ದೊಡ್ಡಬಳ್ಳಾಪುರ: ಜಂಜಾಟದ ಬದುಕಿನಲ್ಲಿ ಆರೋಗ್ಯ ಕಾಳಜಿ ಕಡಿಮೆಯಾಗುತ್ತಿದೆ. ಇದರಿಂದಾಗಿ ವಿವಿಧ ರೀತಿಯ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್ ಹೇಳಿದರು.
ನಗರದ ದಿ ಲೀಗಲ್ ಫೊಫೆಷನಲ್ಸ್ ಪೋರಂ, ಆಕಾಶ್ ಆಸ್ಪತ್ರೆ ಹಾಗೂ ಶ್ರೀರಾಮ ಆಸ್ಪತ್ರೆ ನಾಡ ಪ್ರಭು ಕೆಂಪೇಗೌಡರ ಸ್ಮರಣಾರ್ಥ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಸೇವೆಗಳು ದುಬಾರಿಯಾಗುತ್ತಿವೆ. ಜನ ಸಾಮಾನ್ಯರ ಸಹಾಯಕ್ಕೆ ವೈದ್ಯರು ಮುಂದಾಗಬೇಕು. ಸಮಾಜದಲ್ಲಿ ವೈದ್ಯರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಕಡೆಗೆ ವೈದ್ಯರು ಪ್ರಯತ್ನಿಸಬೇಕು ಎಂದು ಹೇಳಿದರು.
ಶ್ರೀರಾಮ ಆಸ್ಪತ್ರೆಯ ಡಾ.ಎಚ್.ಜಿ.ವಿಜಯ್‌ಕುಮಾರ್ ಮಾತನಾಡಿ, ಧೂಮಪಾನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಪರಿಣಾಮ ಇವತ್ತು ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒತ್ತಡದ ಬದುಕಿನಿಂದಾಗಿ ಮಾನಸಿಕ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆಯು ಮಿತಿ ಮೀರುತ್ತಿದೆ. ವಿದೇಶಗಳಲ್ಲಿ ಮಾತ್ರ ಮಾನಸಿಕ ಒತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿತ್ತು.
ಆದರೆ, ಈಗ ತಮ್ಮಲ್ಲೂ ಮಾನಸಿಕ ರೋಗಿಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ತಮ್ಮ ಕೈಯಲ್ಲೇ ಇದೆ. ಆದರೆ, ಇದರ ಕಡೆಗೆ ಕಾಳಜಿ ವಹಿಸುವುದಿಲ್ಲ. ಆರೋಗ್ಯ ಕೆಟ್ಟಾಗ ಮಾತ್ರ ಆಸ್ಪತ್ರೆ ಕಡೆಗೆ ಹೋಗುತ್ತೇವೆ. ಆದರೆ, ಚೆನ್ನಾಗಿದ್ದಾಗಲೂ ಕನಿಷ್ಠ ವರ್ಷದಲ್ಲಿ ಎರಡು ಬಾರಿಯಾದರೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಕಳೆದ ಒಂದು ತಿಂಗಳಿಂದ ಇತ್ತೀಚೆಗೆ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಡೆಂಘೀ ಜ್ವರಕ್ಕೆ ಮುಂಜಾಗ್ರತೆಯೇ ಮುಖ್ಯವಾಗಿದೆ. ಇದರ ಕಡೆಗೆ ಸಾಮೂಹಿಕ ಪ್ರಯತ್ನ ಮುಖ್ಯ ಎಂದರು. ದಿ ಲೀಗಲ್ ಫೊàಫೆಷನಲ್ಸ್ ಫೋರಂನ ಅಧ್ಯಕ್ಷ ಎ.ಆರ್.ನಾಗರಾಜನ್ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯಾಧೀಶರಾದ ಎಂ.ಬಿ.ಕುಲಕರ್ಣಿ, ದ್ಯಾವಪ್ಪ, ಶ್ರೀಕಾಂತ್ ರವೀಂದ್ರ, ಆಕಾಶ್ ಆಸ್ಪತ್ರೆ ಡಾ.ಸುನೀಲ್‌ಕುಮಾರ್, ಫೋರಂನ ಪ್ರಧಾನ ಕಾರ್ಯದರ್ಶಿ ಬಿ.ಕೆ.ಕನಕರಾಜ್, ಉಪಾಧ್ಯಕ್ಷ ಸೈಯ್ಯದ್‌ನಿಸಾರ್‌ಉಲ್ಲಾ, ಖಜಾಂಚಿ ಸಿ.ಪ್ರಕಾಶ್, ನಿರ್ದೇಶಕರಾದ ಎಂ.ಎನ್.ಲಕ್ಷ್ಮೀನಾರಾಯಣ್, ಜೆ.ಬಿ.ದಿನೇಶ್, ಎಂ.ಮೋಹನ್‌ಕುಮಾರ್, ಗಂಗಯ್ಯ, ಆರ್.ಡಿ.ಪ್ರಕಾಶ್, ಮುನಿರಾಜು, ಎಂ.ರಾಧಮ್ಮ ಉಪಸ್ಥಿತರಿದ್ದರು.