Advertisement

ಬೇರೆ ಇಲಾಖೆಗಳಿಗೆ ಇಂಧನ ಇಲಾಖೆ ಮೇಲ್ಪಂಕ್ತಿಯಾಗಲಿ

12:01 AM Feb 08, 2022 | Team Udayavani |

ಇಂಧನ ಇಲಾಖೆಯ ಹುದ್ದೆಯಲ್ಲಿ ಅರ್ಹತೆ ಪಡೆಯಬೇಕಾದರೆ ಕನ್ನಡದಲ್ಲಿ ಶೇ.50ರಷ್ಟು ಅಂಕ ಪಡೆದಿರಲೇಬೇಕು ಎಂಬ ಆದೇಶ ಇತರ ಇಲಾಖೆಗಳಿಗೂ ದಾರಿದೀಪವಾಗಿದ್ದು, ಇದೊಂದು ಅತ್ಯುತ್ತಮ ನಿರ್ಧಾರವಾಗಿದೆ. ಸರಕಾರಿ ಹುದ್ದೆಗಳಲ್ಲಿ ಕನ್ನಡವನ್ನು ಅವಗಣಿಸಲಾಗುತ್ತಿದೆ ಎಂಬ ಮಾತುಗಳ ನಡುವೆಯೇ ಇಂಧನ ಇಲಾಖೆಯ ಈ ನಿರ್ಧಾರ ಅತ್ಯಂತ ಮಹತ್ವದ್ದು ಎಂದೇ ಹೇಳಬೇಕಾಗುತ್ತದೆ.

Advertisement

ಬಹು ಹಿಂದಿನಿಂದಲೂ ಬ್ಯಾಂಕಿಂಗ್‌ ಮತ್ತು ರೈಲ್ವೇ ಇಲಾಖೆಯ ಉದ್ಯೋಗಗಳಲ್ಲಿ ಕನ್ನಡಿಗರನ್ನು ಅವಗಣಿಸಲಾಗುತ್ತಿದೆ ಎಂಬ ಆರೋಪಗಳು ಇದ್ದವು. ಈಗಲೂ ಈ ಆರೋಪ ಹಾಗೆಯೇ ಜೀವಂತವಾಗಿವೆ. ರಾಜ್ಯದ ಬ್ಯಾಂಕಿಂಗ್‌ ಹುದ್ದೆಗಳಿಗೂ ಹಿಂದಿ ಭಾಷೆಯ ರಾಜ್ಯಗಳಿಂದ ಬರುವಂಥವರಷ್ಟೇ ಉದ್ಯೋಗ ಪಡೆಯುತ್ತಿದ್ದಾರೆ ಎಂಬ

ಆರೋಪಗಳಿವೆ. ಹಾಗೆಯೇ ರೈಲ್ವೇ ಇಲಾಖೆಯ ಉದ್ಯೋಗಗಳಲ್ಲೂ ಹಿಂದಿ ಬರುವವರಿಗಷ್ಟೇ ಆದ್ಯತೆ ನೀಡಲಾಗುತ್ತಿದೆ. ಇಲ್ಲಿ ಪ್ರಾದೇಶಿಕ ಭಾಷೆಗಳನ್ನು ಅವಗಣಿಸಲಾಗುತ್ತಿದೆ ಎಂಬ ಆಪಾದನೆಗಳಿವೆ. ಈ ಸಂಬಂಧ ಕನ್ನಡ ಸಂಘಟನೆಗಳು ಹೋರಾಟ ನಡೆಸಿಕೊಂಡು ಬಂದಿದ್ದು, ಕರ್ನಾಟಕದಲ್ಲಿ ಕನ್ನಡಿಗರಿಗಷ್ಟೇ ಉದ್ಯೋಗ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಲೇ ಇದೆ.

ಇದರ ಮಧ್ಯೆಯೇ ರಾಜ್ಯದ ಇಂಧನ ಇಲಾಖೆ, ಕನ್ನಡವನ್ನು ಉಳಿಸಿ ಬೆಳೆಸುವ ಸಲುವಾಗಿ ಅತ್ಯಂತ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕನ್ನಡ ಬರದೇ ಇರುವವರು ಅಥವಾ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ, ಪದವಿ ಹಂತದಲ್ಲಿ ಕನ್ನಡವನ್ನು ಐಚ್ಛಿಕ ಭಾಷೆಯಾಗಿ ಕಲಿಯದೇ ಇರುವವರು ಇಂಧನ ಇಲಾಖೆಯ ಉದ್ಯೋಗಕ್ಕಾಗಿ ನಡೆಯುವ ಪರೀಕ್ಷೆಯಲ್ಲಿ ಕನ್ನಡದ ಪರೀಕ್ಷೆ ಬರೆಯಬೇಕು. ಅಷ್ಟೇ ಅಲ್ಲ, ಇದರಲ್ಲಿ ಶೇ.50ರಷ್ಟು ಅಂಕ ಪಡೆಯಲೇಬೇಕು ಎಂಬ ನಿಯಮ ಮಾಡಿದೆ.

ಈ ನಿರ್ಧಾರದಿಂದಾಗಿ ಇಂಧನ ಇಲಾಖೆಯ ಪರೀಕ್ಷೆಯನ್ನು ಬರೆಯುವವರಿಗೆ ಕಡ್ಡಾಯವಾಗಿ ಕನ್ನಡ ಬರಲೇಬೇಕು ಮತ್ತು ಕಡ್ಡಾಯವಾಗಿ ಕಲಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದಂತಾಗುತ್ತದೆ.

Advertisement

ಇಂಥ ಉತ್ತಮ ನಿರ್ಧಾರಗಳು ಕೇವಲ ಇಂಧನ ಇಲಾಖೆಗಷ್ಟೇ ಸೀಮಿತವಾಗಬಾರದು. ಇದು ರಾಜ್ಯದ ಇತರ ಇಲಾಖೆಗಳಿಗೂ ವಿಸ್ತರಿಸಬೇಕು. ಅಂದರೆ ರಾಜ್ಯದಲ್ಲಿರುವ ಎಲ್ಲ ಇಲಾಖೆಗಳ ಪರೀಕ್ಷೆ ವೇಳೆಯೂ ಕನ್ನಡದ ಅರ್ಹತ ಪರೀಕ್ಷೆ ನಡೆಸಬೇಕು. ಎಲ್ಲ ಇಲಾಖೆಗಳ ಉದ್ಯೋಗ ನೇಮಕಾತಿ ವೇಳೆ ಕನ್ನಡಕ್ಕೆ ಹೆಚ್ಚಿನ ಮನ್ನಣೆ ಕೊಡಬೇಕು. ಕನ್ನಡ ಕಲಿತವರಿಗೇ ಉದ್ಯೋಗ ಎಂಬ ನಿಯಮ ಮಾಡಬೇಕು. ಈ ರೀತಿ ಮಾಡಿದಲ್ಲಿ ಸ್ಥಳೀಯರಿಗೆ ಮೀಸಲಾತಿ ಬೇಕು ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಏಕೆಂದರೆ ಕನ್ನಡ ಬಲ್ಲವರೇ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಕೆಲಸವನ್ನೂ ಪಡೆಯುತ್ತಾರೆ.

ಇದರ ಜತೆಗೆ ಕೇಂದ್ರ ಸರಕಾರದ ಸಂಸ್ಥೆಗಳ ಪರೀಕ್ಷೆಗಳಲ್ಲೂ,ಕರ್ನಾಟಕಕ್ಕಾಗಿ ಆಯ್ಕೆ ಮಾಡಿಕೊಳ್ಳುವಾಗ ಕನ್ನಡ ಬಲ್ಲವರೇ ಕೆಲಸ ಪಡೆಯುವಂತಾಗಲು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಆಗ ಬ್ಯಾಂಕಿಂಗ್‌ ಮತ್ತು ರೈಲ್ವೇ ಪರೀಕ್ಷೆಗಳಲ್ಲೂ ಹೆಚ್ಚಿನ ಕನ್ನಡಿಗರು ಆಯ್ಕೆಯಾದಂತಾಗುತ್ತದೆ. ಇದು ಕೇವಲ

ಕನ್ನಡಕ್ಕಷ್ಟೇ ಅಲ್ಲ, ಎಲ್ಲ  ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವವರಿಗೂ ಅನುಕೂಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next