ತುಮಕೂರು: ಶಿರಾ ತಾಲೂಕು ಪಟ್ಟನಾಯಕನ ಹಳ್ಳಿಯಲ್ಲಿ 2020ರ ಜ.16ರಿಂದ 22ರವರೆಗೆ ನಡೆಯಲಿರುವ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರೆಯಲ್ಲಿ ವಿವಿಧ ಇಲಾಖೆಗಳಿಂದ ಏರ್ಪಡಿಸುವ ವಸ್ತುಪ್ರದರ್ಶನ ಹೊಸತನದಿಂದ ಕೂಡಿರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಪ್ಲಾಸ್ಟಿಕ್ ಬಳಸಬಾರದು: ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಇಲಾಖೆ ಕಾರ್ಯಕ್ರಮ ಹಾಗೂ ಸಾಧನೆ ಕುರಿತು ಮಳಿಗೆ ತೆರೆದು ವಸ್ತುಪ್ರದರ್ಶನ ಏರ್ಪಡಿಸಬೇಕು. ವಸ್ತುಪ್ರದರ್ಶನದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಎಲ್ಲ ಇಲಾಖೆಗಳು ಸಾರ್ವಜನಿಕ ಅರಿವು ಮೂಡಿಸಬೇಕು. ಫ್ಲೆಕ್ಸ್ ಮತ್ತಿತರ ಪ್ರಚಾರ ಸಾಮಗ್ರಿಗಳಿಗೆ ಪ್ಲಾಸ್ಟಿಕ್ ಬಳಸಬಾರದು ಎಂದು ತಾಕೀತು ಮಾಡಿದರು.
ಉಪಯುಕ್ತ ಮಾಹಿತಿ ನೀಡಿ: ಶಿಕ್ಷಣ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಮೀನುಗಾರಿಕೆ, ಕೈಮಗ್ಗ ಮತ್ತು ಜವಳಿ, ವಾರ್ತಾ ಮತ್ತು ಸಾರ್ವಜನಿಕ, ಆರೋಗ್ಯ, ಯುವ ಸಬಲೀಕರಣ ಮತ್ತು ಕ್ರೀಡಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ಒಟ್ಟು 13 ಇಲಾಖೆಗಳು ವಸ್ತು ಪ್ರದರ್ಶನದಲ್ಲಿ ಭಾಗ ವಹಿಸಲಿವೆ. ಕಾಟಾಚಾರಕ್ಕೆ ಮಳಿಗೆ ತೆರೆಯದೆ ಜನರಿಗೆ ಉಪಯುಕ್ತ ಮಾಹಿತಿ ನೀಡಬೇಕು. ಇದಕ್ಕಾಗಿ ಸಿಬ್ಬಂದಿ ನೇಮಿಸಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆಯಿಂದ ಮಕ್ಕಳಿಗಾಗಿ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸುವುದರೊಂದಿಗೆ ನಾಸಾ ವಿಜ್ಞಾನಿಗಳನ್ನು ಕರೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬೇಕು. ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್ ಓದಬೇಕೆಂಬ ಉಪಯುಕ್ತ ಮಾಹಿತಿ ಒದಗಿಸಬೇಕೆಂದರು.
ಸೆಲ್ಫಿಪಾಯಿಂಟ್ ವ್ಯವಸ್ಥೆ ಮಾಡಿ: ಅರಣ್ಯ ಇಲಾಖೆಯಿಂದ ಬೀಜದುಂಡೆ ತಯಾರಿಕೆ, ನೆಡು ತೋಪು ನಿರ್ಮಾಣದ ಪ್ರಾತ್ಯಕ್ಷಿಕೆಯೊಂದಿಗೆ ವಿವಿಧ ಸಸಿ ಪ್ರದರ್ಶನಕ್ಕಿಟ್ಟು ಮಾಹಿತಿ ನೀಡಬೇಕು. ಜನಾ ಕರ್ಷಣೆಗಾಗಿ ಪರಿಸರ ರಕ್ಷಣೆ ಬಗ್ಗೆ ಘೋಷವಾಕ್ಯ ಬರೆಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹಿರಿಯರು ಹಾಗೂ ಮಕ್ಕಳಿಗಾಗಿ ಪ್ರತ್ಯೇಕವಾಗಿ ಸೆಲ್ಫಿ ಪಾಯಿಂಟ್ ವ್ಯವಸ್ಥೆ ಮಾಡಬೇಕು. ಉಚಿತ ರಕ್ತದಾನ ಶಿಬಿರ, ಆರೋಗ್ಯ, ದಂತ ತಪಾಸಣಾ ಶಿಬಿರ ಏರ್ಪಡಿಸಬೇಕು. ಹಾವು, ನಾಯಿ ಕಡಿತಕ್ಕೆ ಪ್ರಥಮ ಚಿಕಿತ್ಸೆ ಕುರಿತು ವಿಡಿಯೋ ಪ್ರದರ್ಶಿಸಲು, ಅಸ್ಪೃಶ್ಯತೆ ನಿವಾರಣೆಗೆ ಸಂಬಂಧಿಸಿ ಬೀದಿ ನಾಟಕ ಹಮ್ಮಿ ಕೊಳ್ಳಲು, ಅಲಂಕಾರಿಕ ಮೀನು, ವಸ್ತು ಪ್ರದರ್ಶಿಸಲು, ಸಿರಿಧಾನ್ಯಗಳಿಂದ ಆಹಾರ ತಯಾರಿಸುವ ಪ್ರಾತ್ಯಕ್ಷಿಕೆ ನೀಡಲು ಆಯಾ ಇಲಾಖೆಗಳಿಗೆ ಸಲಹೆ ನೀಡಿದರು.
ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಯೋಜನಾಧಿಕಾರಿ, ಮಂಜುನಾಥ್, ಶಿರಾ ತಾಪಂ ಇಒ ಮೋಹನ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲಲಿತಾ ಕುಮಾರಿ ಇದ್ದರು.