Advertisement

ಪೊಲೀಸರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಲಿ

04:12 PM Jun 23, 2022 | Team Udayavani |

ಶಿಗ್ಗಾವಿ: ಕರ್ತವ್ಯ ಪಾಲನೆಯ ಕಾರಣದಿಂದಾಗಿ ಪೊಲೀಸರಿಗೆ ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಒತ್ತು ನೀಡಲು ಸಮಯಾವಕಾಶ ಸಿಗುವುದಿಲ್ಲ. ಶಿಸ್ತಿನ ಸಿಪಾಯಿಗಳಾದ ಪೊಲೀಸರ ಮಕ್ಕಳು ದೇಶದ ವೈದ್ಯಕೀಯ, ವಿಜ್ಞಾನ ತಂತ್ರಜ್ಞಾನ, ಐಪಿಎಸ್‌ ಹಾಗೂ ಐಎಎಸ್‌ನಂತಹ ಹುದ್ದೆಗಳನ್ನು ಹೆಚ್ಚು ಅಲಂಕರಿಸುವಂತಾಗಬೇಕು ಎಂಬುದು ನನ್ನ ಅಭಿಲಾಷೆ ಎಂದು ಗಂಗೇಬಾವಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಹತ್ತನೇ ಪಡೆಯ ಕಮಾಂಡೆಂಟ್‌ ಸುಂದರ್‌ ರಾಜನ್‌ ಹೇಳಿದರು.

Advertisement

ತಾಲೂಕಿನ ಗಂಗೇಬಾವಿ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಸಿ.ಬಿ. ಯಲಿಗಾರ ಸಂಸ್ಥೆ ನೀಡಿದ ಉಚಿತ ನೋಟ್‌ಬುಕ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಂದರ್ಭಿಕ ಆಂತರಿಕ ಭದ್ರತೆ, ಅಶಾಂತಿ ಪರಿಸ್ಥಿತಿ ನಿಭಾಯಿಸುವ ಕರ್ತವ್ಯದ ಒತ್ತಡದಲ್ಲಿ ಪೊಲೀಸರಿಗೆ ಕುಟುಂಬ ಹಾಗೂ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಒತ್ತು ನೀಡಲು ಆಗುವುದೇ ಇಲ್ಲ. ಕಾರಣ ಮೀಸಲು ಪಡೆಯ ಕ್ಯಾಂಪಸ್‌ನಲ್ಲಿಯೇ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಶೈಕ್ಷಣಿಕ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ, 2005 ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಮೊದಲ ಶಾಲೆ ಆರಂಭಿಸಲಾಯಿತು.

ನಂತರ ಮೈಸೂರು, ಶಿಗ್ಗಾವಿ, ಶಿವಮೊಗ್ಗ, ಕಲಬುರಗಿಗೆ ಯೋಜನೆ ವಿಸ್ತರಿಸಲಾಗಿದೆ. ಇದರಿಂದ ಸಾಕಷ್ಟು ಮಕ್ಕಳಿಗೆ ಸಿಬಿಎಸ್‌ ಮಾದರಿ ಶೈಕ್ಷಣಿಕ ಸೌಲಭ್ಯ ಸಿಗುತ್ತಿದೆ. ಇದರಿಂದ ಸಾಮಾನ್ಯ ಪೊಲೀಸರ ಮಕ್ಕಳೂ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು.

ಗಂಗೇಬಾವಿ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಸುಸಜ್ಜಿತ ಕಟ್ಟಡಕ್ಕೆ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳ ಕಾಳಜಿಯಿಂದ 3 ಕೋಟಿ ರೂ. ಲಭ್ಯವಾಗಿದೆ. ಶಾಲಾ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ದೇಶಕ್ಕೆ ಒಳ್ಳೆಯ ನಾಗರಿಕರನ್ನು ಸಿದ್ಧಪಡಿಸಬಹುದಾದ ಕೇಂದ್ರವಾಗಿ ಬೆಳೆಯಲಿ ಎಂದರು.

Advertisement

ಸಿ.ಬಿ.ಯಲಿಗಾರ ಸಂಸ್ಥೆ ಬಡ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆ ಬಸ್‌ಪಾಸ್‌, ಮಕ್ಕಳಿಗೆ ನೋಟ್‌ಬುಕ್‌ ನೀಡುತ್ತಿರುವುದು ಸಮಾಜಮುಖೀ ಕಾರ್ಯವಾಗಿದ್ದು, ಅಭಿನಂದನಾರ್ಹ ಎಂದರು.

ಸಿ.ಬಿ.ಯಲಿಗಾರ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡಿ, ದುಡಿಮೆಯ ಆದಾಯದಲ್ಲಿ ತಂದೆಯ ಹೆಸರಿನಿಂದ ಸಾಮಾಜಿಕ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದೇನೆ. ಜನಸಾಮಾನ್ಯರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಸ್ಥೆಯಿಂದ ಹತ್ತು ಹಲವು ಸಾಮಾಜಿಕ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ವೇಳೆ ಪೊಲೀಸ್‌ ಪಬ್ಲಿಕ್‌ ಶಾಲೆ ಮಕ್ಕಳಿಗೆ ಸಿ.ಬಿ.ಯಲಿಗಾರ ಸಂಸ್ಥೆ ಯಿಂದ ಉಚಿತ ನೋಟ್‌ಬುಕ್‌ ವಿತರಿಸ ಲಾಯಿತು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ದಾವಲಸಾಬ್‌ ಯಲಿಗಾರ, ಶಾಲಾ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next