Advertisement

ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರ ನಡೆಯಲಿ

12:31 AM Jul 23, 2022 | Team Udayavani |

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಬಿಬಿಎಂಪಿ ಸೇರಿದಂತೆ ಕೆಲವು ಮಹಾನಗರ ಪಾಲಿಕೆಗಳ ಅವಧಿ ಮುಗಿದು ಸುಮಾರು ಒಂದೂವರೆ ವರ್ಷವೇ ಕಳೆದುಹೋಗಿದೆ. ಮೀಸಲಾತಿ ನಿಗದಿ ಸೇರಿದಂತೆ ಒಂದಿಲ್ಲೊಂದು ಕಾರಣಗಳಿಂದಾಗಿ ಚುನಾವಣೆ ಮುಂದೂಡಿಕೆಯಾಗುತ್ತಲೇ ಇದೆ. ಮೊದಲಿಗೆ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ಗಳ ಗಡಿ ನಿಗದಿ, ಕ್ಷೇತ್ರ ಮರುವಿಂಗಡಣೆ ಹಾಗೂ ಬಿಬಿಎಂಪಿಯಲ್ಲಿ ವಾರ್ಡ್‌ಗಳ ಮರು ವಿಂಗಡಣೆ ನೆಪದಲ್ಲಿ ಚುನಾವಣ ದಿನಾಂಕ ಪ್ರಕಟವಾಗಿರಲಿಲ್ಲ.

Advertisement

ಇದರ ಮಧ್ಯೆಯೇ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿ ಮಾಡುವಂತೆ ಸೂಚಿಸಿದ್ದರಿಂದ ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಯಾಗಿತ್ತು. ಜತೆಗೆ ಮೀಸಲಾತಿ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ದೊಡ್ಡದೊಂದು ಹೋರಾಟವೇ ನಡೆದಿದೆ.

ಅಂದರೆ, ಕಳೆದ ಸೆಪ್ಟಂಬರ್‌ನಲ್ಲಿ ಮಹಾರಾಷ್ಟ್ರ ಸರಕಾರವು ಅಧ್ಯಾದೇಶ ಮೂಲಕ ಒಬಿಸಿ ವರ್ಗಕ್ಕೆ ಶೇ.27 ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಮಾಡಿತ್ತು. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಡಿ.6ರಂದು ಕೋರ್ಟ್‌ ಈ ಮೀಸಲಾತಿ ನಿರ್ಧಾರಕ್ಕೆ ತಡೆ ನೀಡಿ, ಡಿ.15ರಂದು ಮೀಸಲಾತಿ ಇಲ್ಲದೆಯೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ ನಲ್ಲಿ ವಾದ-ಪ್ರತಿವಾದ ಮುಂದುವರಿದು ಕಡೆಗೆ ಮಹಾ ಸರಕಾರವು ಬಂಥಿಯಾ ಆಯೋಗವನ್ನು ರಚಿಸಿ, ಇತರ ಹಿಂದುಳಿದ ವರ್ಗಕ್ಕೆ ಎಷ್ಟು ಮೀಸಲಾತಿ ನೀಡಬೇಕು ಎಂಬುದನ್ನು ನಿಗದಿಪಡಿಸಲು ಸೂಚಿಸಿತ್ತು. ಅದು ಮೊನ್ನೆಯಷ್ಟೇ ತನ್ನ ವರದಿ ಕೊಟ್ಟಿದ್ದು, ಇದನ್ನು ಸುಪ್ರೀಂಕೋರ್ಟ್‌ ನಲ್ಲಿ ಸಲ್ಲಿಕೆ ಮಾಡಲಾಗಿದೆ. ಎರಡು ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್‌, ಈ ವರದಿಯನ್ನು ಒಪ್ಪಿಕೊಂಡಿದ್ದು ಶೇ.27ರ ಮೀಸಲಾತಿಯಂತೆಯೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದು, ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣ ಆಯೋಗಕ್ಕೂ ಆದೇಶಿಸಿದೆ.

ಈ ಎಲ್ಲ ಬೆಳವಣಿಗೆಗಳು ಅತ್ತ ಆಗುತ್ತಿರುವಂತೆ, ಕರ್ನಾಟಕದಲ್ಲೂ ನ್ಯಾ| ಭಕ್ತವತ್ಸಲ ಸಮಿತಿ ಒಬಿಸಿ ಮೀಸಲಾತಿ ಸಂಬಂಧ ತನ್ನ ವರದಿ ನೀಡಿದೆ. ಈ ಪ್ರಕಾರವಾಗಿ ರಾಜ್ಯದಲ್ಲಿ ಒಬಿಸಿ ವರ್ಗಕ್ಕೆ ಶೇ.33ರಷ್ಟು ಮೀಸಲಾತಿ ನೀಡಬಹುದು ಎಂಬ ಶಿಫಾರಸು ನೀಡಿದ್ದು, ಇತರ ಹಿಂದುಳಿದವರಿಗೆ ರಾಜಕೀಯ ಮತ್ತು ಸಾಮಾಜಿಕವಾಗಿ ಮಾನ್ಯತೆ ಸಿಗದಿರುವುದನ್ನು ಪ್ರಸ್ತಾವಿಸಿದೆ. ಸದ್ಯ ರಾಜ್ಯದಲ್ಲಿ ಒಬಿಸಿ ವರ್ಗದವರಿಗೆ ಶೇ.27ರಷ್ಟು ಮೀಸಲಾತಿ ಇದೆ. ಈಗ ಇದನ್ನು ಶೇ.33ಕ್ಕೆ ಏರಿಕೆ ಮಾಡಿದ್ದು, ಎಸ್‌ಸಿ-ಎಸ್‌ಟಿ ಮೀಸಲಾತಿ ಸೇರಿ ಒಟ್ಟು ಶೇ.50ರಷ್ಟಾಗುತ್ತದೆ.

ನ್ಯಾ| ಭಕ್ತವತ್ಸಲ ಅವರ ಸಮಿತಿ ಹೇಳಿರುವಂತೆ ಹಿಂದುಳಿದ ವರ್ಗಗಳಿಗೆ ಈ ಮಟ್ಟದ ಮೀಸಲಾತಿ ನೀಡುವುದು ಸಮರ್ಥನೀಯವಾಗಿದೆ. ಇದರಿಂದ ರಾಜ್ಯದ ಜನಸಂಖ್ಯೆಯ ಶೇ.44ರಷ್ಟಿರುವ ಇತರ ಹಿಂದುಳಿದ ವರಿಗೆ ನ್ಯಾಯ ಸಿಕ್ಕಂತಾಗುತ್ತದೆ. ಇದರ ಜತೆಗೆ ಬಿಬಿಎಂಪಿಯಲ್ಲಿ ಇರುವ ಹಾಗೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಮೇಯರ್‌ ಮತ್ತು ಉಪ ಮೇಯರ್‌ ಹುದ್ದೆಯನ್ನು 30 ತಿಂಗಳಿಗೆ ಏರಿಕೆ ಮಾಡಬೇಕು ಎಂಬ ಶಿಫಾರಸು ಅರ್ಥಪೂರ್ಣವೇ ಆಗಿದೆ. ನ್ಯಾ| ಭಕ್ತವತ್ಸಲ ಸಮಿತಿಯ ವರದಿಯನ್ನು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರಕಾರ ಸಲ್ಲಿಕೆ ಮಾಡಬೇಕು. ಚುನಾವಣೆ ನಡೆಸಿ, ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳ ಅಧಿಕಾರವನ್ನು ಮತ್ತೆ ತರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next