ದಾವಣಗೆರೆ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಸೋಮವಾರ ರೈತರು, ಕೃಷಿ ಕಾರ್ಮಿಕರು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕಳೆದ 5-6 ವರ್ಷದಿಂದ ಸತತ ಬರದ ಸುಳಿಯಲ್ಲಿ ಸಿಲುಕಿರುವ ರೈತರು ಸಾಲ ಪಾವತಿಸುವುದರಲಿ ಜೀವನ ನಿರ್ವಹಣೆ ಮಾಡಲಾರದಂತಹ ಸ್ಥಿತಿಯಲ್ಲಿದ್ದಾರೆ. ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿನ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ. ಆದರೆ, ಅದಕ್ಕೂ ಹಲವಾರು ಷರತ್ತು ವಿಧಿಸಿದೆ. ಸಾಲ ಮನ್ನಾ ಸಮಪರ್ಕವಾಗಿಲ್ಲ. ಷರತ್ತು ತೆಗೆದು, ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು
ಒತ್ತಾಯಿಸಿದರು.
ಕಾರ್ಪೋರೇಟ್ ವಲಯ, ಬಂಡವಾಳಗಾರರ 1 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಬಗ್ಗೆ ಮುಂದಾಗುತ್ತಿಲ್ಲ. ರೈತರ ಬಗ್ಗೆ ಮೊಸಳೆ ಕಣೀರು ಸುರಿಸುವ ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಬೇಕು ಎಂಬ ಹಲವಾರು ವರ್ಷದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಚಿಸಿದ್ದ ಸ್ವಾಮಿನಾಥನ್ ಆಯೋಗ ವರದಿ ಸಲ್ಲಿಸಿ, ಅನೇಕ ವರ್ಷವೇ ಕಳೆದಿವೆ. ಸ್ವಾಮಿನಾಥನ್ ವರದಿ ಜಾರಿ ಮಾಡದೇ ರೈತರನ್ನು ಆತಂಕಕೀಡುಮಾಡಿದೆ. ಈ ಕೂಡಲೇ ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಮೂಲಕ ರೈತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ನದಿ, ತುಂಗಾ ಕಾಲುವೆಯಿಂದ ಜಿಲ್ಲೆಯ ಎಲ್ಲಾ ಕೆರೆ ತುಂಬಿಸುವುದು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಗರ್ಭಗುಡಿ ಬ್ಯಾರೇಜ್ ಕಾಮಗಾರಿಗೆ ಚಾಲನೆ, ಬೆಳೆ ವಿಮೆ ಕಟ್ಟಿಸಿಕೊಳ್ಳುವ ಅವಧಿ ವಿಸ್ತರಣೆ, ಗೋಶಾಲೆಗಳಿಗೆ ಸಮರ್ಪಕ ಮೇವು, ಖಾತರಿ ಯೋಜನೆಯಡಿ ಕೃಷಿಕೂಲಿಕಾರ್ಮಿಕರಿಗೆ 200 ದಿನ ಕೆಲಸ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಮುಖಂಡರಾದ ಪಾಲವನಹಳ್ಳಿ ಪ್ರಸನ್ನಕುಮಾರ್, ಅರುಣ್‌ಕುಮಾರ್ ಕುರುಡಿ, ಬಲ್ಲೂರು ರವಿಕುಮಾರ್, ವಾಸನದ ಓಂಕಾರಪ್ಪ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಹೊಸಳ್ಳಿ ಮಲ್ಲೇಶ್, ಇ. ಶ್ರೀನಿವಾಸ್, ಆವರಗೆರೆ ವಾಸು, ಎನ್. ಶಶಿಧರ್, ಮಧು ತೊಗಲೇರಿ, ಮೌಲಾನಾಯ್ಕ, ಬುಳ್ಳಾಪುರದ ಹನುಮಂತಪ್ಪ, ಹಾಲೇಶ್‌ನಾಯ್ಕ, ಗುಡಿಹಳ್ಳಿ ಹಾಲೇಶ್, ಪಿ. ಷಣ್ಮುಖಸ್ವಾಮಿ ಇತರರು ಇದ್ದರು.