ರಾಜ್ಯದಲ್ಲಿ ಅಧಿಕಾರಾವಧಿ ಮುಗಿದಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳ ಸಾರ್ವತ್ರಿಕ ಚುನಾವಣೆ ನಡೆಸಲು ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯದ ಚುನಾವಣ ಆಯೋಗಕ್ಕೆ ತಾಕೀತು ಮಾಡಿದೆ. ಹೈಕೋರ್ಟ್‌ನ ಈ ಆದೇಶ ಇದೀಗ ಚುನಾವಣ ಆಯೋಗ ಮತ್ತು ರಾಜ್ಯ ಸರಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಹೈಕೋರ್ಟ್ ಈ ಹಿಂದೆಯೇ ಜಿ.ಪಂ. ಮತ್ತು ತಾ.ಪಂ.ಗಳಿಗೆ ಸಂವಿಧಾನದ ಪರಿಚ್ಛೇದ 243(ಯು)ಪ್ರಕಾರ ನಿಗದಿತ ಕಾಲಮಿತಿಯೊ ಳಗೆ ಚುನಾವಣೆ ನಡೆಸಬೇಕೆಂದು ಆಯೋಗಕ್ಕೆ ಆದೇಶ ನೀಡಿತ್ತು. ಅದ ರಂತೆ ಆಯೋಗ ಚುನಾವಣೆಗಳನ್ನು ನಡೆಸಲು ಮುಂದಾಗಿತ್ತು. ಕೊರೊನಾ ಎರಡನೇ ಅಲೆ ತೀವ್ರಗೊಂಡಿದ್ದರಿಂದಾಗಿ ಚುನಾವಣೆಯನ್ನು ಡಿಸೆಂಬರ್‌ಗೆ ಮುಂದೂಡುವಂತೆ ಆಯೋಗಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಆದರೆ ಚುನಾವಣೆ ಮುಂದೂಡು ವುದನ್ನು ಪ್ರಶ್ನಿಸಿ ಮತ್ತು ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆ ಸಲು ನಿರ್ದೇಶ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಪಿಐಎಲ್‌ಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಸರಕಾರದ ನಿರ್ಣಯಕ್ಕೆ ಚುನಾವಣ ಆಯೋಗ ಬದ್ಧವಾಗಿರಬೇಕಿಲ್ಲ ಎಂದು ಆಯೋಗಕ್ಕೆ ಕಿವಿ ಮಾತು ಹೇಳಿದ್ದೇ ಅಲ್ಲದೆ ಚುನಾವಣ ವೇಳಾಪಟ್ಟಿಯನ್ನು ಪ್ರಕಟಿಸು ವಂತೆ ಆದೇಶ ನೀಡಿದೆ.
ಕೋವಿಡ್ ಉಲ್ಬಣಿಸುತ್ತಿರುವ ಸಂದರ್ಭದಲ್ಲಿ ಚುನಾವಣೆ ನಡೆಸು ವುದು ಕಷ್ಟಸಾಧ್ಯವಾಗಿರುವುದರಿಂದ ಸದ್ಯ ಚುನಾವಣೆಯನ್ನು ಮುಂದೂಡುವುದು ಸೂಕ್ತ ಎಂದು ಸರಕಾರ ಹೈಕೋರ್ಟ್‌ಗೆ ತನ್ನ ಅಭಿಪ್ರಾಯ ತಿಳಿಸಿದೆ. ಒಟ್ಟಾರೆ ಬೆಳವಣಿಗೆಗಳು ರಾಜ್ಯ ಸರಕಾರ ಮತ್ತು ಆಯೋಗದ ನಡುವೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ. ಈ ಹಿಂದೆ ಆಯೋಗ ಚುನಾವಣೆ ನಡೆಸಲು ಮುಂದಾದಾಗ ಆಗಿನ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಆಯೋಗದ ವಿರುದ್ಧ ಹರಿಹಾ ಯ್ದಿದ್ದರು. ಇದೀಗ ಹೈಕೋರ್ಟ್ ಚುನಾವಣ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಆಯೋಗಕ್ಕೆ ಆದೇಶ ನೀಡಿರುವುದರಿಂದಾಗಿ ಹೊಸ ಸರಕಾರದ ನಡೆ ಏನು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೋವಿಡ್ ಇದ್ದಾಗಲೇ ರಾಜ್ಯದ ಕೆಲವು ಕ್ಷೇತ್ರಗಳ ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಉಪಚುನಾವಣೆ, ಚುನಾವಣೆಗಳನ್ನು ನಡೆಸಲಾ ಗಿತ್ತು. ದೇಶಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾದಾಗ ಸುಪ್ರೀಂ ಕೋರ್ಟ್ ಕೂಡ ಚುನಾವಣೆ ನಡೆಸಿದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇವೆಲ್ಲದರ ನಡುವೆ ಈಗ ರಾಜ್ಯದಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಸಂಬಂಧ ಜಿಜ್ಞಾಸೆ ಆರಂಭಗೊಂಡಿದೆ.
ಇದೀಗ ಮತ್ತೆ ರಾಜ್ಯದ ಹಲವೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿ ರುವುದು ಆತಂಕಕ್ಕೆ ಕಾರಣವಾಗಿದೆ. ಇದು ಮೂರನೇ ಅಲೆಯ ಮುನ್ಸೂಚನೆ ಎನ್ನಲಾಗುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ನಿಜಕ್ಕೂ ಕಷ್ಟಸಾಧ್ಯವೇ. ರಾಜ್ಯದಲ್ಲಿ ಈ ಹಿಂದೆಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿವಿಧ ಕಾರಣಗಳಿಗಾಗಿ ಮುಂದೂಡಿದ ಉದಾಹರಣೆಗಳಿವೆ. ಇವುಗಳನ್ನು ಸರಕಾರ ಮತ್ತು ಆಯೋಗ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಅನುಮತಿ ಪಡೆದುಕೊಳ್ಳುವುದೊಂದೇ ಸದ್ಯ ಸರಕಾರದ ಮುಂದಿರುವ ಪರಿಹಾರ ಮಾರ್ಗ.