ಬೆಂಗಳೂರು: ವಿದ್ಯಾವಂತ ಸಮುದಾಯವು ಅನ್ನದಾತನ ಕಷ್ಟಗಳಿಗೆ ನೆರವಾಗಬೇಕಿದೆ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.
ನಗರದ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ವತಿಯಿಂದ 2018-19ನೇ ಸಾಲಿನ ವಿದ್ಯಾರ್ಥಿ ನಿಲಯಗಳ ವಾರ್ಷಿಕೋತ್ಸವ ಸುಗ್ಗಿ-2019 ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಮ್ಮನ್ನೆಲ್ಲ ಸಾಕಿ ಸಲುವುತ್ತಿರುವವನು ನಾಡಿನ ಕೃಷಿಕ.
ಇಂದು ನಾವು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ್ದರೂ, ಒಂದು ರಾಗಿ, ಅಕ್ಕಿ, ಜೋಳದ ಕಾಳನ್ನು ತಯಾರಿಸಲು ಸಾಧ್ಯವಿಲ್ಲ. ಧಾನ್ಯಗಳು ಬೇಕು ಎಂದರೆ ರೈತರ ಕಡೆಯೇ ಮುಖ ಮಾಡಬೇಕು. ಬೆಲೆ ಏರಿಳಿತ, ಮಳೆಯ ಆಟದ ನಡುವೆ ಬೆಳೆ ಬೆಳೆಯುವ ಕಷ್ಟ ರೈತರಿಗೇ ಗೊತ್ತು. ಹಳ್ಳಿಯ ಜನ ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಶಿಕ್ಷಿತರ ಹೊಣೆಗಾರಿಕೆ ಜಾಸ್ತಿ. ಅವರ ಪರಿಶ್ರಮ ಅನುಭವಿಸುತ್ತಿರುವ ನಾವು, ಅವರಿಗೆ ಏನು ಕೊಡುತ್ತಿದ್ದೇವೆ ಎಂಬುದನ್ನು ನೋಡಬೇಕು. ರೈತ ಪರ ನಡೆ, ನಿಲುವುಗಳ ಮೂಲಕ ರೈತರ ಕಷ್ಟಗಳಿಗೆ ಕೈಲಾದಷ್ಟು ಸ್ಪಂದಿಸಬೇಕು ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಮಾತನಾಡಿ, ಪದವಿ ಪಡೆದರಿಗಿಂತ ಕೌಶಲ್ಯ ಹೊಂದಿದವರಿಗೆ ಆದ್ಯತೆ ಹೆಚ್ಚಿದೆ. ಆ ನಿಟ್ಟಿನಲ್ಲಿಯೇ ವಿದ್ಯಾರ್ಥಿಗಳು ಸಾಲು ಸಾಲಾಗಿ ಓದಿ ಪದವಿ ಪಡೆಯುವುದಕ್ಕಿಂತ ಕೌಶಲ್ಯ ಬೆಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೋ.ಚನ್ನಬಸಪ್ಪ ಅವರ ಸ್ಮರಣಾರ್ಥ ವಸತಿ ನಿಲಯದ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಅಧ್ಯಕ್ಷ ಎಲ್.ರೇವಣ್ಣಸಿದ್ದಯ್ಯ, ಕಾರ್ಯದರ್ಶಿ ಜಿ.ಪರಮಶಿವ, ಧರ್ಮದರ್ಶಿಗಳಾದ ಟಿ.ಬಿ.ರಾಜೇಶ್ವರ ಶಾಸ್ತ್ರಿ, ಪ್ರೊ.ಕೆ.ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.