿಗೆ ತಂದದ್ದೇ ಆದಲ್ಲಿ, ಆಯೋಗ ರಚನೆಯ ನೈಜ ಉದ್ದೇಶ ಈಡೇರಿದಂತಾಗುತ್ತದೆ. ಸರಕಾರ ಗಂಭೀರವಾಗಿ ಚಿಂತಿಸಿ ಆಡಳಿತಸ್ನೇಹಿ, ಜನಪರ ಶಿಫಾರಸುಗಳನ್ನು ಜಾರಿಗೊಳಿಸಿ ಆಡಳಿತ ಯಂತ್ರಕ್ಕೆ ಸಾಣೆ ಹಿಡಿಯುವ ಕಾರ್ಯ ಮಾಡಬೇಕು.

ಇದನ್ನೂ ಓದಿ: ಮುಸುಕುಧಾರಿಯಿಂದ ಶಾಲಾ ಆವರಣದಲ್ಲೇ ಆ್ಯಸಿಡ್ ದಾಳಿ… ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

Advertisement

Udayavani is now on Telegram. Click here to join our channel and stay updated with the latest news.

Next