ಕೊಪ್ಪಳ: ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳು ಎಲ್ಲ ಮಹಿಳೆಯರಿಗೂ ತಲುಪಲಿ. ಅವರು ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ಅಂದಾಗ ಮಾತ್ರ ಯೋಜನೆ ಜಾರಿ ತಂದಿದ್ದು ಸಾರ್ಥಕವಾಗಲಿದೆ. ಅದಕ್ಕಾಗಿ ನಿಗಮವು ಸದಾ ಸಿದ್ಧವಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳೆ ಹೇಳಿದರು.
ನಗರದ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ರವಿವಾರ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳು ಹಾಗೂ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದೆ ಎಂದು ರಾಜ್ಯ ಸರ್ಕಾದ ಅರಿತಿದೆ. ನಾನು ಇದೇ ಭಾಗದವಳು. ಇಲ್ಲಿನ ಸಮಸ್ಯೆಗಳ ಅರಿವಿದೆ. ಗ್ರಾಪಂ, ತಾಪಂ, ಜಿಪಂ ಹಂತದಲ್ಲಿ ಮಹಿಳಾ ಸಮಸ್ಯೆ ಏನಿದೆ ಎನ್ನುವುದು ಗೊತ್ತು. ಮಹಿಳೆ ನಮ್ಮ ನಿಗಮ್ಮೆ ಬಂದು ತನ್ನ ನೋವು ಹೇಳದ ಸ್ಥಿತಿಯಲ್ಲಿದ್ದಾಳೆ. ನಾವು ಅವರ ನೆರವಿಗೆ ಬರಲಿದ್ದೇವೆ. ಸಬ್ಸಿಡಿಗಾಗಿ ಲಾಭ ಪಡೆಯಬೇಡಿ. ನಮ್ಮಲ್ಲಿ ಛಲ ಇರಬೇಕು. ಗಟ್ಟಿತನ ಇರಬೇಕು. ಛಲದಿಂದ ಮುಂದೆ ಬರಬೇಕು. ನಿಗಮದಿಂದ ಸರ್ಕಾರ ಹಲವು ಯೋಜನೆ ಜಾರಿ ಮಾಡಿದೆ. ಕಾಟಾಚಾರಕ್ಕೆ ಯೋಜನೆ ಲಾಭ ಪಡೆದು ಕೈ ಬಿಡಬೇಕು. ನಿಗಮ ನಿಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಉಪವಾಸ ಇದ್ದವರಿಗೆ ಊಟ ಮಾಡಿಸುವುದು ನಮ್ಮ ನಿಗಮದ ಗುರಿಯಾಗಿದೆ. ಸಣ್ಣ ಯಂತ್ರ ಇಟ್ಟು ಜೀವನ ಕಟ್ಟುವ ಕೆಲಸ ಮಾಡಲು ನಿಗಮವು ನೆರವಾಗಲಿದೆ ಎಂದರು.
ಒಬ್ಬರೂ ಇನ್ನೊಬ್ಬರಿಗೆ ಸೌಲಭ್ಯ ಪಡೆಯಲು ತಿಳಿಸಬೇಕು. ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಇಲ್ಲಿ ದೇವದಾಸಿಮಹಿಳೆಯರೂ ಇದ್ದಾರೆ. ಅವರು ಇಂದಿಗೂ ಶೆಡ್‌ನಲ್ಲೇ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ನಿಗಮವೂ ಯೋಚನೆ ಮಾಡಿದೆ. ದೇವದಾಸಿಯರಿಗೆ ನಿವೇಶನ ಕೊಡಲು ಕ್ರಮ ವಹಿಸಲಾಗುವುದು. ನಿಗಮದಿಂದ ಬರುವ ಬಜೆಟ್‌ನಲ್ಲಿ ನಿವೇಶನದ ಕುರಿತು ಚರ್ಚೆ ಮಾಡಲಾಗುವುದು. ಮೊದಲು ಹೈಕ ಭಾಗದಲ್ಲಿ ಪ್ರವಾಸ ಹಮ್ಮಿಕೊಂಡಿದೆ ಎಂದರು.
ಸಭೆಗೆ ಆಗಮಿಸಿದ್ದ ಹಲವು ಮಹಿಳೆಯರು ತಮಗೆ ನಿಗಮದಿಂದ ತುಂಬ ನೆರವಾಗುತ್ತಿದೆ ಎನ್ನುತ್ತಿದ್ದರೆ, ಹಲವರು ನಾವು ಇನ್ನೂ ಬಾಡಿಗೆ ಮನೆಯಲ್ಲಿದ್ದೇವೆ. ನಮಗೆ ನಿಗಮದಿಂದ ನಿವೇಶನ ಕೊಡಿಸಿ, ಮನೆಗಳನ್ನು ಕಟ್ಟಿಸಿಕೊಡಿ ಇದರಿಂದ ನಮಗೆ ಆಸರೆಯಾಗಲಿದೆ. ದುಡಿಮೆ ಮಾಡಿಕೊಂಡು ಜೀವನಕ್ಕೆ ದಾರಿ ಕಾಣಲಿದ್ದೇವೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು.
ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರೇಮಲತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರೇಂದ್ರ ನಾವದಗಿ, ಮಧುರಾ ಕರಣಂ, ದೇವದಾಸಿ ಪುನರ್ವಸತಿ ಯೋಜನಾ ಧಿಕಾರಿ ಗೋಪಾಲ್ ನಾಯಕ್, ಅಭಿವೃದ್ಧಿ ಅಧಿ ಕಾರಿ ಕೃಷ್ಟ ಬಾಕಳೆ, ಅಧಿಕಾರಿ ಜಯಶ್ರೀ ಸೇರಿ ಇತರರು ಉಪಸ್ಥಿತರಿದ್ದರು.