ದೇಶದ ಸಂಸದರು ಮತ್ತು ಶಾಸಕರ ವಿರುದ್ಧ 5,175 ಕೇಸ್‌ಗಳು ಬಾಕಿ ಇದ್ದು, ಇನ್ನೂ ವಿಚಾರಣಾ ಹಂತದಲ್ಲಿಯೇ ಇವೆ. ಇದು 2022ರ ನವೆಂಬರ್ ತಿಂಗಳವರೆಗಿನ ಲೆಕ್ಕವಾಗಿದ್ದು, 2,116 ಪ್ರಕರಣಗಳು 5 ವರ್ಷಕ್ಕಿಂತ ಹೆಚ್ಚು ಅವಧಿಗೆ ಬಾಕಿ ಉಳಿದಿವೆ. ಅಂದರೆ ಒಟ್ಟಾರೆ ಪ್ರಕರಣದಲ್ಲಿ ಶೇ.40ಕ್ಕೂ ಹೆಚ್ಚು ಕೇಸ್ ಬಾಕಿ ಉಳಿದಂತಾಗಿವೆ. ಹೀಗಾಗಿಯೇ, ಗುರುವಾರ ಸುಪ್ರೀಂಕೋರ್ಟ್ ಈ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ತ್ವರಿತವಾಗಿ ಇತ್ಯರ್ಥ ಮಾಡಬೇಕು ಎಂದು ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಗೆ ಸೂಚನೆ ನೀಡಿದೆ.
ಸಂಸದರು ಮತ್ತು ಶಾಸಕರ ಮೇಲೆ ಇರುವ ಗಂಭೀರ ಪ್ರಕರಣಗಳನ್ನು ಗಮನದಲ್ಲಿ ಇರಿಸಿಕೊಂಡು, ದೋಷಿಗಳಾಗುವಂಥವರನ್ನು ಜೀವನಪೂರ್ತಿ ಚುನಾವಣೆಗೆ ಸ್ಪರ್ಧೆ ಮಾಡದಂತೆ ನಿಷೇಧ ಹೇರಬೇಕು ಎಂಬ ವಿಚಾರವಾಗಿಯೂ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್, ಆರಂಭದಲ್ಲಿ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವಂಥ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿದೆ. ಈ ಸಂಬಂಧ ಕೆಲವೊಂದು ಮಾರ್ಗಸೂಚಿಗಳನ್ನೂ ಹೊರಡಿಸಿದ್ದು, ಇದು ಸ್ವಾಗತಾರ್ಹವೇ ಆಗಿದೆ.
ಈ ಸಂದರ್ಭದಲ್ಲಿ ನ್ಯಾಯಾಲಯವು ಹಲವಾರು ಅಂಶಗಳ ಬಗ್ಗೆ ಗಮನಹರಿಸಿದೆ. ಅಂದರೆ, ರಾಜ್ಯಗಳಿಂದ ರಾಜ್ಯಕ್ಕೆ, ಜಿಲ್ಲೆಗಳಿಂದ ಜಿಲ್ಲೆಗೆ ಕೇಸುಗಳನ್ನು ಇತ್ಯರ್ಥಪಡಿಸುವಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನೂ ಗಮನಿಸಿದೆ. ಹೀಗಾಗಿ, ಇಂಥ ಪ್ರಕರಣಗಳು ಬೇಗನೇ ಇತ್ಯರ್ಥವಾಗಬೇಕು ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ. ಅಲ್ಲದೆ, ದೇಶಕ್ಕೇ ಅನ್ವಯವಾಗುವಂತೆ ಒಂದೇ ರೀತಿಯ ಮಾರ್ಗಸೂಚಿ ಹೊರಡಿಸುವುದು ಕಷ್ಟ. ಆದರೆ, ಆಯಾ ಹೈಕೋರ್ಟ್‌ಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬಹುದು ಎಂದಿದೆ.
ಇದಕ್ಕೆ ಪೂರಕವಾಗಿ ದೇಶದಲ್ಲಿರುವ ಎಲ್ಲ ಹೈಕೋರ್ಟ್‌ಗಳು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ಇರುವ ಗಂಭೀರ ಅಪರಾಧ ಪ್ರಕರಣಗಳ ವಿಚಾರಣಾ ಉಸ್ತುವಾರಿ ವಹಿಸಿಕೊಳ್ಳಬೇಕು. ಅದರಲ್ಲೂ ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆಯಾಗುವಂಥ ಪ್ರಕರಣಗಳನ್ನು ಆದ್ಯತೆಯಾಗಿ ಇರಿಸಿಕೊಂಡು ವಿಚಾರಣೆ ಮುಗಿಸಬೇಕು ಎಂದು ಸೂಚಿಸಿದೆ. ಅಷ್ಟೇ ಅಲ್ಲ, ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣಗಳ ಬಗ್ಗೆ ಸ್ವತಃ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಪೀಠವೇ ವಿಚಾರಣೆ ನಡೆಸಬೇಕು ಅಥವಾ ಮುಖ್ಯ ನ್ಯಾಯಮೂರ್ತಿಗಳಿಂದಲೇ ನಿಯೋಜಿತವಾಗ ಪೀಠವೂ ವಿಚಾರಣೆ ನಡೆಸಬಹುದು ಎಂದಿದೆ.
ಈ ಅಂಶಗಳ ಜತೆಗೆ ಇನ್ನಷ್ಟು ಮಾರ್ಗಸೂಚಿಯನ್ನೂ ಸುಪ್ರೀಂಕೋರ್ಟ್ ಹೊರಡಿಸಿದ್ದು, ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ತ್ವರಿತ ನ್ಯಾಯ ನೀಡುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಕ್ರಮ ಸ್ವಾಗತಾರ್ಹವೇ ಆಗಿದ್ದು, ಎಲ್ಲರೂ ಸಹಾಯ ನೀಡಬೇಕಾಗಿದೆ.