Advertisement

ಸಹಕಾರಿ ಸಂಸ್ಥೆಗಳು ಜನರ ವಿಶ್ವಾಸ ಉಳಿಸಿಕೊಳ್ಳಲಿ  

03:36 PM Apr 21, 2022 | Team Udayavani |

ಬೆಳಗಾವಿ: ಒಂದು ಸಂಸ್ಥೆಯ ಬೆಳವಣಿಗೆ ಜನಸೇವೆಯ ಮೇಲೆ ಅವಲಂಬಿಸಿರುತ್ತದೆ. ಜನರು ಹೇಗೆ ವಿಶ್ವಾಸ, ನಂಬಿಕೆ ಮೇಲೆ ಹಣ ಠೇವಣಿ ಮಾಡಿರುತ್ತಾರೋ ಅದನ್ನು ಉಳಿಸಿಕೊಳ್ಳುವುದು ಸಹಕಾರಿ ಸಂಸ್ಥೆಗಳ ಕಾರ್ಯವಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಹೇಳಿದರು.

Advertisement

ಇಲ್ಲಿನ ಆಟೋ ನಗರದಲ್ಲಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿ ಪ್ರಾಂತೀಯ ಕಚೇರಿ ನೂತನ ಕಟ್ಟಡ ಹಾಗೂ ಕಲ್ಬುರ್ಗಿ ಪ್ರಾಂತೀಯ ಕಚೇರಿ ಕಟ್ಟಡವನ್ನು ವರ್ಚುವಲ್‌ ಮೂಲಕ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಹಣ ಠೇವಣಿ ಮಾಡಿರುವ ಸಹಕಾರಿ ಸಂಸ್ಥೆಯಲ್ಲಿಯೇ ಅವರಿಗೆ ಹಣ ಮರಳಿಸಲಾಗುವುದು. ಕೆಲವು ಸಂಸ್ಥೆಗಳಲ್ಲಿ ಆಗುತ್ತಿರುವ ಆರ್ಥಿಕ ದಿವಾಳಿ ತಡೆಗಟ್ಟಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಸಂಸ್ಥೆ ದಿವಾಳಿ ಆಗುವ ಬಗ್ಗೆ ಸುಳಿವು ಸಿಕ್ಕಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 5400 ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸಿಸುತ್ತಿದ್ದು, ಕೆಲವೊಂದು ಸಂಸ್ಥೆಗಳು ಮಾಡಿದ ದಿವಾಳಿತನಕ್ಕೆ ಒಟ್ಟಾರೆ ಸಹಕಾರಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಎಲ್ಲರ ವಿಶ್ವಾಸದಿಂದ ಸಹಕಾರಿ ಸಂಸ್ಥೆ ಮುನ್ನಡೆಯಬೇಕು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಸಂಸ್ಥೆಯಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಸಂಸ್ಥೆಯಲ್ಲಿ ಯಾವುದೇ ರಾಜಕೀಯ ಮಾಡದೇ ಪ್ರಾಮಾಣಿಕತೆಯಿಂದ ಎಲ್ಲರೂ ಸಮಾನರು ಎನ್ನುವ ರೀತಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಸಂಸ್ಥೆಯಲ್ಲಿ ಕಾನೂನು ಉಲ್ಲಂಘನೆಯಾದರೆ ಸಹಕಾರ ಮತ್ತು ಸರ್ಕಾರಗಳ ಸಹಯೋಗದಲ್ಲಿ ಕಾನೂನು ರಕ್ಷಣೆ ಕಾರ್ಯ ಮಾಡಲಾಗುವುದು. ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸಾಮಾನ್ಯ ರೈತರು ಮೂರು ತಿಂಗಳು ಸಾಲ ಮರುಪಾವತಿ ಮಾಡದಿದ್ದರೆ, ಅವರ ಮನೆ ಮುಂದೆ ಡಂಗುರ ಬಾರಿಸುತ್ತಾರೆ. ಆದರೆ ಕಾರ್ಖಾನೆಗಳು ವರ್ಷಗಟ್ಟಲೇ ಸಾಲ ಮರುಪಾವತಿ ಮಾಡದಿದ್ದರೂ ಕಾರ್ಖಾನೆ ಎದುರು ಡಂಗುರ ಹಾಕುವುದಿಲ್ಲ ಎಂದು ಪ್ರಶ್ನಿಸಿದ ಸಚಿವ ಸೋಮಶೇಖರ್‌ ಅವರು, ಇದು ಬದಲಾಗಬೇಕು ಯಾರೇ ಇದ್ದರೂ ಕಾನೂನು ಒಂದೇ ರೀತಿ ಪಾಲಿಸಬೇಕು ಎಂದು ಹೇಳಿದರು.

Advertisement

ನ್ಯಾಯಾಲಯ ಸಭಾಂಗಣ ಉದ್ಘಾಟಿಸಿದ ಕೆಎಲ್‌ಇ ಸಂಸ್ಥೆ ಕಾರ್ಯಾದ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಕರ್ನಾಟಕದಲ್ಲಿ ಸಹ ಕಾರ ಚಳವಳಿ ಬೆಳಗಾವಿಯಲ್ಲಿ ಮಾತ್ರ ಉಳಿದಿದೆ. ಎಲ್ಲ ಜಿಲ್ಲೆಗಳಿಗಿಂತ ಬೆಳಗಾವಿಯಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿ ಸಂಘಗಳು ಜಾಸ್ತಿ ಇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳ ಸಮಸ್ಯೆಗಳಿಗೆ ಪರಿಹಾರ ನೀಡಲು ಸೌಹಾರ್ದ ಸಹಕಾರಿ ನಿಗಮ ಸ್ಥಾಪನೆ ಮಾಡಿರುವುದು ಹೆಮ್ಮೆಯ ವಿಷಯ. ಆದರೆ ಸಹಕಾರ ಸಂಸ್ಥೆಗಳು ದಿವಾಳಿ ಆಗಿ ಜನರು ಬೀದಿಪಾಲಾಗಿದ್ದಾರೆ. ಬೇಗ ಪರಿಹಾರ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಎಲ್ಲ ಸಹಕಾರಿ ಚಳವಳಿಗಳಿಗೆ ನಾಂದಿ ಹಾಡಿದ್ದು ಬೆಳಗಾವಿ ಜಿಲ್ಲೆ. ಈ ಪ್ರಾಂತೀಯ ಕಚೇರಿಯಲ್ಲಿ ತರಬೇತಿ, ಸ್ವಂತ ನ್ಯಾಯಾಲಯ ಹೊಂದಿದ್ದು ಎಲ್ಲರಿಗೂ ಉತ್ತಮ ರೀತಿಯ ನ್ಯಾಯ ಒದಗಿಸಬೇಕು. ಸಂಸ್ಥೆ ಕಟ್ಟಿ ಮಕ್ಕಳಿಗೆ ಹೊರೆ ಮಾಡದೇ ಜನ ಸೇವೆ ಎಂದು ಸಾರ್ವಜನಿಕರ ಹಣ ರಕ್ಷಕನಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಲ್ಬುರ್ಗಿ ಪ್ರಾಂತೀಯ ಕಚೇರಿ ಉದ್ಘಾಟನೆ: ಬೆಳಗಾವಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಲುºರ್ಗಿ ಪ್ರಾಂತೀಯ ಕಚೇರಿ ನೂತನ ಕಟ್ಟಡವನ್ನು ವರ್ಚುವಲ್‌ ಮೂಲಕ ಸಚಿವ ಎಸ್‌.ಟಿ. ಸೋಮಶೇಖರ ಉದ್ಘಾಟಿಸಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್‌. ಕೃಷ್ಣಾರೆಡ್ಡಿ, ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ, ನಿರ್ದೇಶಕರಾದ ಗುರುನಾಥ ಜಾಂತಿಕರ, ವಿಶ್ವನಾಥ ಹಿರೇಮಠ, ವೈ.ಟಿ. ಪಾಟೀಲ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿ ಇದ್ದರು.

ಉಪಾಧ್ಯಕ್ಷ ಜಗದೀಶ ಕವಟಗಿಮಠ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಪಾಟೀಲ ವಂದಿಸಿದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next