ಕಲಬುರಗಿ: ಜಾತಿ ಜನಗಣತಿ ಜಾರಿ ಕುರಿತಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲೇ ನಿರ್ಧರಿಸಲಾಗಿದೆಯಲ್ಲದೇ ಕಳೆದ 75 ವರ್ಷಗಳಲ್ಲಿ ಕೆಲವೇ ಸಮುದಾಯ ರಾಜಕೀಯ ಹಾಗೂ ಇತರ ಲಾಭ ಪಡೆದಿದ್ದರಿಂದ ಜಾತಿ ಜನಗಣತಿ ವರದಿ ಜಾರಿಯಾಗುವುದು ಅಗತ್ಯವಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಸರಿಯೋ – ತಪ್ಪು ನಿಖರವಾಗಿ ಗೊತ್ತಿಲ್ಲ ಆದರೆ ಇಷ್ಟು ದಿನ ಕೆಲವೇ ಸಮುದಾಯಗಳು ಸಂವಿಧಾನದ ಹುದ್ದೆಗಳನ್ನು ಅಲಂಕರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ವರದಿ ಜಾರಿಯಾಗಲಿ ಎಂದರು.
ಬಿಜೆಪಿ ಹಗಲು ಕನಸು: ನೆರೆಯ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಹಗಲು ಕನಸು ಕಾಣುತ್ತಿದೆ. ಎಲ್ಲಾ 119 ಸ್ಥಾನಗಳಿಗೆ ಸ್ಪರ್ಧಿಸಲಿಕ್ಕಾಗಿಲ್ಲ. ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದವರನ್ನು ಸಿಎಂ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ. ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂಬುದು ಮತದಾರರಿಗೆ ಸಂಪೂರ್ಣ ಮನವರಿಕೆಯಾಗಿದ್ದರಿಂದ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹರಿಪ್ರಸಾದ ವಿಶ್ವಾಸ ವ್ಯಕ್ತಪಡಿಸಿದರು.
ಹೋಲಿಕೆ ಸರಿಯಲ್ಲ: ಪ್ರಧಾನಿ ನರೇಂದ್ರ ಮೋದಿಯನ್ನು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಮಹಾತ್ಮಾಗಾಂಧಿ ಸರಿಸಮಾನಾಗಿ ಹೋಲಿಸಿ ಹೇಳಿಕೆ ನೀಡಿರುವುದು ಸರಿಯಲ್ಲ. ಸಾಂವಿಧಾನಿಕ ಹುದ್ದೆಯ ಹೊಂದಿ ಮೋದಿ ಅಂತಾರಾಷ್ಟ್ರೀಯ ಯುಗ ಪುರುಷ ಎಂಬಿತ್ಯಾದಿ ಶಬ್ದಗಳ ಮೂಲಕ ವರ್ಣಿಸಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಉಪರಾಷ್ಡ್ರಪತಿಯವರು ಕ್ಷಮೆ ಕೋರಬೇಕೆಂದು ಹರಿಪ್ರಸಾದ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.