Advertisement

“ಸಾಧಾರಣ ಬರಪೀಡಿತ ತಾಲೂಕುಗಳ ರೈತರಿಗೂ ಪರಿಹಾರ ಸಿಗಲಿ’

06:00 AM Dec 21, 2018 | Team Udayavani |

ಬೆಂಗಳೂರು: ಸಾಧಾರಣ ಪ್ರಮಾಣದಲ್ಲಿ ಬರಪೀಡಿತವಾಗಿರುವ ತಾಲೂಕುಗಳ ರೈತರಿಗೂ ಎನ್‌ಡಿಆರ್‌ಎಫ್ ವತಿಯಿಂದ ಪರಿಹಾರ ದೊರಕುವಂತೆ 2016ರ ಬರ ನಿರ್ವಹಣೆ ಕೈಪಿಡಿಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಾಮೋಹನ್‌ ಸಿಂಗ್‌ ಅವರಿಗೆ ಗುರುವಾರ ಪತ್ರ ಬರೆದಿರುವ ಅವರು, ಎನ್‌ಡಿಆರ್‌ಎಫ್ನ ಈಗಿನ ಮಾನದಂಡಗಳ ಪ್ರಕಾರ ತೀವ್ರ ಬರಗಾಲ ಪೀಡಿತವಾಗಿರುವ ಜತೆಗೆ ಶೇ.50 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗಿರುವ ತಾಲೂಕುಗಳಿಗೆ ಮಾತ್ರ ಆರ್ಥಿಕ ನೆರವು ಸಿಗಲಿದೆ. ಇದರಿಂದಾಗಿ, ಸಾಧಾರಣ ಬರಪೀಡಿತ ತಾಲೂಕುಗಳಾಗಿದ್ದು, ಶೇ.33ರಿಂದ 50ರವರೆಗೆ ಬೆಳೆ ನಷ್ಟವಾಗಿರುವ ಪ್ರದೇಶಗಳ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೃಷಿಕರು ಈಗಾಗಲೇ ಸಂಕಷ್ಟದಲ್ಲಿದ್ದು, ಕೃಷಿಯನ್ನು ಮುಂದುವರಿಸಿಕೊಂಡು ಹೋಗುವುದೇ ದುಸ್ತರವಾಗಿದೆ. ಹೀಗಾಗಿ, ಸಾಧಾರಣ ಬರಪೀಡಿತ ತಾಲೂಕುಗಳ ರೈತರನ್ನು ಕೂಡ ಪರಿಹಾರಕ್ಕೆ ಪರಿಗಣಿಸಬೇಕು. ಇಂತಹ ಕ್ರಮದಿಂದ ದೇಶಾದ್ಯಂತ ಇರುವ ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ಉಲ್ಲೇಖೀಸಿದ್ದಾರೆ. ಇದಲ್ಲದೆ, ಶೇ.50ಕ್ಕಿಂತ ಕಡಿಮೆ ಬೆಳೆ ನಷ್ಟ ಅನುಭವಿಸಿರುವ ರೈತರನ್ನು ಪರಿಹಾರಕ್ಕೆ ಪರಿಗಣಿಸದೆ ಇರುವುದು ಈಗ ಚಾಲ್ತಿಯಲ್ಲಿರುವ ಎಸ್‌ ಡಿಆರ್‌ಎಫ್/ಎನ್‌ಡಿಆರ್‌ಎಫ್ ನಿಯಮಗಳಿಗೆ ತದ್ವಿರುದ್ಧವಾಗಿದೆ.

ಏಕೆಂದರೆ, ಶೇ.33ರಿಂದ ಶೇ.50ರ ನಡುವೆ ಬೆಳೆ ನಷ್ಟ ಅನುಭವಿಸಿರು ವವರಿಗೆ ಇನ್‌ಪುಟ್‌ ಸಬ್ಸಿಡಿ ಕೊಡಬೇಕೆಂಬ ಅಂಶವು ಎನ್‌ಡಿಆರ್‌ಎಫ್ ಮಾನದಂಡಗಳಲ್ಲಿ ಇದೆ ಎಂದು ಪತ್ರದಲ್ಲಿ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next