Advertisement

ಮುಖ್ಯಮಂತ್ರಿಯ ಗ್ರಾಮ ವಾಸ್ತವ್ಯ ಚಿಂತನೆ ಹೊಸದಾಗಿರಲಿ

12:35 AM Jun 04, 2019 | Sriram |

ಮುಖ್ಯಮಂತ್ರಿ ಕುಮಾರಸ್ವಾಮಿ ಮರಳಿ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮರಳಿ ಪ್ರಾರಂಭವಾಗುವ ಕುರಿತು ಸರಕಾರಿ ಮೂಲಗಳು ಸುಳಿವು ನೀಡಿವೆ. ಲೋಕಸಭಾ ಚುನಾವಣೆ ಯಲ್ಲಾದ ಹೀನಾಯ ಸೋಲಿನಿಂದ ಎಚ್ಚೆತ್ತಿರುವ ಕುಮಾರಸ್ವಾಮಿಯವರು ತನ್ನ, ತನ್ನ ಪಕ್ಷದ ಅಂತೆಯೇ ಸಮ್ಮಿಶ್ರ ಸರಕಾರದ ಜನಪ್ರಿಯತೆಯನ್ನು ಮೇಲೆತ್ತುವ ಸಲುವಾಗಿ ಮರಳಿ ಹಳ್ಳಿಗಳ ಕಡೆಗೆ ಹೊರಟಿದ್ದಾರೆ ಎನ್ನುವುದು ಗ್ರಾಮ ವಾಸ್ತವ್ಯದ ಕುರಿತಾಗಿ ಇರುವ ಒಂದು ಸಾಮಾನ್ಯ ಟೀಕೆ. ರಾಜಕೀಯ ದೃಷ್ಟಿಯಿಂದ ನೋಡುವಾಗ ಇದು ನಿಜವಾಗಿರಲೂಬಹುದು.

Advertisement

ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ದಕ್ಕಿರುವುದು ತಲಾ ಒಂದು ಸ್ಥಾನ ಮಾತ್ರ.ಈ ಹಿನ್ನೆಲೆಯಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ತಡೆಯಲು ಮುಖ್ಯಮಂತ್ರಿಯಾಗಿ ಈ ರೀತಿ ಗಮನ ಸೆಳೆಯುವಂಥ‌ದ್ದೇನಾದರೂ ಮಾಡಲೇಬೇಕಿತ್ತು.
ರಾಜಕೀಯ ಉದ್ದೇಶವನ್ನು ಬದಿಗಿಟ್ಟು ನೋಡಿದರೆ ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯದಿಂದ ಜನರಿಗೇನಾದರೂ ಪ್ರಯೋಜನವಾಗಬಹುದೇ? ಗ್ರಾಮ ವಾಸ್ತವ್ಯ ಎನ್ನುವುದು ಕುಮಾರಸ್ವಾಮಿಯವರದ್ದೇ ಪರಿಕಲ್ಪನೆ. 2006-2007ರಲ್ಲಿ ಬಿಜೆಪಿ ಜತೆಗೆ ಸೇರಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದಾಗ ಅವರು ಇದನ್ನು ಜಾರಿಗೊಳಿಸಿದ್ದರು. ಮುಖ್ಯಮಂತ್ರಿಯೊಬ್ಬರು ಹಳ್ಳಿಯ ಬಡವನ ಮನೆಯಲ್ಲಿ ಒಂದು ರಾತ್ರಿಯನ್ನು ಕಳೆಯುವ ಈ ಪರಿಕಲ್ಪನೆ ದೇಶಕ್ಕೆ ಹೊಸದಾಗಿತ್ತು. ಇದಕ್ಕೆ ಅಂತರಾಷ್ಟ್ರೀಯ ಮಟ್ಟದ ಪ್ರಚಾರವೂ ದೊರಕಿತು.

ಈ ಸಲ ಕುಮಾರಸ್ವಾಮಿ ಹಳ್ಳಿ ಜನರ ಮನೆಯಲ್ಲಿ ಕಳೆಯುವ ಬದಲು ಊರಿನ ಶಾಲೆಯಲ್ಲಿ ತಂಗಲಿದ್ದಾರೆ. ಅನಂತರ ಹಲವು ಸಚಿವರು ಈ ರೀತಿಯ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಈಗ ಇರುವ ಪ್ರಶ್ನೆ ಮುಖ್ಯಮಂತ್ರಿ ಅಥವಾ ಸಚಿವರು ಒಂದು ರಾತ್ರಿಯ ಮಟ್ಟಿಗೆ ಗ್ರಾಮ ವಾಸ್ತವ್ಯ ಮಾಡಿರುವುದರಿಂದ ಆ ಊರಿಗೇನಾದರೂ ಪ್ರಯೋಜನವಾಗಿದೆಯೇ ಎನ್ನುವುದು. ಮೊದಲ ಅವಧಿಯಲ್ಲಿ ಕುಮಾರಸ್ವಾಮಿಯವರು 47 ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಈ ಪೈಕಿ ಬಹುತೇಕ ಹಳ್ಳಿಗಳಲ್ಲಿ ಹೇಳಿಕೊಳ್ಳುವಂಥ ಬದಲಾ ವಣೆಗಳು ಆಗಿಲ್ಲ. ಊರಿಗೊಂದು ರಸ್ತೆ ನಿರ್ಮಾಣವಾಗಿರಬಹುದು ಅಥವಾ ಆಸ್ಪತ್ರೆ ಬಂದಿರಬಹುದು ಇಲ್ಲವೇ ಒಂದಷ್ಟು ಶೌಚಾಲಯಗಳು ನಿರ್ಮಾಣ ವಾಗಿರಬಹುದು. ಇವನ್ನೆಲ್ಲ ಮಾಡಲು ಸ್ವತಃ ಮುಖ್ಯಮಂತ್ರಿಯೇ ಹೋಗಿ ಊರಿನಲ್ಲಿ ರಾತ್ರಿ ಕಳೆಯಬೇಕಾ? ಸರಕಾರಿ ವ್ಯವಸ್ಥೆಯನ್ನು ಬಳಸಿ ಬೆಂಗಳೂರಿ ನಲ್ಲಿ ದ್ದುಕೊಂಡೇ ಈ ಕೆಲಸವನ್ನು ಮಾಡಬಹುದು. ಆಯಾಯ ಊರಿನ ಶಾಸಕರು, ಸಂಸದರು ಇಂಥ ಕೆಲಸವನ್ನು ಮಾಡಬಹುದಲ್ಲ. ಮುಖ್ಯಮಂತ್ರಿ ಬರುತ್ತಾರೆ ಎಂಬ ಕಾರಣಕ್ಕೆ ಊರಿನ ರಸ್ತೆಗೆ ಟಾರು ಹಾಕಿದರೆ, ಮನೆಯಲ್ಲಿ ಶೌಚಾಲಯ ನಿರ್ಮಿಸಿದರೆ ಅದನ್ನು ನಿಜವಾದ ಅಭಿವೃದ್ಧಿ ಎನ್ನಬಹುದೆ?

ಹಾಗೆಂದು ಇದು ನಿಷ್ಪ್ರಯೋಜಕ ಕಾರ್ಯಕ್ರಮ ಎಂದು ತಳ್ಳಿ ಹಾಕಲಾಗದು. ಮುಖ್ಯಮಂತ್ರಿಯ ಗ್ರಾಮ ವಾಸ್ತವ್ಯ ಎನ್ನುವುದು ನಿಜಕ್ಕೂ ಒಂದು ಮಹತ್ವದ ಕಾರ್ಯಕ್ರಮವೇ. ಆದರೆ ಅದರ ಅನುಷ್ಠಾನ ಮಾತ್ರ ಭಿನ್ನವಾಗಿರಬೇಕು. ಒಂದು ಗ್ರಾಮ ಅಥವಾ ಒಂದು ತಾಲೂಕಿನಲ್ಲಿ ಮುಖ್ಯಮಂತ್ರಿ ಒಂದು ದಿನ ಕಳೆದಿದ್ದಾರೆ ಎಂದರೆ ಆ ಊರಿನಲ್ಲಿ ಭವಿಷ್ಯದ ತಲೆಮಾರು ಕೂಡಾ ಗುರುತಿಸುವಂಥ ಬದಲಾವಣೆಗಳು ಆಗಬೇಕು. ಮುಖ್ಯಮಂತ್ರಿಯವರು ಕನಿಷ್ಠ ಒಂದು ದಿನವನ್ನು ತಾಲೂಕಿನಲ್ಲೋ ಹಳ್ಳಿಯಲ್ಲೋ ಕಳೆದು ಅಲ್ಲಿನ ವಾಸ್ತವ ಸ್ಥಿತಿಯನ್ನು ಮನಗಾಣಬೇಕು. ಆ ಊರಿಗೆ ಏನು ಬೇಕು, ಯಾವುದರ ಕೊರತೆಯಿದೆ, ಏನು ಮಾಡಿದರೆ ಜನರ ಜೀವನದಲ್ಲಿ ಸುಧಾರಣೆಯಾ ಗಬಹುದು ಎಂಬ ಅಂದಾಜು ಸಿಗಬೇಕು.ಹೊಲಗದ್ದೆಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿಯ ಬಗ್ಗೆ ತಿಳಿದುಕೊಳ್ಳಬೇಕು. ಅಗತ್ಯವಿರುವ ಯೋಜನೆಯನ್ನೋ, ಸ್ಕೀಮನ್ನೋ ರೂಪಿಸಿ ಕಾಲಮಿತಿಯಲ್ಲಿ ಅದನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಿಸಬೇಕು. ಈ ರೀತಿ ಮಾಡಿದರೆ ಅಭಿವೃದ್ಧಿಯ ನೆಲೆಯಲ್ಲಿ ಗ್ರಾಮ ವಾಸ್ತವ್ಯ ಎನ್ನುವುದು ದೇಶಕ್ಕೆ ಮಾದರಿಯಾಗಬಹುದು ಮತ್ತು ಅಂಥ ಪರಿಕಲ್ಪನೆಯನ್ನು ನೀಡಿದ ಹಿರಿಮೆ ರಾಜ್ಯಕ್ಕೆ ಸಿಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next