ಸದ್ಯ ಪೂರ್ವ ಕರಾವಳಿಗೆ ಅಪ್ಪಳಿಸಿರುವ ಮಿಚಾಂಗ್ ಚಂಡಮಾರುತ ತಮಿಳುನಾಡಿನ ರಾಜಧಾನಿ ಚೆನ್ನೈಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹಾನಿಯನ್ನು ಉಂಟು ಮಾಡಿದೆ. ಇದುವರೆಗಿನ ಮಾಹಿತಿ ಪ್ರಕಾರ ಹದಿನೇಳು ಮಂದಿ ಮಳೆ, ಪ್ರವಾಹ ಸಂಬಂಧಿ ದುರಂತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಚೆನ್ನೈ ಮತ್ತು ದೇಶದ ಕರಾವಳಿ ಪ್ರದೇಶದ ಇತರ ನಗರಗಳಿಗೆ ಮಳೆ ಮತ್ತು ಪ್ರವಾಹ ಸಂಬಂಧಿ ದುರಂತಗಳು ಹೊಸತೇನೂ ಅಲ್ಲ. ಹಿಂದಿನ ದುರಂತಗಳಿಂದ ಸಾರ್ವಜನಿಕರು, ಆಡಳಿತ ವ್ಯವಸ್ಥೆ ಪಾಠ ಕಲಿತುಕೊಂಡಿರುತ್ತಿದ್ದರೆ ಪದೇ ಪದೆ ಅನಾಹುತಗಳು ಸಂಭವಿಸುತ್ತಿರಲಿಲ್ಲ,ತಮಿಳುನಾಡಿನ ನಗರಾಭಿವೃದ್ಧಿ ಸಚಿವ ಕೆ.ಎನ್.ನೆಹರೂ ಅವರೇ ಹೇಳಿರುವ ಪ್ರಕಾರ ಮಿಚಾಂಗ್ ಚಂಡಮಾರುತ ಪ್ರಭಾವದಿಂದ ಚೆನ್ನೈಯಲ್ಲಿ ಉಂಟಾಗಿರುವ ಮಳೆ ಎಂಬತ್ತು ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದ್ದು. 2015ರಲ್ಲಿ ತಮಿಳುನಾಡು ರಾಜಧಾನಿಯಲ್ಲಿ ಉಂಟಾಗಿದ್ದ ಅನಾಹುತ ಕೇವಲ ಕರ್ನಾಟಕದ ನೆರೆಯ ರಾಜ್ಯ ಎಂಬುದಕ್ಕೆ ಸೀಮಿತವಾಗಿಲ್ಲ. ಅದು ಕರ್ನಾಟಕದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಕೂಡ ಎಚ್ಚರಿಕೆಯ ಕರೆಗಂಟೆಯೇ ಹೌದು. ಆದರೆ ಆಯಾ ನಗರದ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವವರು ಅದರ ಬಗ್ಗೆ ದೂರದೃಷ್ಟಿ ಹೊಂದಿಕೊಂಡು ಕಾರ್ಯ ನಿರ್ವಹಿಸಬೇಕಷ್ಟೇ.
2015ರಲ್ಲಿ ಉಂಟಾಗಿದ್ದ ಚೆನ್ನೈ ಪ್ರವಾಹಕ್ಕೆ ಚೆಂಬರಂಬ್ಟಾಕ್ಕಂ ಸರೋವರದಲ್ಲಿ ನೀರು ತುಂಬಿ ಹರಿದದ್ದು ಕಾರಣ ಹೌದಾದರೂ, ನೀರು ಹರಿದು ಹೋಗುವ ಚರಂಡಿ, ಕಾಲುವೆಗಳನ್ನು ಮುಚ್ಚಿ ಕಟ್ಟಡಗಳನ್ನು ನಿರ್ಮಿಸಿದ್ದು, ಭೂ ಅತಿಕ್ರಮಣಗಳೇ ಸಾಕ್ಷಿ ಎಂದು ಬೆಟ್ಟು ಮಾಡಿ ತೋರಿಸುತ್ತಿದ್ದವು. ಆದರೆ ಏನೂ ಆಗಲಿಲ್ಲ. ಆ ಸಂದರ್ಭದಲ್ಲಿ ಕೆಲವು ದಿನಗಳ ವರೆಗೆ ರಾಷ್ಟ್ರವ್ಯಾಪಿ ಮಾಧ್ಯಮಗಳಲ್ಲಿ ರಭಸದಿಂದ ಸುದ್ದಿಯಾ ದವೇ ಹೊರತು ತಪ್ಪು ಎಸಗಿದವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿರಲಿಲ್ಲ.
ದೇಶದ ನಗರಗಳಲ್ಲಿನ ಒಳಚರಂಡಿ ವ್ಯವಸ್ಥೆ ಏನಿದ್ದರೂ ಕೂಡ ಬದಲಾಗಿರುವ ಮತ್ತು ಹೆಚ್ಚಾಗಿರುವ ಜನಸಂಖ್ಯೆಯ ಒತ್ತಡವನ್ನು ನಿಭಾಯಿಸಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿದೆ. ಹೀಗಾಗಿ ಅದಕ್ಕೆ ಬೇಕಾಗುವ ಕಾಯಕಲ್ಪವನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಇರುವ ಅಂತರ್ ಸರಕಾರಿ ಸಮಿತಿ (ಐಪಿಸಿಸಿ) 2021ರಲ್ಲಿ ಸಲ್ಲಿಸಿದ್ದ ವರದಿಯ ಪ್ರಕಾರ ಹಾಲಿ ಶತಮಾನದ ಅಂಚಿಗೆ ದೇಶದ ಕರಾವಳಿ ಪ್ರದೇಶದ ಮುಂಬಯಿ, ವಿಶಾಖಪಟ್ಟಣ, ಕೊಚ್ಚಿ ಸೇರಿದಂತೆ 12 ನಗರಗಳು ಮುಳುಗುವ ಆತಂಕ ಎದುರಿಸುತ್ತಿವೆ.
ತೀವ್ರ ಪ್ರವಾಹ ಮತ್ತು ಮಳೆಯಿಂದ ಮುಳುಗಿ ಹೋಗುವುದು ಎಂಬ ವಿಚಾರ ಕೇವಲ ನದಿ ಅಥವಾ ಸಮುದ್ರ ಕಿನಾರೆಯ ನಗರ ಅಥವಾ ಪಟ್ಟಣಗಳಿಗೆ ಸೀಮಿತವಾಗಿರುವ ವಿಚಾರ ಅಲ್ಲ. ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಹಿಮಾಚಲ ಪ್ರದೇಶ, ಬಿಹಾರ, ಉತ್ತರಾಖಂಡ, ದಿಲ್ಲಿ ಪ್ರಮುಖ ನಗರಗಳು ಮುಳುಗಿವೆ. ಸಮಗ್ರ ನಗರಾಭಿವೃದ್ಧಿಯ ಯೋಜನೆ ಇಲ್ಲದೆ ಇರುವುದೇ ಇಂಥ ಅನಾಹುತಗಳಿಗೆ ಕಾರಣ. ನಗರ ವಿಸ್ತರಣೆ ಎಂದರೆ ಕೇವಲ ಬಡಾವಣೆಗಳು, ಆಗಸದೆತ್ತರಕ್ಕೆ ವಸತಿ ಸಮುತ್ಛಯಗಳ ನಿರ್ಮಾಣಕ್ಕಷ್ಟೆ ಸೀಮಿತವಾಗಬಾರದು. ಪರಿಸರ ಸಹ್ಯವಾಗಿರುವ ರೀತಿಯ ನಿರ್ಮಾಣಗಳಾದರೆ ಸರ್ವರಿಗೂ ಹಿತ. ಹೀಗಾಗಿ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಚಿಂತಿಸಿ, ನಗರ ಪ್ರದೇಶಗಳಲ್ಲಿನ ಪ್ರವಾಹ ಸ್ಥಿತಿ ನಿಯಂತ್ರಿಸಲು ಇನ್ನಾದರೂ ಕಾರ್ಯೋನ್ಮುಖವಾಗಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಬೆಲೆ ತೆರಬೇಕಾದ ಅನಿವಾರ್ಯ ಸ್ಥಿತಿ ಎದುರಾಗುವುದು ನಿಶ್ಚಿತ.