Advertisement

ದೇಶಕ್ಕೊಂದೇ ಆರೋಗ್ಯ ನೀತಿ ಇರಲಿ

10:13 AM Jan 30, 2018 | Team Udayavani |

ನವದೆಹಲಿ: ವೈದ್ಯಕೀಯ ಪರೀಕ್ಷಾ ಶುಲ್ಕದಲ್ಲಿ ಅಗಾಧ ಪ್ರಮಾಣದ ವ್ಯತ್ಯಾಸದ ಬಗ್ಗೆ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಸದ್ಯ ದೇಶದಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಶೇ.1000 ದಷ್ಟು ವ್ಯತ್ಯಾಸದ ಶುಲ್ಕವಿದೆ. ಅಂದರೆ ಒಂದು ಕಡೆ ಪರೀಕ್ಷೆಯೊಂದಕ್ಕೆ ಕೇವಲ 99 ರೂ.ಗಳಿದ್ದರೆ, ಮತ್ತೂಂದು ಕಡೆ ಇದೇ ಪರೀಕ್ಷೆಗೆ 500 ರಿಂದ 1000 ರೂ.ಗಳ ವರೆಗೆ ಶುಲ್ಕ ಹಾಕಲಾಗುತ್ತದೆ. ಇಂಥ ವ್ಯತ್ಯಾಸಗಳು ತಪ್ಪಬೇಕು, ದೇಶಕ್ಕೊಂದೇ ವೈದ್ಯಕೀಯ ಪರೀಕ್ಷಾ ದರವನ್ನು ನಿಗದಿ ಮಾಡಬೇಕು ಎಂದು ಸಮೀಕ್ಷೆ ಸಲಹೆ ನೀಡಿದೆ. 

Advertisement

ಅಂದರೆ, ದೇಶದೆಲ್ಲೆಡೆ ಲಿಕ್ವಿಡ್‌ ಪ್ರೊಫೈಲ್‌ ಪರೀಕ್ಷೆಗೆ ಕನಿಷ್ಠ 90 ರೂ. ಗಳಿದ್ದರೆ, ಗರಿಷ್ಠ 7110 ರೂ.ಗಳಿವೆ. ಆದರೆ, ಈ ಪರೀಕ್ಷೆಗೆ ಇರುವ ಅಂದಾಜು ಮೊತ್ತ 217 ರೂ.ಗಳಿಂದ 759 ರೂ. ಮಾತ್ರ. ಹಾಗೆಯೇ ಎಎನ್‌ಸಿ ಪರೀಕ್ಷೆಗೆ ಕನಿಷ್ಠ 110 ರೂ.ಗಳಿದ್ದರೆ, ಗರಿಷ್ಠ 6500 ರೂ. ವಸೂಲಿ ಮಾಡಲಾಗುತ್ತಿದೆ. ಇನ್ನು ಥೈರಾಯ್ಡ ಪರೀಕ್ಷೆಗೆ ಕನಿಷ್ಠ 100 ರೂ. ಇದ್ದರೆ, ಗರಿಷ್ಠ 3100 ರೂ.ಗಳನ್ನು ಪಡೆಯಲಾಗುತ್ತಿದೆ. ಹೀಗಾಗಿ ದೇಶಕ್ಕೆ ಒಂದೇ ರೀತಿಯ ವೈದ್ಯಕೀಯ ಪರೀಕ್ಷಾ ಶುಲ್ಕಗಳಿದ್ದರೆ ಆರೋಗ್ಯ ಸೇವೆಗಳ ಮೇಲಿನ ಜನರ ವೆಚ್ಚ ಕಡಿಮೆಗೊಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. 

ಸಾರ್ವತ್ರಿಕ ಮೂಲ ವೇತನ ಜಾರಿಗೆ ಸಲಹೆ: ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಸಾರ್ವತ್ರಿಕ ಮೂಲ ವೇತನ ಜಾರಿ ಬಗ್ಗೆ ಆರ್ಥಿಕ ಸಮೀಕ್ಷೆ-2018ರಲ್ಲಿ ಒಲವು ವ್ಯಕ್ತವಾಗಿದೆ. ಆದರೆ, ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಕನಿಷ್ಠ ಒಂದು ಅಥವಾ ಎರಡು ರಾಜ್ಯಗಳಲ್ಲಾದರೂ ಪ್ರಾಯೋಗಿಕವಾಗಿ ಜಾರಿ ಮಾಡಬಹುದು ಎಂದು ಮುಖ್ಯ ಹಣಕಾಸು ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಸಲಹೆ ನೀಡಿದ್ದಾರೆ. ಈ ಮೂಲಕ ಎಲ್ಲ ರೀತಿಯ ಜನರಿಗೂ ಕನಿಷ್ಠ ವೇತನ ನೀಡಿ, ಬಡತನದಿಂದ ನರಳುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಕಚ್ಚಾ ತೈಲ ದರದ ಬಗ್ಗೆ ಎಚ್ಚರವಿರಲಿ: ದೇಶದ ಜಿಡಿಪಿ ದರ ಹೆಚ್ಚುವ ಬಗ್ಗೆ ಭವಿಷ್ಯ ನುಡಿದರೂ ಇಲ್ಲೊಂದು ಆತಂಕದ ವಿಷಯವನ್ನೂ ವಿತ್ತ ಸಮೀಕ್ಷೆಯಲ್ಲಿ ಮುಂದಿ ಡಲಾಗಿದೆ. ಸದ್ಯ ಜಾಗತಿಕ ವಿದ್ಯಮಾನಗಳಿಂದಾಗಿ ಕಚ್ಚಾ ತೈಲದ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ವಾಗಿ ಏರಿಕೆಯಾಗುತ್ತಿದೆ. ಇದು ಹಣದುಬ್ಬರಕ್ಕೂ ಕಾರಣವಾಗಿ, ಜಿಡಿಪಿ ಮೇಲೂ ವ್ಯತಿರಿಕ್ತ ಪರಿಣಾಮಬೀರಬಹುದು ಎಂದು ಅಂದಾಜಿಸಲಾಗಿದೆ. ಜತೆಗೆ ಚುನಾವಣಾ ವರ್ಷದಲ್ಲಿ ಯಾವುದೇ ಜನಪ್ರಿಯ ಯೋಜನೆಗಳಿಗೆ ಮಾರು ಹೋಗದೇ, ವಿತ್ತೀಯ ಶಿಸ್ತನ್ನೂ ಕಾಪಾಡಿಕೊಳ್ಳಬೇಕು. ಷೇರು ಮಾರುಕಟ್ಟೆಯ ದಿಢೀರ್‌ ಏರಿಕೆ ಅಥವಾ ದಿಢೀರ್‌ ಕುಸಿತದ ಬಗ್ಗೆಯೂ ಗಮನಹರಿಸಬೇಕು ಎಂದು ಈ ವರದಿ ಹೇಳಿದೆ. 

ವಿತ್ತ ಸಮೀಕ್ಷೆಗೆ ಗುಲಾಬಿ ಬಣ್ಣ
ಈ ಬಾರಿಯ ಆರ್ಥಿಕ ಸಮೀಕ್ಷೆಗೆ ಗುಲಾಬಿ ಬಣ್ಣದ ಹೊದಿಕೆ. ಇದರ ಬಗ್ಗೆ ವಿಶೇಷವಾಗಿ ಮಾತನಾಡಿದ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು, ಇಂದಿಗೂ ಭಾರತದಲ್ಲಿರುವ ಲಿಂಗ ತಾರತಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಲಿಂಗ ಸಮಾನತೆ ಬಗ್ಗೆ ಒತ್ತಿ ಹೇಳುವ ಸಲುವಾಗಿಯೇ ವಿತ್ತ ಸಮೀಕ್ಷೆಯ ಪುಸ್ತಕದ ಹೊದಿಕೆಗೆ ಗುಲಾಬಿ ಬಣ್ಣ ನೀಡಲಾಗಿದೆ ಎಂದರು. ಅಲ್ಲದೆ ಸದ್ಯ ಜಗತ್ತಿನಾದ್ಯಂತ ಮಹಿಳೆಯ ವಿರುದ್ಧದ ಲೈಂಗಿಕ ಕಿರುಕುಳ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಸಾಥ್‌ ನೀಡುವ ಕ್ರಮವೂ ಇದಾಗಿದೆ ಎಂದರು. ಇದರ ಜತೆಗೆ, ಇಂದಿಗೂ ಭಾರತದಲ್ಲಿ “ಮಗನೇ ಹುಟ್ಟಲಿ’ ಎಂದು ಕಾಯುತ್ತಾ ಕುಳಿತುಕೊಳ್ಳುವವರ ಪ್ರಮಾಣವೂ ಹೆಚ್ಚಿದೆ. ಹೀಗಾಗಿ ಯಾರಿಗೂ ಬೇಡವಾದ 2.10 ಕೋಟಿ ಹೆಣ್ಣು ಮಕ್ಕಳು ಹುಟ್ಟಿವೆ. ಆದರೆ ಒಮ್ಮೆ ಹೆಣ್ಣು ಮಕ್ಕಳು ಹುಟ್ಟಿದರೂ ನಂತರ, ಅವರನ್ನು ಚೆನ್ನಾಗಿ ಸಾಕುತ್ತಾರೆ ಎಂದು ಈ ಸಮೀಕ್ಷೆಯಲ್ಲಿ ಅಭಿಪ್ರಾಯಿಸಲಾಗಿದೆ. ಇದರ ಜತೆಗೆ 6.3 ಕೋಟಿ ಕಣ್ಮರೆಯಾದ ಮಹಿಳೆಯರೂ ದೇಶದಲ್ಲಿದ್ದಾರೆ ಎಂದು ಇದೇ ಸಮೀಕ್ಷೆಯಲ್ಲಿ ಹೇಳಲಾಗಿದೆ. ಅಂದರೆ, ಇವರ್ಯಾರೂ ಎಲ್ಲೂ ಹೋಗಿಲ್ಲ, ಆದರೆ ಕುಟುಂಬದಲ್ಲಿನ ನಿರ್ಧಾರ, ಸ್ವಂತ ಆಯ್ಕೆ ಸೇರಿದಂತೆ ಮಹತ್ವದ ತೀರ್ಮಾನಗಳಲ್ಲಿ ಇವರ ಪಾತ್ರ ಇರುವುದಿಲ್ಲ. ಹೀಗಾಗಿ ಇಂದಿಗೂ ಭಾರತ ಪುರುಷ ಪ್ರಧಾನ ದೇಶವಾಗಿಯೇ ಉಳಿದಿದೆ ಎಂದಿದೆ.

Advertisement

“ತಲಾಖ್‌’ ಬೆಂಬಲಕ್ಕಾಗಿ ಪ್ರಧಾನಿ ಮನವಿ
ಉತ್ತಮ ಮಸೂದೆಗಳ ಜಾರಿ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತ್ರಿವಳಿ ತಲಾಖ್‌ ಜಾರಿಗಾಗಿ ಸರ್ವಪಕ್ಷಗಳೂ ಒಮ್ಮತದ ಬೆಂಬಲ ನೀಡಬೇಕೆಂದು ಕಳಕಳಿಯ ಮನವಿ ಮಾಡಿದ್ದಾರೆ. ಬಜೆಟ್‌ ಅಧಿವೇಶನದ ಮೊದಲ ದಿನವಾದ ಸೋಮವಾರ, ಸಂಸತ್‌ ಭವನದ ಹೊರಗೆ ಮಾತನಾಡಿದ ಅವರು, “”ತ್ರಿವಳಿ ತಲಾಖ್‌ಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಸಿಕ್ಕರೂ, ಆ ಮಸೂದೆಯು ಕಳೆದ ಸಂಸತ್‌ ಅಧಿವೇಶನದಲ್ಲಿ ಅನುಮೋದನೆಗೊಳ್ಳಲಿಲ್ಲ. ಈ ಬಾರಿ, ಮಸೂದೆಗೆ ಸರ್ವ ಪಕ್ಷಗಳೂ ಬೆಂಬಲಿಸಿದರೆ, 2018ರಲ್ಲಿ ನಾವು ಮುಸ್ಲಿಂ ಮಹಿಳೆಯರಿಗೆ ಉತ್ತಮ ಉಡುಗೊರೆ ಕೊಟ್ಟಂತಾಗುತ್ತದೆ” ಎಂದರು. 

ಸದನದಲ್ಲಿ ಸನ್ನಿ ಡೈಲಾಗ್‌ 
ಸದನದಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಕೇವಲ ಅಂಕಿ-ಅಂಶಗಳಲ್ಲದೇ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಡೈಲಾಗ್‌, ಮನೋಜ್‌ ಕುಮಾರ್‌ ಹಾಡು ಕೂಡ ಪ್ರಸ್ತಾಪವಾಯಿತು. ಹೇಗೆಂದು ಯೋಚಿಸುತ್ತಿದ್ದೀರಾ? ಸರ್ಕಾರವು ಉದ್ದಿಮೆ ಸ್ನೇಹಿ ವಾತಾವರಣ ನಿರ್ಮಿಸುತ್ತಿದ್ದರೆ, ಅವುಗಳಿಗೆ ಸಂಬಂಧಿಸಿದ ಕೇಸುಗಳು ನ್ಯಾಯಾಂಗದಲ್ಲಿ ಇನ್ನೂ ಇತ್ಯರ್ಥವಾಗದೇ ಉಳಿದಿದೆ ಎಂಬುದನ್ನು ಹೇಳುವಾಗ ಬಾಲಿವುಡ್‌ ಬ್ಲಾಕ್‌ಬಸ್ಟರ್‌ “ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್‌ ಅವರ “ತಾರಿಖ್‌ ಪರ್‌ ತಾರಿಖ್‌, ತಾರಿಖ್‌ ಪರ್‌ ತಾರಿಖ್‌’ ಎಂಬ ಡೈಲಾಗ್‌ ಅನ್ನು ಪ್ರಸ್ತಾಪಿಸಲಾಯಿತು. ಅಷ್ಟೇ ಅಲ್ಲ, ಮತ್ತೂಂದು ಕಡೆ ಕೃಷಿ ಮತ್ತು ಹವಾಮಾನ ವೈಪರೀತ್ಯದ ವಿಚಾರ ಬಂದಾಗ, ಮನೋಜ್‌ ಕುಮಾರ್‌ ಅವರ ಉಪಕಾರ್‌ ಚಿತ್ರದ – “ಮೇರೇ ದೇಶ್‌ ಕಿ ಧರ್ತಿ ಸೋನಾ ಉಗ್ಲೆ ಉಗ್ಲೆ ಹೀರೇ ಮೋತಿ’ ಹಾಡನ್ನೂ ಸಮೀಕ್ಷೆಯಲ್ಲಿ ಉಲ್ಲೇಖೀಸಿದ್ದು ಕಂಡುಬಂತು.

ಷೇರು ಹೊಸ ದಾಖಲೆ
ಅತ್ತ ಆರ್ಥಿಕ ಸಮೀಕ್ಷಾ ವರದಿಯು ದೇಶದ ಜಿಡಿಪಿ ಶೇ.7ರಿಂದ 7.5ಕ್ಕೇರುವ ನಿರೀಕ್ಷೆಯನ್ನು ಹೊರಹಾಕುತ್ತಲೇ ಮುಂಬೈ ಷೇರುಪೇಟೆಯಲ್ಲಿ ಸಂಚಲನ ಸೃಷ್ಟಿಯಾಯಿತು. ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ವಹಿಸಿದ ಕಾರಣ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ 233 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 36,282ರಲ್ಲಿ ಕೊನೆಗೊಂಡಿತು. ಇಷ್ಟೊಂದು ಮೊತ್ತದಲ್ಲಿ ವಹಿವಾಟು ಅಂತ್ಯಗೊಂಡಿದ್ದು ಇದೇ ಮೊದಲು. ಇನ್ನೊಂದೆಡೆ, ನಿಫ್ಟಿ ಕೂಡ ದಾಖಲೆ ಮಾಡಿದ್ದು, 60 ಅಂಕ ಏರಿಕೆ ಕಂಡು, 11,130ರಲ್ಲಿ ಅಂತ್ಯಗೊಂಡಿತು. ಈ ಮೂಲಕ ಜ.24ರಂದು ನಿಫ್ಟಿ 11,086ರಲ್ಲಿ ವಹಿವಾಟು ಅಂತ್ಯಗೊಳಿಸುವ ಮೂಲಕ ಸೃಷ್ಟಿಸಿದ್ದ ದಾಖಲೆಯನ್ನು ಸರಿಗಟ್ಟಿತು.

ರಾಷ್ಟ್ರಪತಿ ಭಾಷಣಕ್ಕೆ ಸೋನಿಯಾ ಮೆಚ್ಚುಗೆ
ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭಾಷಣಕ್ಕೆ ಮೇಜು ತಟ್ಟಿ ವ್ಯಕ್ತಪಡಿಸಿದ್ದಾರೆ. ಜತೆಗೆ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಜತೆಗೆ ಮಾತುಕತೆ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಗಣರಾಜ್ಯ ದಿನದಂದು ಆರನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ಪಕ್ಷ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಂತೆಯೇ ಸೋಮವಾರ ಈ ಬೆಳವಣಿಗೆ ನಡೆದಿದೆ. ಸಂಸತ್‌ನ ಸೆಂಟ್ರಲ್‌ ಹಾಲ್‌ನ ಮೊದಲ ಸಾಲಿನಲ್ಲಿ ಕುಳಿತಿದ್ದ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಅವರನ್ನು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಆತ್ಮೀಯವಾಗಿ ಸ್ವಾಗತಿಸಿದರು. ಮೊದಲ ಸಾಲಿನಲ್ಲಿ ಆಸೀನರಾಗಿದ್ದ ಸೋನಿಯಾ ಅಡ್ವಾಣಿ ಜತೆಗಲ್ಲದೆ, ಖರ್ಗೆ ಜತೆಗೂ ಮಾತುಕತೆ ನಡೆಸಿದ್ದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next