Advertisement

ಕಲ್ಯಾಣ ಅಭಿವೃದ್ದಿಗೆ ಮುಖ್ಯಮಂತ್ರಿ ದಿಟ್ಟತನ ತೋರಲಿ

02:59 PM Sep 17, 2022 | Team Udayavani |

ಕಲಬುರಗಿ: ಸರ್ಕಾರ ಅಂದುಕೊಂಡಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟತನ ತೋರಬೇಕು. ಇಲ್ಲದಿದ್ದರೇ ಹೆಸರು ಬದಲಾವಣೆಗಷ್ಟೇ ಸೀಮಿತವಾಗಿ ಉಳಿಯುತ್ತದೆ ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಪ್ರತಿಪಾದಿಸಿದರು.

Advertisement

ನಗರದ ಡಾ|ಬಿ.ಆರ್‌.ಅಂಬೇಡ್ಕರ್‌ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ “ಕಲ್ಯಾಣ ಕರ್ನಾಟಕದಲ್ಲಿ ವಿಮೋಚನಾ ಚಳವಳಿ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇವಲ ಹೆಸರು ಬದಲಾವಣೆ ಮಾಡುವುದರಿಂದ ಎಲ್ಲವೂ ಬದಲಾಗುವುದಿಲ್ಲ ಎನ್ನುವುದನ್ನು ಸರ್ಕಾರ ಮನಗಾಣಬೇಕು. ಅಲ್ಲದೇ, ಮುಖ್ಯಮಂತ್ರಿಗಳು ಹಾಗೂ ಶಾಸಕರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಬದ್ಧವಾಗಬೇಕು. ಈ ಭಾಗಕ್ಕೆ ವಿಶೇಷವಾಗಿ ನೀಡಲಾಗಿರುವ 371ನೇ (ಜೆ) ಕಲಂ ಜಾರಿಗೆ ಪರಿಣಾಮಕಾರಿ ಹೆಜ್ಜೆಗಳನ್ನು ಇನ್ನೂವರೆಗೂ ತೆಗೆದುಕೊಂಡಿಲ್ಲ. ಇದರಿಂದಾಗಿ ನಿರೀಕ್ಷಿತ ಮಟ್ಟದ ಸುಧಾರಣೆ ಕಾಣಿಸುತ್ತಿಲ್ಲ ಎಂದರು.

ಮೀಸಲಾತಿ, ಶಿಕ್ಷಣ, ಉದ್ಯೋಗದಂತ ವಿಷಯಗಳ ಅನುಷ್ಠಾನಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣ ಈ ಭಾಗದಲ್ಲಿ ಪ್ರತ್ಯೇಕ ಮಂತ್ರಾಲಯ ಮಾಡದೇ ಇರುವುದು. ಇದನ್ನು ಮಾಡಲು ಮುಖ್ಯಮಂತ್ರಿಗಳು ದೊಡ್ಡ ಪ್ರಮಾಣದಲ್ಲಿ ದಿಟ್ಟತನ ತೋರಲೇಬೇಕಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದಲ್ಲಿ ವಿಮೋಚನಾ ಚಳವಳಿಯ ಗಂಭೀರತೆ ಬಗ್ಗೆ ಮತ್ತು ಸರ್ದಾರ ಪಟೇಲರ ದಿಟ್ಟತನದಿಂದ ಹೈದ್ರಾಬಾದ್‌ ನಿಜಾಮ ಅಖಂಡ ಭಾರತದಲ್ಲಿ ತನ್ನ ರಾಜ್ಯವನ್ನು ವಿಲೀನಗೊಳಿಸಿದ ಕುರಿತು ವಿವರವಾಗಿ ತಿಳಿಸಿದ ಅವರು, ಕಲ್ಯಾಣದ ಕಲ್ಯಾಣವನ್ನು ಸರ್ಕಾರ ವಿಶೇಷವಾಗಿ ಪರಿಗಣಿಸಬೇಕು ಎಂದು ಅಗ್ರಹಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಚಿಂತಕ ಶಾಂತಪ್ಪ ಸೂರನ್‌ ಮಾತನಾಡಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಇಚ್ಛಾಶಕ್ತಿ ಬೇಕು. ಅದನ್ನು ಪ್ರತಿ ಬಾರಿ ನಾವುಗಳು ಬೇಡುತ್ತಿದ್ದೇವೆ. ಆದರೂ, ಕೆಕೆಆರ್‌ಡಿಬಿ ಮಂಡಳಿಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ. ತುಂಬಾ ನಿಧಾನಗತಿ ಇದೆ. ಆದರೆ, ಅನುದಾನ ಬಳಕೆಯಲ್ಲಿ ಮಾತ್ರ ಮುಂದಿದೆ. ಇಂತಹ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ|ವಿಜಯಕುಮಾರ ಸ್ವಾಗತಿಸಿದರು. ಡಾ|ಗಾಂಧೀಜಿ ಮೊಳಕೆರೆ ವಂದಿಸಿದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next