Advertisement

ಮುಖ್ಯಮಂತ್ರಿ ಹೇಳಿಕೆ ಹಿಂಪಡೆಯಲಿ: ಕೋಟ ಶ್ರೀನಿವಾಸ ಪೂಜಾರಿ

03:55 AM Mar 05, 2019 | Team Udayavani |

ಮಂಗಳೂರು: ಪಾಕಿಸ್ಥಾನದಲ್ಲಿರುವ ಉಗ್ರರ ತರಬೇತಿ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿರುವುದನ್ನು ಸಂಭ್ರಮಿಸುವುದರಿಂದ ಒಂದು ಕೋಮಿನ ಜನರಿಗೆ ನೋವಾಗುತ್ತದೆ ಎಂದಿರುವ ಮುಖ್ಯಮಂತ್ರಿಯವರ ಹೇಳಿಕೆ ಅಕ್ಷಮ್ಯ. ಇದನ್ನು ತತ್‌ಕ್ಷಣ ಹಿಂಪಡೆಯಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸೈನಿಕರನ್ನು ಕೊಂದ ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದೆ. ಇದಕ್ಕೆ ದೇಶವಾಸಿಗಳು ಸಂಭ್ರಮಿಸುವುದು ಸಹಜ. ಆದರೆ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಕುಮಾರಸ್ವಾಮಿಯವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ತನ್ನ ಮಾತಿನ ಒಳಾರ್ಥ ಏನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದರು.

ಉಗ್ರರೇ ಒಪ್ಪಿದರೂ…!
ಕಾಂಗ್ರೆಸ್‌ಗೆ ದೇಶದ ಚಿಂತೆಯಾದರೆ, ಬಿಜೆಪಿಗೆ ಸೀಟಿನ ಚಿಂತೆ ಎಂಬುದಾಗಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ. ಆದರೆ ನಿಜಾರ್ಥದಲ್ಲಿ ಬಿಜೆಪಿಗೆ ರಾಷ್ಟ್ರ ಮತ್ತು ಸೈನಿಕರ ಚಿಂತೆಯಾದರೆ, ಕಾಂಗ್ರೆಸ್‌ಗೆ ಭಯೋತ್ಪಾದಕರ ಚಿಂತೆ ಎಂದವರು ಈ ವೇಳೆ ಟೀಕಿಸಿದರು. ಉಗ್ರರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌-2 ನಡೆಸಿರುವುದನ್ನು ಚೀನ ಸಹಿತ ಎಲ್ಲ ರಾಷ್ಟ್ರಗಳು ಬೆಂಬಲಿಸಿವೆ.

ದುರದೃಷ್ಟ ಎಂದರೆ ಮಹಾಘಟ ಬಂಧನ್‌ನ ಮುಖಂಡರು ಮತ್ತು ಕೆಲವು ಬುದ್ಧಿಜೀವಿಗಳು ಉಗ್ರರ ಬಗ್ಗೆ ಸಹಾನುಭೂತಿ ತಳೆದಿದ್ದಾರೆ. ಭಾರತೀಯ ವಾಯುಸೇನೆಯ ದಾಳಿಯನ್ನು ಉಗ್ರ ಮಸೂದ್‌ ಅಜರ್‌ನ ಸಹೋದರನೇ ಒಪ್ಪಿಕೊಂಡಿದ್ದಾನೆ. ಆದರೆ ದೇಶದೊಳಗಿನ ಕೆಲವರು ಸಾಕ್ಷಿ ಕೇಳುತ್ತಿರುವುದು ದುರಂತ ಎಂದರು.

ದಾಳಿಯಿಂದಾಗಿ ಬಿಜೆಪಿಗೆ ರಾಜ್ಯದಲ್ಲಿ ಕನಿಷ್ಠ22 ಸೀಟು ಬರಲಿದೆ ಎಂಬ ಬಿಎಸ್‌ವೈ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ, ಪ್ರಧಾನಿ ತೆಗೆದುಕೊಂಡ  ಕಠೊರ ನಿರ್ಧಾರದಿಂದ ದೇಶದಲ್ಲಿ ಪಕ್ಷದ ಮೇಲಿನ ಗೌರವ ಹೆಚ್ಚಾಗಿದ್ದು, ಅದು ಸಹಾಯವಾಗಬಹುದು ಎಂಬುದು ಹೇಳಿಕೆಯ ಒಳಾರ್ಥವಾಗಿರಬಹುದು ಎಂದು ಪ್ರತಿಕ್ರಿಯಿಸಿದರು.

Advertisement

ಬಿಜೆಪಿಯಿಂದ ಅಧ್ಯಯನ ಸಮಿತಿ
ರಾಜ್ಯದಲ್ಲಿ 16 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ ಇವುಗಳ ನಿರ್ವಹಣೆಗೆ ನೀಡುವ ಅನುದಾನದಲ್ಲಿ ತಾರತಮ್ಯ ಆಗುತ್ತಿದ್ದು, ಕೆಲವು ಘಟಕಗಳಿಗೆ 3.50 ಲಕ್ಷ ರೂ., ಕೆಲವು ಘಟಕಗಳಿಗೆ 9 ಲಕ್ಷ ರೂ. ನೀಡಲಾಗುತ್ತಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ದುರುಪಯೋಗ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಘಟಕಗಳ ಸಮಗ್ರ ಅಧ್ಯಯನಕ್ಕೆ ಬಿಜೆಪಿ ಸಮಿತಿಯೊಂದನ್ನು ರಚಿಸಿದೆ ಎಂದು ಪೂಜಾರಿ ತಿಳಿಸಿದರು.

ಹೊಸ ತಾಲೂಕುಗಳನ್ನು ಘೋಷಣೆ ಮಾಡುವ ಸರಕಾರ ಉದ್ಘಾಟನೆಯ ಬಳಿಕ ಸೌಲಭ್ಯಗಳನ್ನು ನೀಡುತ್ತಿಲ್ಲ. ಕಚೇರಿ ವ್ಯವಸ್ಥೆ ಅನುದಾನ, ಅಧಿಕಾರಿಗಳ ನಿಯೋಜನೆ ಮಾಡುತ್ತಿಲ್ಲ. ಜನರಿಗೆ ತೊಂದರೆಗಳಾಗುತ್ತಿವೆ ಎಂದವರು ದೂರಿದರು. ಇವಿಎಂ ಬಗ್ಗೆ ಕಾಂಗ್ರೆಸ್‌ಗೆ ಅನುಮಾನವಿದೆ. ಆದರೆ ಈ ಅನುಮಾನ ಅವರು ಗೆದ್ದ ಕ್ಷೇತ್ರಗಳನ್ನು ಹೊರತುಪಡಿಸಿ ಪರಾಭವಗೊಂಡ ಕ್ಷೇತ್ರಗಳಿಗೆ ಸೀಮಿತವಾಗಿದೆ ಎಂದು ಲೇವಡಿ ಮಾಡಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಾಗಬೇಕೆಂಬ ಜನರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುವುದು ಸ್ವಾಭಾವಿಕ. ಆದರೆ ಯಾರು ಸೂಕ್ತ ಅಭ್ಯರ್ಥಿ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕೇಂದ್ರ ನಾಯಕತ್ವ ಎಂದು ತಿಳಿಸಿದರು.

ಕೇಂದ್ರ ಸರಕಾರದ ಕೃಷಿ ಸಮ್ಮಾನ್‌ ಯೋಜನೆಯ ಪ್ರಯೋಜನವನ್ನು ರಾಜ್ಯದ 76 ಲಕ್ಷ ಜನ ಪಡೆಯಲಿದ್ದಾರೆ. ಆದರೆ ರಾಜ್ಯದಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು, ಈವರೆಗೆ ಕೇವಲ 16 ಲಕ್ಷ ಅರ್ಜಿ ಸ್ವೀಕಾರವಾಗಿದೆ. ರೈತರಿಗೆ ಸಿಗಬೇಕಾದ ಯೋಜನೆಯ ಪ್ರಯೋಜನ ನೀಡುವಲ್ಲಿ ವಿಳಂಬ ಮಾಡಿದರೆ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next