Advertisement
ಬಂಟ್ವಾಳ ತಾಲೂಕಿನ ಮೂರು ಹೋಬಳಿಗಳಲ್ಲಿ ವಿಸ್ತೀರ್ಣ ಲೆಕ್ಕಾಚಾರದಲ್ಲಿ ವಿಟ್ಲ ಹೋಬಳಿ ದೊಡ್ಡದು. ವಿಟ್ಲ ಹೋಬಳಿಯಲ್ಲಿ 23 ಗ್ರಾಮಗಳಿವೆ. ವಿಟ್ಲ ಹೋಬಳಿಯ ಕರೋಪಾಡಿ, ಮಾಣಿಲ ಮೊದಲಾದ ದೂರದ ಹಾಗೂ ಗಡಿಭಾಗದ ನಾಗರಿಕರು 45 ಕಿ.ಮೀ. ದೂರದಲ್ಲಿರುವ ಬಂಟ್ವಾಳದ ತಾಲೂಕು ಕೇಂದ್ರಕ್ಕೆ ಸಾಗುವುದು ವ್ಯಾವಹಾರಿಕವಾಗಿಯೂ ಆರ್ಥಿಕವಾಗಿಯೂ ನಷ್ಟ ದಾಯಕವಾಗಿದೆ. ಶಾಸಕರನ್ನು ಸಂಪರ್ಕಿಸಲು ಪುತ್ತೂರಿಗೂ, ಕಂದಾಯ ಇಲಾಖೆಗೆ ಬಂಟ್ವಾಳಕ್ಕೂ ಅಲೆದಾಡಬೇಕಾಗಿದೆ. ಜನಸಂಖ್ಯೆ ಆಧಾರದಲ್ಲಿ ಕಡಬ, ಮೂಡುಬಿದಿರೆ, ಮೂಲ್ಕಿ ತಾಲೂಕುಗಳಿಂದ ಅಧಿಕ ಜನಸಂಖ್ಯೆ ವಿಟ್ಲ ಹೋಬಳಿಯಲ್ಲಿದೆ. ಆ ಲೆಕ್ಕಾಚಾರದಲ್ಲಿ ವಿಟ್ಲ ಹೋಬಳಿಗೆ ತಾಲೂಕಾಗುವ ಅರ್ಹತೆಯಿದೆ.
Related Articles
ವಿಟ್ಲ ಹೋಬಳಿಯಲ್ಲಿ ಒಟ್ಟು 23 ಗ್ರಾಮಗಳಿವೆ. ಬಿಳಿಯೂರು, ಪೆರ್ನೆ, ಕೆದಿಲ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಟ್ನೂರು, ಕುಳ, ವೀರಕಂಬ, ಬೋಳಂತೂರು, ವಿಟ್ಲಮುಟ್ನೂರು, ಕೇಪು, ಪುಣಚ, ಪೆರುವಾಯಿ, ಮಾಣಿಲ, ಅಳಿಕೆ, ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು, ವಿಟ್ಲಪಟ್ನೂರು, ವಿಟ್ಲಕಸಬಾ ಗ್ರಾಮಗಳು ಒಳಪಟ್ಟಿವೆ.
Advertisement
ನಾಡಕಚೇರಿ ಸ್ಥಿತಿ ಶೋಚನೀಯವಿಟ್ಲ ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಯ ಸ್ಥಿತಿ ಶೋಚನೀಯವಾಗಿದೆ. 1986ರಲ್ಲಿ ಸ್ಥಾಪನೆಯಾದ ನಾಡಕಚೇರಿ ಕಟ್ಟಡ ಮುರಿದುಬೀಳುವ ಹಂತದಲ್ಲಿದೆ. ಕಟ್ಟಡದೊಳಗೆ ಪ್ರವೇಶಿಸಿದರೆ ಆಕಾಶ ಕಾಣುತ್ತದೆ. ಕಡತಗಳು, ದಾಖಲೆಗಳು ನೀರುಪಾಲು ಮತ್ತು ಗೆದ್ದಲು ಪಾಲಾಗುವ ಹಂತದಲ್ಲಿದೆ. ಈ ನಾಡಕಚೇರಿ ಕೇಂದ್ರದಲ್ಲಿ ಶೌಚಾಲಯವೂ ಇಲ್ಲ. ರಸ್ತೆಯಿಂದ ಕಚೇರಿಗೆ ಪ್ರವೇಶಿಸಲು ದಾರಿಯಿಲ್ಲ. ಪ್ರವಾಸಿಮಂದಿರದ ದಾರಿಯಲ್ಲಿ ತೆರಳಿ ಕಷ್ಟಪಡಬೇಕು. ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಇಲ್ಲದೆ ಇದ್ದರೆ ದಾಖಲೆಗಳು ಸಿಗುತ್ತವೆ. ಈ ಕಟ್ಟಡದ ಸುತ್ತಲೂ ಕಳೆ ತುಂಬಿಕೊಂಡಿದೆ. ಗೇಟ್ ತುಕ್ಕು ಹಿಡಿದಿದೆ. ಗೋಡೆ, ಆವರಣ ಗೋಡೆ ಶಿಥಿಲಗೊಂಡಿದೆ. ಸುಣ್ಣಬಣ್ಣ ಕಾಣದೇ ಗರಬಡಿದಂತಿದೆ. ಅಷ್ಟೇ ಅಲ್ಲ, ಈ ಜಾಗ ಕೃಷಿ ಇಲಾಖೆಗೆ ಸಂಬಂಧಿಸಿದ್ದು. ಹಿಂದೆ ಗ್ರಾಮ ಚಾವಡಿಯಾಗಿದ್ದ 23 ಸೆಂಟ್ಸ್ ಜಾಗದಲ್ಲಿ ಕಂದಾಯ ನಿರೀಕ್ಷಕರ ಕಚೇರಿಯಿದೆ. ಇದರಲ್ಲಿ ಗ್ರಾಮಕರಣಿಕರ ಕಚೇರಿಯೂ ಇದೆ. ಈ ಕಟ್ಟಡವೂ ಸುಭದ್ರವಾಗಿಲ್ಲ. ಹಳೆಯ ಅಂದಕೆಟ್ಟ ಕಟ್ಟಡವಾಗಿದ್ದು, ಹೋಬಳಿ ಕೇಂದ್ರದ ಈ ಕಚೇರಿಗಳು ನಾಲಾಯಕ್ ಆಗಿವೆ. ಸಬ್ ರಿಜಿಸ್ಟ್ರಾರ್ ಕಚೇರಿಯೂ ಹಳೆಯದು. ಇಲ್ಲೂ ದಾಖಲೆಗಳು ಗೆದ್ದಲು ಹಿಡಿಯುತ್ತಿವೆ. ಸಂಪೂರ್ಣ ನಿರ್ಲಕ್ಷ್ಯ
ಹೋಬಳಿ ಕೇಂದ್ರದಲ್ಲಿ ಮಿನಿವಿಧಾನಸೌಧ ಆಗಬೇಕೆಂಬ ಕೂಗು ಇದೆ. ತಾ.ಪಂ.ಗೆ ಸಂಬಂಧಿಸಿದ ಜಾಗವೂ ಇದೆ. ಆ ಜಾಗದಲ್ಲಿ ಕಾಡು ಬೆಳೆದಿದೆ. ಯಾರಿಗೂ ಉಪಯೋಗವಿಲ್ಲದ ಈ ಜಾಗವನ್ನು ಸದ್ಬಳಕೆ ಮಾಡಬಹುದೆಂಬ ಅಭಿಪ್ರಾಯ ಹಲವರದ್ದು. – ಉದಯಶಂಕರ್ ನೀರ್ಪಾಜೆ