Advertisement

ಕನಸಿನ ಬದುಕು ಹಾದಿ ತಪ್ಪದಿರಲಿ

02:59 PM Jun 13, 2020 | mahesh |

ಬದುಕು ಗೊಂದಲಗಳ ಗೂಡು. ಈಗಷ್ಟೇ ಡಿಗ್ರಿ ಎಂಬ ಬಣ್ಣದ ಬದುಕಿನಿಂದ ಹೊರಬಂದ ಯುವ ಮನದ ಹಕ್ಕಿಗಳಿಗೆ ತಮ್ಮದೇ ಗೂಡನ್ನು ಅಂದವಾಗಿ ಕಟ್ಟಿಕೊಳ್ಳಲು ನೂರೆಂಟು ಅಡ್ಡಿಗಳು. ತಮ್ಮದೇ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂಬ ಇಚ್ಛೆಯಿರುತ್ತದೆ. ತಿನ್ನೋ ತಿನಿಸಿನಿಂದ ಹಿಡಿದು, ಹಾಕೋ ಬಟ್ಟೆಯವರೆಗೆ ನಮ್ಮದೇ ಆಯ್ಕೆಗಳಿರುತ್ತವೆ. ಇನ್ನು ನನ್ನ ಜೀವನದಲ್ಲಿ ನಾನು ಏನು ಆಗಬೇಕು? ಯಾವ ಕ್ಷೇತ್ರದಲ್ಲಿ ಹೋದರೆ ನಾನು ಗಟ್ಟಿಯಾಗಿ ನಿಲ್ಲಬಹುದು? ನನ್ನ ಆಸಕ್ತಿ, ನನ್ನ ಮನೋಬಲ, ನನ್ನ ಮನೆಯ ಸ್ಥಿತಿಗತಿ, ಎಲ್ಲಕ್ಕಿಂತ ಹೆಚ್ಚು ನನ್ನ ಕನಸು…ಇವೆಲ್ಲವನ್ನೂ ತಲೆಯಲ್ಲಿಟ್ಟುಕೊಂಡು ದಿಟ್ಟ ನಿರ್ಧಾರಗಳನ್ನು ಸಮಯದ ಬೇಲಿಯೊಳಗೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ.

Advertisement

ನಾವು ಸಣ್ಣವರಿದ್ದಾಗ ಹೀಗೆ ಆಗುತ್ತಿರಲಿಲ್ಲ. ನೀಲಿ ಬಣ್ಣದ ರೈನ್‌ಕೋಟ್‌ ಬೇಕು ಅಂದರೆ, ಅದು ಸಿಗುವವರೆಗೂ ನಮ್ಮ ಹಠ ನಿಲ್ಲುತ್ತಿರಲಿಲ್ಲ. ಕಡೆಗೆ ನಮ್ಮ ಹಠವೇ ಗೆಲ್ಲುತ್ತಿತ್ತು. ಆದರೆ ಈಗ ಹಾಗೆ ಆಗಿಲ್ಲ. ನಮಗೆ ಜವಾಬ್ದಾರಿಗಳ ಅರಿವಿದೆ. ಅಪ್ಪ ಅಮ್ಮನ ಕಷ್ಟ ಅರ್ಥ ಈಗ ಅರ್ಥವಾಗುತ್ತಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆ ಆಗೋ ಅರ್ಹತೆನೂ ಇಲ್ದೇ ಹೋದ್ರೆ ಅನ್ನೋ ತೊಳಲಾಟ ಇದೆ. ಎಲ್ಲಕ್ಕಿಂತ ಹೆಚ್ಚು ಸಮಾಜದ ಭಯ ತುಂಬಾ ಕಾಡುತ್ತಿರುತ್ತದೆ. ಆದರೆ ಇವೆಲ್ಲದರ ಮಧ್ಯೆ ಆ ಹಠ ಎಲ್ಲಿ ಕಳೆದುಹೋಯ್ತು? ಮುಂಚೆ ಇದ್ದ “ನೀಲಿ ಬಣ್ಣದ್ದೇ ರೈನ್‌ಕೋಟ್‌ ಬೇಕು’ ಎಂಬ ನಿಚ್ಚಳವಾದ ಸ್ಪಷ್ಟತೆ ಎಲ್ಲಿ ಮಾಯ ಆಯ್ತು? ವಸ್ತುಗಳನ್ನ ಕೊಂಡು ಕೊಳ್ಳಬೇಕಾದರೆ ಅದೂ ಅಷ್ಟು ಸಣ್ಣ ವಯಸ್ಸಿನಲ್ಲಿ ಇರುತ್ತಿದ್ದ ಸ್ಪಷ್ಟತೆ, ಜೀವನ ಕಟ್ಟಕೊಬೇಕಾದ್ರೇ ಅದೂ ಈ ವಯಸ್ಸಿನಲ್ಲಿ ಇರಬೇಕಲ್ವಾ?
ಎಲ್ಲವೂ ನಾವು ಅಂದು ಕೊಂಡಂತೆ ನಡೆಯೋದಿಲ್ಲ ನಿಜ. ಆದರೆ ಸಾಧ್ಯತೆಗಳ ಬಗ್ಗೆ ನಮಗೆ ವಿಶ್ವಾಸವಿದ್ದರೆ ಯಾವುದನ್ನು ತಡೆಯೋಕೆ ಆಗಲ್ಲ. ಕಷ್ಟಪಟ್ಟು ಓದು ಆಮೇಲೆ ಆರಾಮವಾಗಿರಬಹುದು. ಎನ್ನುವ ಅಮ್ಮಂದಿರ ಮಾತು ಸುಳ್ಳು. ನಿಜವಾದ ಪ್ರಶ್ನೆಗಳು, ಕಷ್ಟಗಳು ಶುರುವಾಗುವುದು ಪಿಯುಸಿ ಮುಗಿದ ಮೇಲೆ. ನಮಗೆ ಬೇಕಾದ ಕೋರ್ಸ್‌, ವಿಷಯಗಳು, ಕಾಲೇಜು ಆರಿಸೋದ್ರಿಂದ ಹಿಡಿದು, ಅಲ್ಲಿ ಏನೋ ಸಾಧಿಸಿದ್ದೇವೆ ಅಂತ ಖುಷಿ ಪಡೋಷ್ಟರಲ್ಲೇ ನಮ್ಮ ಪದವಿ ಜೀವನ ಮುಗಿದಿರುತ್ತದೆ. ಪದವಿಯ ಅನಂತರ ಕೆಲವರು ಜಾಬ್‌ ಅಂತ ಹೋಗ್ತಾರೆ. ಇನ್ನು ಕೆಲವರು ಮನೆಯಲ್ಲಿರ್ತಾರೆ, ಮತ್ತೂಂದಿಷ್ಟು ಜನ ಮದುವೆ ಆಗ್ತಾರೆ, ಇನ್ನು ಕೆಲವರು ಮುಂದಿನ ಶಿಕ್ಷಣದ ಬಗ್ಗೆ ಯೋಚಿಸ್ತಾರೆ. ಇವೆಲ್ಲದರ ಮಧ್ಯೆ ಬೆರಳೆಣಿ ಕೆಯಷ್ಟು ಜನ ಮಾತ್ರ ತಮ್ಮ ಕನಸುಗಳನ್ನ ನನಸು ಮಾಡಿಕೊಳ್ಳುತ್ತಾರೆ. ಬದುಕಿನ ಗೊಂದಲಗಳ ಮಧ್ಯೆ ಕನಸುಗಳನ್ನು ಮರೆಯಬೇಡಿ. ನಮ್ಮ ಬದುಕಿನ ನಿರ್ಧಾರಗಳು ನಮ್ಮ ದೇ ಆಗಿರಲಿ. ಯಾಕೆಂದ್ರೆ ಎಲ್ಲರಕ್ಕಿಂತ ಹೆಚ್ಚು ನಮ್ಮ ಬಗ್ಗೆ ನಮಗೆ ಮಾತ್ರ ಗೊತ್ತಿರಲು ಸಾಧ್ಯ.

ಹತ್ತು ವರ್ಷ ಆದಮೇಲೆ ‘ನಾನು ಇನ್ನೇನೋ ಆಗಿರುತ್ತಿದ್ದೆ’ ಎಂಬ ಕೊರಗು ನಮ್ಮನ್ನು ಕಾಡಬಾರದು. ಆದರೆ ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆಯಿರಲಿ, ಕಡೇ ಪಕ್ಷ ನನಗೆ ಬೇಕಾದ ಹಾಗೆ ಬದುಕಿದೆ ಅನ್ನೋ ಸಮಾಧಾನವಾದ್ರೂ ಇರುತ್ತೆ. ಕನಸನ್ನ ತಲುಪೋ ಕಿಚ್ಚು ಕಣ್ಣುಗಳಲ್ಲಿರಲಿ, ಎಲ್ಲಕ್ಕಿಂತ ಹೆಚ್ಚು ನಿಮ್ಮ ಕನಸಿನ ದಾರಿಯಲ್ಲಿ ಒಬ್ಬರೇ ನಡಿಯಲು ತುಂಬು ಧೈರ್ಯವಿರಲಿ. ಹಟ ಮತ್ತು ಸ್ಪಷ್ಟತೆಯಂತೂ ಇರಲೇಬೇಕಲ್ವಾ?


– ಲಾವಣ್ಯ ಎನ್‌.ಕೆ.
ಎಕೊಸಾಫಿಕಲ್‌ ಏಸ್ತೆಟಿಕ್ಸ್‌, ವಿದ್ಯಾರ್ಥಿ, ಮಾಹೆ ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next