Advertisement

ಬ್ರಹ್ಮಾವರ ತಾಲೂಕಿನ ಅಗ್ನಿಶಾಮಕ ಠಾಣೆ ಬೇಡಿಕೆ ಈಡೇರಲಿ

04:20 PM Apr 07, 2023 | Team Udayavani |

ಕೋಟ: ಅಗ್ನಿ ಹಾಗೂ ಇತರ ಅವಘಡಗಳನ್ನು ನಿಯಂತ್ರಿಸುವ ಸಲುವಾಗಿ ಬ್ರಹ್ಮಾವರ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು ಎನ್ನುವ ಬೇಡಿಕೆ ಕಡತದಲ್ಲಿಯೇ ಬಾಕಿಯಾಗಿದೆ. 2017ರ ಬಜೆಟ್‌ನಲ್ಲಿ ಬ್ರಹ್ಮಾವರ ತಾಲೂಕು ಘೋಷಣೆಯಾದ ಅನಂತರ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸುವ ಜತೆಗೆ ಅಗ್ನಿಶಾಮಕ ಠಾಣೆಯೂ ತುರ್ತಾಗಿ ಆಗಬೇಕು ಎನ್ನುವ ಬೇಡಿಕೆ ಇತ್ತು.
ಬ್ರಹ್ಮಾವರ ತಾಲೂಕು ಕೋಟ ಮತ್ತು ಬ್ರಹ್ಮಾವರ ಹೋಬಳಿಯನ್ನು ಹೊಂದಿದ್ದು, ಬ್ರಹ್ಮಾವರ ಹೋಬಳಿಯಲ್ಲಿ ನಾಲ್ಕೂರು, ನಂಚಾರು, ಕುದಿ, ಕೆಂಜೂರು, ಪೆಜಮಂಗೂರು, ಹೊಸೂರು, ಕಳೂನಿರು, ಹಲುವಳ್ಳಿ, ಪೆರ್ಡೂರು, ಬೈರಂಪಳ್ಳಿ, ಬೆಳ್ಳರ್ಪಾಡಿ, ಶಿರೂರು, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ಹಾವಂಜೆ, ಚೇರ್ಕಾಡಿ, ಉಪ್ಪೂರು, ಹೇರೂರು, ಆರೂರು ಮೊದಲಾದ ಗ್ರಾಮಗಳು ಹಾಗೂ ಕೋಟ ಹೋಬಳಿ ಮಣೂರು, ಕೋಟತಟ್ಟು, ಗಿಳಿಯಾರು, ಪಾಂಡೇಶ್ವರ, ಮೂಡಹಡು, ಕೋಡಿ, ಐರೋಡಿ, ಬಾಳುಕುದ್ರು, ವಡ್ಡರ್ಸೆ, ಅಚ್ಲಾಡಿ, ಬನ್ನಾಡಿ, ಕಾವಡಿ, ಶಿರಿಯಾರ, ಕಾಡೂರು, ನಡೂರು, ಹೇರಾಡಿ ಮೊದಲಾದ ಗ್ರಾಮಗಳು ಅತ್ಯಂತ ಗ್ರಾಮೀಣ ಪ್ರದೇಶಗಳಾಗಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ಅಗ್ನಿ ಅವಘಡಗಳು ನಡೆದರೆ ರಕ್ಷಣ ಕಾರ್ಯಾಚರಣೆಗೆ 40-50 ಕಿ.ಮೀ. ದೂರದ ಉಡುಪಿ ಅಥವಾ ಕುಂದಾಪುರದಿಂದ ಅಗ್ನಿಶಾಮಕ ವಾಹನಗಳು ಆಗಮಿಸಬೇಕಾಗುತ್ತದೆ. ಕೆಲವೊಮ್ಮೆ ಕಾರ್ಯಾಚರಣೆ ತಡವಾಗಿ ಹೆಚ್ಚಿನ ಅಪಾಯ, ಜೀವಹಾನಿ ಸಂಭವಿಸುತ್ತದೆ. ಹೀಗಾಗಿ ಬ್ರಹ್ಮಾವರದಲ್ಲಿ ಅಗತ್ಯವಾಗಿ ಅಗ್ನಿಶಾಮಕ ಠಾಣೆ ಸ್ಥಾಪನೆಯ ಅಗತ್ಯವಿದೆ.

Advertisement

ಉಡುಪಿ ಜಿಲ್ಲೆಯಲ್ಲಿ 2019ರಲ್ಲಿ ಒಟ್ಟು 144 ಬೆಂಕಿ ಅನಾಹುತ, 58 ಇತರ ಅನಾಹುತಗಳು, 2020ರಲ್ಲಿ 235 ಬೆಂಕಿ ಅನಾಹುತಗಳು, 44 ಇತರ ಅನಾಹುತಗಳು, 2021ರಲ್ಲಿ 129 ಬೆಂಕಿ ಅನಾಹುತ, 52 ಇತರ ಅನಾಹುತಗಳು, 2022ರಲ್ಲಿ 341 ಅಗ್ನಿ ಅವಘಡ, 114 ಇತರ, 2023ರಲ್ಲಿ ಅಗ್ನಿಶಾಮಕ ಠಾಣೆಗಳ ಅಂಕಿಅಂಶದ ಪ್ರಕಾರ ಉಡುಪಿಯಲ್ಲಿ 195, ಕಾರ್ಕಳ 167, ಕುಂದಾಪುರ 86, ಬೈಂದೂರು 43, ಮಲ್ಪೆ 39 ಅಗ್ನಿ ಅವಘಡಗಳು ಹಾಗೂ ಒಟ್ಟು 38 ಇತರ ಅನಾಹುತಗಳು ಸಂಭವಿಸಿವೆೆ.

ಇದರಲ್ಲಿ ಬ್ರಹ್ಮಾವರ ತಾ| ವ್ಯಾಪ್ತಿಯಲ್ಲಿನ ಸಂಖ್ಯೆ ಕೂಡ ಅತೀ ದೊಡ್ಡದಿದೆ. ಈಗಾಗಲೇ ಬ್ರಹ್ಮಾವರ ಮಿನಿ ವಿಧಾನಸೌಧದ ಪಕ್ಕದಲ್ಲೇ ಒಂದು ಎಕ್ರೆ ಜಾಗವನ್ನು ಅಗ್ನಿಶಾಮಕ ಠಾಣೆಗೆ ಈ ಹಿಂದೆಯೇ ಮೀಸಲಿರಿಸಲಾಗಿದೆ. ಶೀಘ್ರ ಠಾಣೆ ಸ್ಥಾಪನೆಯಾಗಲಿದೆ ಎನ್ನುವ ಆಶ್ವಾಸನೆಯನ್ನು ಜನಪ್ರತಿನಿಧಿಗಳು ನೀಡುತ್ತಾ ಬಂದಿದ್ದಾರೆ. ಅಗ್ನಿಶಾಮಕ ಇಲಾಖೆಯ ಕೆ.ಸಿ.ಎಫ್‌.-2 ಯೋಜನೆಯಡಿ 2025-26ರಲ್ಲಿ ಬ್ರಹ್ಮಾವರದಲ್ಲಿ ಠಾಣೆ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತುರ್ತು ಅಗತ್ಯವಿರುವುದರಿಂದ 2025- 26ಕ್ಕೆ ಎಂದು ಕಾಯದೇ ಶೀಘ್ರವಾಗಿ ಸ್ಥಾಪನೆಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕಿದೆ.

- ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next